UDUPI
ವಸತಿ ಯೋಜನೆಗಳಿಗೆ ನಿವೇಶನ ಸಿದ್ದಪಡಿಸಿ- ಪ್ರಮೋದ್ ಮಧ್ವರಾಜ್

ವಸತಿ ಯೋಜನೆಗಳಿಗೆ ನಿವೇಶನ ಸಿದ್ದಪಡಿಸಿ- ಪ್ರಮೋದ್ ಮಧ್ವರಾಜ್
ಉಡುಪಿ,ಅಕ್ಟೋಬರ್ 27: ಜಿಲ್ಲೆಯಲ್ಲಿ ವಸತಿ ಯೋಜನೆಯಡಿ 2016-17ನೇ ಸಾಲಿನಲ್ಲಿ ಒಟ್ಟು 4116 ಗುರಿ ನಿಗದಿಪಡಿಸಿದ್ದು 3481 ಫಲಾನುಭವಿಗಳನ್ನು ಆಯ್ಕೆ ಮಾಡಲಾಗಿದೆ ಎಂದು ಯೋಜನಾ ನಿರ್ದೇಶಕರಾದ ನಯನಾ ಅವರು ಮಾಹಿತಿ ನೀಡಿದರು.
ಅವರು ಇಂದು ಉಡುಪಿ ಜಿಲ್ಲಾ ಪಂಚಾಯತ್‍ನ ವಿ.ಎಸ್.ಆಚಾರ್ಯ ಸಭಾಂಗಣದಲ್ಲಿ ರಾಜ್ಯ ಮೀನುಗಾರಿಕೆ, ಯುವಜನ ಸಬಲೀಕರಣ ಮತ್ತು ಕ್ರೀಡಾ ಸಚಿವರು ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಅವರ ಅಧ್ಯಕ್ಷತೆಯಲ್ಲಿ ನಡೆದ ತ್ರೈಮಾಸಿಕ ಕೆ.ಡಿ.ಪಿ ಸಭೆಗೆ ಮಾಹಿತಿ ನೀಡುತ್ತಿದ್ದರು.
ಅರ್ಹರಿಗೆ ನಿವೇಶನ ಮತ್ತು ವಸತಿ ನೀಡುವ ಉದ್ದೇಶದ ವಸತಿ ಯೋಜನೆಗಳ ಬಗ್ಗೆ ಮಾಹಿತಿ ನೀಡಿದ ಅವರು, 2017-18ನೇ ಸಾಲಿನಲ್ಲಿ 97 ನಿವೇಶನ ರಹಿತರಿಗೆ ಹಕ್ಕುಪತ್ರ ನೀಡಲಾಗಿದೆ. ಪ್ರಸ್ತುತ 90 ಹಕ್ಕುಪತ್ರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ವಸತಿ ಯೋಜನೆಗಾಗಿ 11.05 ಎಕರೆ ಜಮೀನು ಗುರುತಿಸಲಾಗಿದ್ದು ಫಲಾನುಭವಿ ಆಯ್ಕೆ, ಲೇಔಟ್ ರಚನೆ ಪ್ರಕ್ರಿಯೆ ಮಾಡಿ ಪ್ರಸ್ತಾವನೆ ಸಲ್ಲಿಸಲಾಗುವುದು.
ಸರ್ಕಾರಿ ಸ್ಥಳ ಲಭ್ಯವಿಲ್ಲದ ಸ್ಥಳದಲ್ಲಿ ಎಕರೆಗೆ 9 ಲಕ್ಷ ರೂ.ಗಳಂತೆ ಖಾಸಗಿ ಸ್ಥಳದಲ್ಲೂ ನಿವೇಶನಕ್ಕೆ ಸೂಕ್ತ ಸ್ಥಳ ಖರೀದಿಸಲು ನಿರ್ಧರಿಸಲಾಗಿದೆ. 94 ಸಿ, 94ಸಿಸಿಯಡಿ ಹಕ್ಕುಪತ್ರ ಪಡೆದ ಪರಿಶಿಷ್ಟ ಜಾತಿ, ಪಂಗಡದವರು ಅಂಬೇಡ್ಕರ್ ವಸತಿ ಯೋಜನೆಯಡಿ ಮನೆಗಾಗಿ ಗ್ರಾಮ ಪಂಚಾಯತ್‍ಗಳಿಗೆ ಕೂಡಲೇ ಅರ್ಜಿ ಸಲ್ಲಿಸಲು ಮಾಹಿತಿ ನೀಡಿ ಎಂದು ಈ ಸಂದರ್ಭದಲ್ಲಿ ಸಚಿವರು ಸೂಚನೆ ನೀಡಿದರು.

