LATEST NEWS
ಪೇಜಾವರ ಶ್ರೀ ಆಸ್ಪತ್ರೆಯಿಂದ ಬಿಡುಗಡೆ
ಉಡುಪಿ, ಅಗಸ್ಟ್ 22 : ಭಾನುವಾರ ಹರ್ನಿಯಾ ಆಪರೇಷನ್ ಗೆ ಒಳಗಾಗಿದ್ದ ಪೇಜಾವರ ಶ್ರೀ ಇಂದು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಮಣಿಪಾಲ ಕೆಎಂಸಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ವಿಶ್ವೇಶತೀರ್ಥರು ಉಡುಪಿ ಕೃಷ್ಣಮಠಕ್ಕೆ ಆಗಮಿಸಿದರು.ಈ ಸಂದರ್ಭದಲ್ಲಿ ಪ್ರತಿಕ್ರೀಯಿಸಿದ ಪೇಜಾವರ ಶ್ರೀ ಗಳು ನಾನು ಈಗ ಆರೋಗ್ಯವಾಗಿದ್ದೇನೆ, ಹೆಚ್ಚು ಮಾತನಾಡಬಾರದೆಂದು ವೈದ್ಯರು ಹೇಳಿದ್ದಾರೆ.ವೈದ್ಯರು ಆಸ್ಪತ್ರೆಯಲ್ಲಿ ಚೆನ್ನಾಗಿ ನೋಡಿಕೊಂಡರು ಎಂದಿದ್ದಾರೆ.ಕಳೆದ ಒಂದು ತಿಂಗಳಿಂದ ಪೇಜಾವರ ಸ್ವಾಮೀಜಿ ಅವರಿಗೆ ಹರ್ನಿಯಾ ನೋವು ಕಾಣಿಸಿಕೊಳ್ಳುತ್ತಿತ್ತು. ವೈದ್ಯರು ಶಸ್ತ್ರಚಿಕಿತ್ಸೆ ಒಳಪಡಿಸಬೇಕು ಎಂದು ಒತ್ತಡ ಹಾಕಿದ ನಂತರ ಸ್ವಾಮೀಜಿಯವರು ಶಸ್ತ್ರಚಿಕಿತ್ಸೆಗೆ ಒಪ್ಪಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಮಣಿಪಾಲ ಕೆಎಂಸಿಯಲ್ಲಿ ಶಸ್ತ್ರಚಿಕಿತ್ಸೆ ಮಾಡಲಾಗಿತ್ತು. ಶ್ರೀಕೃಷ್ಣ ಮಠದ ಸಂಪ್ರದಾಯದಂತೆ ಪರ್ಯಾಯ ಪೀಠವೇರಿದ ಸ್ವಾಮಿಜಿಗಳು 2 ವರ್ಷಗಳ ಕಾಲ ಮಠದಿಂದ ಹೊರಗೆ ಹೋಗಲು ನಿರ್ಭಂಧವಿದೆ. ಈ ಹಿನ್ನಲೆಯಲ್ಲಿ ಸುಮಾರು 1 ವರ್ಷಗಳ ಕಾಲದಿಂದ ಹರ್ನಿಯಾ ದ ನೋವಿನಿಂದ ಶಸ್ತ್ರಚಿಕಿತ್ಸೆಯನ್ನು ಪೇಜಾವರ ಶ್ರೀಗಳು ಮುಂದೂಡುತ್ತಾ ಬಂದಿದ್ದರು. ಆದರೆ ಇತ್ತೀಚೆಗೆ ನೋವು ಜಾಸ್ತಿಯಾದ ಕಾರಣ, ಅಷ್ಟಮಠದ ಎಲ್ಲಾ ಸ್ವಾಮಿಜಿಗಳು ಸಮಾಲೋಚನೆ ನಡೆಸಿ, ಪೇಜಾವರ ಶ್ರೀ ಗಳ ಮನವೊಲಿಸಿದ ಹಿನ್ನಲೆಯಲ್ಲಿ ಶ್ರೀಗಳು ಈ ಶಸ್ತ್ರ ಚಿಕಿತ್ಸೆಗೆ ಒಪ್ಪಿಗೆಯನ್ನು ಸೂಚಿಸಿದ್ದರು.
ಪೇಜಾವರ ಸ್ವಾಮೀಜಿ ಅವರು ವಿಶ್ರಾಂತಿಯಲ್ಲಿರುವಾಗ ಕಿರಿಯ ಶ್ರೀಪಾದರು ಶ್ರೀಕೃಷ್ಣನ ಪೂಜಾ ಕೈಂಕರ್ಯವನ್ನು ನೆರವೇರಿಸುತ್ತಿದ್ದಾರೆ. ಒಟ್ಟಿನಲ್ಲಿ ಹಿರಿಯ ಪೇಜಾವರ ಶ್ರೀಗಳು ಶೀಘ್ರ ಗುಣಮುಖವಾಗಿ ಬರಲಿ ಮತ್ತೆ ತನ್ನ ದೈನಂದಿನ ಪೂಜಾ ಕೈಂಕರ್ಯಗಳಲ್ಲಿ ಪಾಲ್ಗೊಳ್ಳಲಿ ಎಂದು ಲಕ್ಷಾಂತರ ಮಂದಿ ಹಾರೈಸುತ್ತಿದ್ದಾರೆ.ಶ್ರೀ ಕೃಷ್ಣ ಮಠದಲ್ಲಿ ಪರ್ಯಾಯ ಪೇಜಾವರ ಶ್ರೀ ವಿಶ್ವೇಶ ತೀರ್ಥ ಶ್ರೀಪಾದರು ಮಣಿಪಾಲ ಕೆ.ಎಮ್.ಸಿ ಆಸ್ಪತ್ರೆಯಲ್ಲಿ ಯಶಸ್ವಿಯಾಗಿ ಶಸ್ತ್ರ ಚಿಕಿತ್ಸೆಯನ್ನು ಪೂರೈಸಿಕೊಂಡು ವೈದ್ಯರ ಸಲಹೆಯಂತೆ ವಿಶ್ರಾಂತಿಯೊಂದಿಗೆ ತಮ್ಮ ದೈನಂದಿನ ಚಟುವಟಿಕೆಯಲ್ಲಿ ನಿರತರಾಗಿದ್ದಾರೆ.