DAKSHINA KANNADA
ಮುಲ್ಕಿ-ಮೂಡಬಿದಿರೆ ಕ್ಷೇತ್ರಕ್ಕೆ ಐವನ್ ಡಿಸೋಜಾ ಆಯ್ಕೆಗೆ ಕ್ರೈಸ್ತ ಸಮುದಾಯದ ಬ್ಯಾಟಿಂಗ್, ಪ್ರತಿಭಟನೆಗೆ ನಿರ್ಧಾರ
ಮುಲ್ಕಿ-ಮೂಡಬಿದಿರೆ ಕ್ಷೇತ್ರಕ್ಕೆ ಐವನ್ ಡಿಸೋಜಾ ಆಯ್ಕೆಗೆ ಕ್ರೈಸ್ತ ಸಮುದಾಯದ ಬ್ಯಾಟಿಂಗ್, ಪ್ರತಿಭಟನೆಗೆ ನಿರ್ಧಾರ
ಮಂಗಳೂರು, ಎಪ್ರಿಲ್ 3 : ಕಳೆದ ಬಾರಿಯ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಮುಂದಿನ ಬಾರಿ ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದಿದ್ದ ದಕ್ಷಿಣಕನ್ನಡ ಜಿಲ್ಲೆಯ ಮುಲ್ಕಿ-ಮೂಡಬಿದಿರೆ ಕ್ಷೇತ್ರದ ಶಾಸಕ ಅಭಯಚಂದ್ರ ಜೈನ್ ಈ ಬಾರಿ ಮತ್ತೆ ಸ್ಪರ್ಧಿಸಲು ರೆಡಿಯಾಗಿದ್ದಾರೆ.
ಆದರೆ ಅಂದಿನ ಮಾತನ್ನು ನಿಜವೆಂದೇ ತಿಳಿದ ಯುವ ಕಾಂಗ್ರೇಸ್ ಮುಖಂಡ ಮಿಥುನ್ ರೈ ಹಾಗೂ ವಿಧಾನ ಪರಿಷತ್ ಮುಖ್ಯ ಸಚೇತಕ ಐವನ್ ಡಿಸೋಜಾ ಈ ಕ್ಷೇತ್ರಕ್ಕಾಗಿ ಕಳೆದ ಐದು ವರ್ಷಗಳಿಂದ ಹದ್ದಿನ ಕಣ್ಣಿಟ್ಟಿದ್ದರು.
ಇಬ್ಬರೂ ನಾಯಕರು ತನಗೆ ಸಿಕ್ಕಿದ ಅವಕಾಶವನ್ನು ಮುಲ್ಕಿ-ಮೂಡಬಿದಿರೆಯ ಜನರನ್ನು ಓಲೈಸುವ ಹಲವು ಪ್ರಯತ್ನಗಳನ್ನು ನಡೆಸಿದ್ದರು.
ಆದರೆ ಶಾಸಕ ಅಭಯಚಂದ್ರ ಜೈನ್ ಇದೀಗ ಏಕಾಏಕಿ ತಾನು ಶಾಸಕ ಸ್ಥಾನಕ್ಕೆ ಸ್ಪರ್ಧಿಸುತ್ತೇನೆ ಎಂದಾಗ ಇಬ್ಬರು ನಾಯಕರಿಗೆ ದಿಗಿಲು ಬಡಿದಂತಾಗಿದೆ.
ಆದರೆ ತನ್ನ ಪ್ರಯತ್ನದಿಂದ ಹಿಂದೆ ಸರಿಯಲು ಇಚ್ಛಿಸದ ಐವನ್ ಡಿಸೋಜಾ ಇದೀಗ ತನ್ನ ಜಾತಿ ಕಾರ್ಡ್ ಬಳಸಿಕೊಂಡು ಕ್ಷೇತ್ರದ ಅಭ್ಯರ್ಥಿಯಾಗಲು ಹವಣಿಸುತ್ತಿರುವ ವಿಚಾರ ಬೆಳಕಿಗೆ ಬಂದಿದೆ.