ಕಾರ್ಮಿಕ ಇಲಾಖೆಯಿಂದ ಜಿಲ್ಲೆಯಲ್ಲಿ 27,109 ಕಾರ್ಮಿಕರನ್ನು ದಾಖಲಿಸಿ ಸವಲತ್ತುಗಳನ್ನು ನೀಡಲಾಗಿದೆ ಎಂದು ಕಾರ್ಮಿಕ ಇಲಾಖೆ ಸಹಾಯಕ ಆಯುಕ್ತರು ಸಭೆಗೆ ಮಾಹಿತಿ ನೀಡಿದರು. ಕಾರ್ಮಿಕರಿರುವ ಪ್ರದೇಶಗಳಿಗೆ ಭೇಟಿ ನೀಡಿ ಅವರಿಗೆ ದೊರಕುವ ಸೌಲಭ್ಯಗಳ ಬಗ್ಗೆ, ಅವರ ಹಕ್ಕುಗಳ ಬಗ್ಗೆ ಮಾಹಿತಿ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದರು.
ಈ ಸಂದರ್ಭದಲ್ಲಿ ವಲಸೆ ಕಾರ್ಮಿಕರಿಗೆ ಸ್ಥಳೀಯ ಆಧಾರ್ ಕಾರ್ಡ್ ಬೇಡಿಕೆಯನ್ನು ಇಡದಂತೆ ಕಾರ್ಮಿಕರಿಗೆ ಮೀಸಲಿರುವ ಸೌಲಭ್ಯಗಳನ್ನು ಅರ್ಹರಿಗೆ ನೀಡಿ ಎಂದು ಸಚಿವರು ಈ ಸಂದರ್ಭದಲ್ಲಿ ಕಾರ್ಮಿಕ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಈವರೆಗೆ ಒಟ್ಟು 1869 ಅರ್ಜಿಗಳನ್ನು ವಿಲೇ ಮಾಡಲಾಗಿದ್ದು 2,07,05,139 ಮೊತ್ತವನ್ನು ಶೈಕ್ಷಣಿಕ ಧನಸಹಾಯ, ಮದುವೆ ಧನಸಹಾಯ, ಹೆರಿಗೆ, ವೈದ್ಯಕೀಯ, ಪಿಂಚಣಿ ಸಹಾಯಧನವನ್ನು ವಿತರಿಸಲಾಗಿದೆ ಎಂದು ಮಾಹಿತಿ ನೀಡಿದರು.
ಸುವರ್ಣಗ್ರಾಮ ಯೋಜನೆಯಡಿ ಎಲ್ಲ ಕ್ಷೇತ್ರಗಳಲ್ಲಿ ಕಾಮಗಾರಿ ಪ್ರಗತಿಯಲ್ಲಿದ್ದು, ಎರಡು ಕಾಮಗಾರಿಯ ಕ್ರಿಯಾಯೋಜನೆ ಬಾಕಿ ಇದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು. ಜಿಲ್ಲಾಧಿಕಾರಿ ಕಚೇರಿ ಸಂಕಿರಣದ ವ್ಯಾಪ್ತಿಯಲ್ಲಿ ವಸತಿ ಸಹಿತ ತರಬೇತಿ ಕೇಂದ್ರ ಒಂದು ಕೋಟಿ ರೂ.ಗಳಲ್ಲಿ ರಚಿಸಲಾಗಿದ್ದು ಡಿಸೆಂಬರ್‍ನಲ್ಲಿ ಉದ್ಘಾಟನೆಗೊಳ್ಳಲಿದೆ.
ಪಡಿತರ ಕಾರ್ಡ್ ವಿತರಣೆಯಲ್ಲಿ ಸಮಸ್ಯೆ ಪರಿಹರಿಸಲು ಪಿಡಿಒ ಮತ್ತು ಆಹಾರ ಇಲಾಖೆಯ ಅಧಿಕಾರಿಗಳ ಸಭೆ ನಡೆಸಲು ಸೂಚಿಸಿದ ಸಚಿವರು, ದೀನದಯಾಳ್ ವಿದ್ಯುದ್ಧೀಕರಣ ಯೋಜನೆಯಡಿ ವಿದ್ಯುತ್ ಸಂಪರ್ಕಕ್ಕೆ ಬಿಪಿಎಲ್ ಕಾರ್ಡ್ ಮಾತ್ರ ಸಾಕು ಎಂದ ಅವರು, ತಕ್ಷಣವೇ ಈ ಸಂಬಂಧ ಎಲ್ಲ ಪಿಡಿಒ ಗಳಿಗೆ ಸುತ್ತೋಲೆ ಕಳಿಸಲು ಅವರು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗೆ ಸೂಚನೆ ನೀಡಿದರು.