DAKSHINA KANNADA
ಮಂಗಳೂರಿನ ಅತ್ತಾವರ ಆದಾಯ ತೆರಿಗೆ ಕಚೇರಿಯ ಮೇಲೆ ದಾಳಿ ನಡೆಸಿದ ಕಾಂಗ್ರೆಸ್ ಕಾರ್ಯಕರ್ತರ ವಿರುದ್ಧ ಪೊಲೀಸರಿಂದ ಪ್ರಕರಣ ದಾಖಲು

ಮಂಗಳೂರು ಅಗಸ್ಟ್ 03 : ಇಂಧನ ಸಚಿವ ಡಿಕೆ ಶಿವಕುಮಾರ್ ಅವರ ಮನೆ ಹಾಗೂ ಕಚೇರಿ ಮೇಲೆ ಐಟಿ ದಾಳಿ ಖಂಡಿಸಿ ಮಂಗಳೂರಿನ ಅತ್ತಾವರ ಆದಾಯ ತೆರಿಗೆ ಕಚೇರಿಯ ಮೇಲೆ ದಾಳಿ ನಡೆಸಿದ ಕಾಂಗ್ರೆಸ್ ಕಾರ್ಯಕರ್ತರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಆದಾಯ ತೆರಿಗೆ ಇಲಾಖೆಯ ಸೊತ್ತಿಗೆ ಹಾನಿಯಾದ ಬಗ್ಗೆ ಪಾಂಡೇಶ್ವರ ಠಾಣೆಯ ಪೊಲೀಸರು ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿದ್ದಾರೆ.
ಈ ನಡುವೆ ಆದಾಯ ತೆರಿಗೆ ಅಧಿಕಾರಿಗಳು ಕೂಡ ಕಚೇರಿಯಲ್ಲಿ ದಾಂಧಲೆ ನಡೆಸಿದ ಕಾಂಗ್ರೆಸ್ ಕಾರ್ಯಕರ್ತರ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ.

ಈ ಹಿನ್ನೆಲೆಯಲ್ಲಿ ಪಾಂಡೇಶ್ವರ ಠಾಣೆಯ ಪೊಲೀಸರು ಹನ್ನೊಂದು ಮಂದಿ ಕಾಂಗ್ರೆಸ್ ಕಾರ್ಯಕರ್ತರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಮಂಗಳೂರು ಪೊಲೀಸ್ ಕಮಿಷನರೆಟ್ ವ್ಯಾಪ್ತಿಯಲ್ಲಿ ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ದೃಷ್ಟಿಯಿಂದ ಸಾರ್ವಜನಿಕ ಶಾಂತಿ ನೆಮ್ಮದಿಗೆ ಭಂಗ ಉಂಟು ಮಾಡುವಂತಹ ಅಹಿತಕರ ಘಟನೆಗಳು ಮರುಕಳಿಸದಿರಲಿ ಎಂದು ನಿನ್ನೆ ಮುಂಜಾನೆಯಿಂದಲೇ ಸೆಕ್ಷನ್ ಕೆಪಿ 35 ಅನ್ವಯ ನಿರ್ಬಂಧಕಾಜ್ಞೆ ವಿಧಿಸಲಾಗಿತ್ತು .ಈ ನಿರ್ಬಂಧಕಾಜ್ಞೆ ನಡುವೆಯೂ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ಹಾಗೂ ದಾಂಧಲೆ ನಡೆಸಿರುವುದಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದೆ. ಈ ಕಾನೂನು ಉಲ್ಲಂಘನೆ ಅಡಿಯಲ್ಲಿಯೇ ಕಾಂಗ್ರೆಸ್ ಕಾರ್ಯಕರ್ತರ ವಿರುದ್ಧ ಪ್ರಕರಣ ದಾಖಲಿಸುವಂತೆ ಒತ್ತಾಯ ಕೇಳಿಬರುತ್ತಿದೆ.