ಮೂಲ್ಕಿ-ಮೂಡಬಿದಿರೆ ಕ್ಷೇತ್ರದಲ್ಲಿ ಕ್ರೈಸ್ತ ಸಮುದಾಯ ಹೆಚ್ಚಿನ ಸಂಖ್ಯೆಯಲ್ಲಿದ್ದು, ಇದೀಗ ಈ ಎಲ್ಲಾ ಕ್ರೈಸ್ತ ಸಮುದಾಯ ತನ್ನ ಪರ ಬ್ಯಾಟಿಂಗ್ ನಡೆಸುವ ಪಿಚ್ಚನ್ನು ಐವನ್ ಡಿಸೋಜಾ ಈಗಾಗಲೇ ರೆಡಿ ಮಾಡಿದ್ದಾರೆ.
ಕ್ರೈಸ್ತ ಧರ್ಮಗುರುಗಳೊಂದಿಗೆ ಸೇರಿಕೊಂಡು ಮುಲ್ಕಿ-ಮೂಡಬಿದಿರೆಗೆ ತನ್ನನ್ನೇ ಆಭ್ಯರ್ಥಿಯಾಗಿ ಆಯ್ಕೆ ಮಾಡಬೇಕೆಂಬ ಒತ್ತಡ ಹೇರುವ ಪ್ಲಾನ್ ರಚಿಸಿಕೊಂಡಿದ್ದಾರೆ.
ಇದಕ್ಕಾಗಿ ಈಗಾಗಲೇ ಹಲವು ಸುತ್ತಿನ ಗುಪ್ತ ಚರ್ಚೆಗಳು ನಡೆದಿದ್ದು, ಇದೀಗ ತನ್ನ ಶಕ್ತಿ ಪ್ರದರ್ಶನಕ್ಕೆ ಸಿದ್ಧತೆ ನಡೆಸಿದ್ದಾರೆ.
ಎಪ್ರಿಲ್ 9 ಅಥವಾ 10 ರಂದು ಶಕ್ತಿ ಪ್ರದರ್ಶನದ ವೇದಿಕೆ ಸಿದ್ಧಗೊಳ್ಳಲಿದ್ದು, ಕ್ರೈಸ್ತ ಸಮುದಾಯ ಸೇರಿಕೊಂಡು ಐವನ್ ಪರವಾಗಿ ಬೃಹತ್ ಪ್ರತಿಭಟನೆ ನಡೆಯುವ ಸಾಧ್ಯತೆಯಿದೆ.
ಈ ಪ್ರತಿಭಟನೆ ಮೂಡಬಿದಿರೆ ಅಥವಾ ಮಂಗಳೂರಿನ ಕಾಂಗ್ರೇಸ್ ಕಛೇರಿ ಮುಂಭಾಗದಲ್ಲಿ ನಡೆಯುವ ಸಾಧ್ಯತೆಯಿದೆ ಎನ್ನುವ ಮಾಹಿತಿ ಕಾಂಗ್ರೇಸ್ ಮೂಲಗಳಿಂದ ತಿಳಿದು ಬಂದಿದೆ.
ಮಂಗಳೂರು ದಕ್ಷಿಣ ಕ್ಷೇತ್ರಕ್ಕೆ ಕಣ್ಣು ಹಾಕಿದ್ದ ಐವನ್ ಗೆ ಜೆ.ಆರ್.ಲೋಬೋ ತಡೆಯೊಡ್ಡಿದ ಹಿನ್ನಲೆಯಲ್ಲಿ ಇದೀಗ ಮುಲ್ಕಿ-ಮೂಡಬಿದಿರೆಯಲ್ಲಿ ತನ್ನ ಅದೃಷ್ಟ ಪರೀಕ್ಷೆಗೆ ಐವನ್ ಮುಂದಾಗಿದ್ದು, ಮತ್ತೆ ಐವನ್-ಅಭಯ್ ನಡುವೆ ಮನಸ್ತಾಪ ತೀವೃಗೊಳ್ಳುವ ಲಕ್ಷಣ ಗೋಚರಿಸುತ್ತಿದೆ.