BANTWAL
ಶರತ್ ಸಾವನ್ನು ಮುಚ್ಚಿಟ್ಟು ಕಾರ್ಯಕ್ರಮ ನಡೆಸಿದ ಸಿದ್ಧರಾಮಯ್ಯರಿಗೆ ಆ ಶಾಪ ತಟ್ಟಲಿದೆ….ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ..
ಬಂಟ್ವಾಳದ ಸಚಿಪಮುಡ್ನೂರು ಗ್ರಾಮದ ಕೆಂದೂರಿನ ಶರತ್ ಮನೆಗೆ ಭೇಟಿ ನೀಡಿದ ಬಿ.ಎಸ್.ವೈ ಸರಕಾರದ ಮೇಲಿನ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು. ದುಷ್ಕರ್ಮಿಗಳ ತಲವಾರು ಏಟಿಗೆ ಗಂಭೀರವಾಗಿ ಗಾಯಗೊಂಡ ಶರತ್ ಸಾವಿಗೀಡಾಗಿ 20 ಗಂಟೆಗಳು ಕಳೆದಿದ್ದರೂ, ಕಾಂಗ್ರೇಸ್ ಪಕ್ಷದ ಸಮಾವೇಶವಿದೆ ಎನ್ನುವ ಕಾರಣಕ್ಕೆ ಶವವನ್ನು ಆಸ್ಪತ್ರೆಯಲ್ಲೇ ಇರಿಸುವಂತಹ ಉದ್ಧಟತನವನ್ನು ಸರಕಾರ ತೋರಿದ್ದು, ಇದೀಗ ಈ ವಿಚಾರ ದೃಢಪಟ್ಟಿದೆ ಎಂದ ಅವರು ಮುಖ್ಯಮಂತ್ರಿ ಸಿದ್ಧರಾಮಯ್ಯನವರಿಗೆ ಈ ಶಾಪ ತಟ್ಟಲಿದೆ ಎಂದರು. ಶರತ್ ಹಂತಕರವನ್ನು ಬಂಧಿಸುವ ಬದಲು ಹಿಂದೂ ಸಂಘಟನೆಗಳ ಮುಖಂಡರನ್ನು ಬಂಧಿಸುವಂತೆ ಆದೇಶ ನೀಡುವ ಮುಖ್ಯಮಂತ್ರಿಗಳ ಭಂಡರಂತೆ ವರ್ತಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ ಅವರು ಕೇರಳದಿಂದ ಜನ ತರಿಸಿ ರಾಜ್ಯದಲ್ಲಿ ಕೊಲೆ ನಡೆಸುವ ಪ್ರಕ್ರಿಯೆ ನಡೆಯುತ್ತಿದ್ದು, ಕೆ.ಎಫ್.ಡಿ . ಪಿ.ಎಫ್.ಐ ಹಾಗೂ ಎಸ್.ಡಿ.ಪಿ.ಐ ಸಂಘಟನೆಗಳನ್ನು ಕೂಡಲೇ ನಿಶೇಧಿಸಬೇಕೆಂದು ಅವರು ಇದೇ ಸಂದರ್ಭದಲ್ಲಿ ಆಗ್ರಹಿಸಿದರು.
ಮಂಗಳೂರಿನಲ್ಲಿ ಇಂದು ಕರೆದಿರುವ ಶಾಂತಿ ಸಭೆಯನ್ನು ಬಹಿಷ್ಕರಿಸುವ ನಿರ್ಧಾರವನ್ನು ಬಿಜೆಪಿ ತೆಗೆದುಕೊಂಡಿದ್ದು, ಸಭೆಯಲ್ಲಿ ಮತ್ತೆ ಅಶಾಂತಿಯ ವಾತಾವರಣವನ್ನು ನಿರ್ಮಿಸುವ ಷಡ್ಯಂತ್ರವೂ ಇದೆ ಎಂದು ಯಡಿಯೂರಪ್ಪ ಆರೋಪಿಸಿದರು. ಸಂಸದರಾದ ನಳಿನ್ ಕುಮಾರ್ ಕಟೀಲ್, ಶೋಭಾ ಕರಂದ್ಲಾಜೆ ಸೇರಿದಂತೆ ಹಲವರು ಉಪಸ್ಥಿತರಿದ್ದರು.