DAKSHINA KANNADA
ಪುತ್ತೂರಲ್ಲೊಂದು ಯೋಧರ ದೇಗುಲ…
ಪುತ್ತೂರು,ಅಗಸ್ಚ್ 14: ವಿಶ್ವದ ಅತೀ ಎತ್ತರದ ಯುದ್ಧ ಭೂಮಿಗಳಲ್ಲಿ ಒಂದಾದ ಸಿಯಾಚಿನ್ ನಲ್ಲಿರುವಂತೆ ಪುತ್ತೂರಿನಲ್ಲೂ ಯೋಧರಿಗಾಗಿ ಒಂದು ದೇವಾಲಯ ನಿರ್ಮಾಣಗೊಂಡಿದೆ. ಸೇನೆಯಲ್ಲಿ ನಿರಂತರವಾಗಿ ಪ್ರಾಣ ಕೈಯಲ್ಲಿ ಹಿಡಿದು ದೇಶದ ಜನರನ್ನು ಕಾಪಾಡುತ್ತಿರುವ ಸೈನಿಕ ಸದಾ ಅಮರ ಎನ್ನುವ ಸಂದೇಶ ಸಾರುವ ದೇಗುಲ ಇದಾಗಿದ್ದು, ವರ್ಷದ 365 ದಿನವೂ ಇಲ್ಲಿ ಜ್ಯೋತಿ ಸದಾ ಪ್ರಜ್ವಲಿತವಾಗಿರಲಿದೆ.
ಹೌದು ನಾವಿಲ್ಲಿ ವಿವರಿಸುತ್ತಿರೋದು ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ಲೋಕಾರ್ಪಣೆಗಾಗಿ ಸಿದ್ಧಗೊಂಡಿರುವ ಯೋಧರ ದೇಗುಲ. ಮಳೆ, ಚಳಿ, ಬಿಸಿಲು ಹೀಗೆ ಎಲ್ಲಾ ವಾತಾವರಣದಲ್ಲೂ ತನ್ನ ಪ್ರಾಣವನ್ನೂ ಲೆಕ್ಕಿಸದೆ ದೇಶದ ಜನರನ್ನು ಕಾಯುತ್ತಿರುವ ಯೋಧರು ಯಾವತ್ತಿಗೂ ಅಮರರು ಎನ್ನುವ ಸಂದೇಶವನ್ನು ಈ ದೇಗುವ ಮುಂದಿನ ದಿನಗಳಲ್ಲಿ ಸಾರಲಿದೆ. ಜಗತ್ತಿನ ಅತೀ ಎತ್ತರದ ಯುದ್ಧಭೂಮಿ ಸಿಯಾಚಿನ್ ನಲ್ಲಿ ಯಾವ ರೀತಿಯಲ್ಲಿ ಓಪಿ ಬಾಬನ ಮಂದಿರವಿದೆಯೇ ಅದೇ ರೀತಿಯಲ್ಲಿ ಪುತ್ತೂರಿನಲ್ಲಿ ನಿರ್ಮಾಣಗೊಂಡ ಈ ಸ್ಮಾರಕವಿರಲಿದೆ.
ಪುತ್ತೂರಿನಲ್ಲಿ ಸಿದ್ಧಗೊಂಡಿರುವ ಈ ಅಮರ್ ಜವಾನ್ ಜ್ಯೋತಿ ದೇಶದ ಮೂರನೇ ಅಮರ್ ಜವಾನ್ ಜ್ಯೋತಿ ಸ್ಮಾರಕವಾಗಿಯೂ ಹೆಸರು ಪಡೆದಿದೆ. ವರ್ಷದ 365 ದಿನವೂ 24 ಗಂಟೆಗಳ ಕಾಲ ಸದಾ ಕಾಲ ಉರಿಯಲಿರುವ ಸ್ಮಾರಕದ ಈ ಜ್ಯೋತಿ ಯೋಧರ ದೇಗುಲವೂ ಆಗಲಿದೆ. ಯಾವ ರೀತಿಯಲ್ಲಿ ದೇವಸ್ಥಾನದ ಮೇಲೆ ಕಳಶವಿರುತ್ತದೋ ಅದೇ ಪ್ರಕಾರ ಈ ಸ್ಮಾರಕದಲ್ಲಿ ಕಳಶವನ್ನು ಇಡುವ ಮೂಲಕ ಇದಕ್ಕೆ ಸ್ಮಾರಕಕ್ಕಿಂತ ದೇಗುಲದ ಸ್ಪರ್ಷವನ್ನು ಕೊಡಲಾಗಿದೆ. ಅಗಸ್ಟ್ 15 ರ ಸ್ವಾತಂತ್ರ ದಿನಾಚರಣೆಯಂದು ಈ ದೇಗುಲ ಲೋಕಾರ್ಪಣೆಗೊಳ್ಳಲಿದ್ದು, ಅದೇ ದಿನ ಕಳಶದ ಪ್ರತಿಷ್ಟಾಪನೆಯೂ ನಡೆಯಲಿದೆ ಎಂದು ಸ್ಮಾರಕ ನಿರ್ಮಾಣದ ರೂವಾರಿ ಅಂಬಿಕಾ ವಿದ್ಯಾಕೇಂದ್ರ ಸಂಚಾಲಕ ಸುಬ್ರಮಣ್ಯ ನಟ್ಟೋಜರ ಅಭಿಮಾನದ ನುಡಿ.
ಪುತ್ತೂರಿನ ಅಂಬಿಕಾ ವಿದ್ಯಾಸಮೂಹ ಸಂಸ್ಥೆ ತನ್ನ ದೇಶಭಕ್ತಿಯ ದ್ಯೋತಕವಾಗಿ ಈ ಸ್ಮಾರಕವನ್ನು ನಿರ್ಮಿಸಿದ್ದು, ಪುತ್ತೂರು ನಗರಸಭೆಯ ಇದಕ್ಕೆ ಬೇಕಾದ ಜಾಗದ ವ್ಯವಸ್ಥೆಯನ್ನು ಕಲ್ಪಿಸಿದೆ. ಇದು ಕಪ್ಪು ಅಮೃತಶಿಲೆಯ ಸ್ಮಾರಕ ಸಮಾಧಿಯಾಗಿದ್ದು, ಅದರ ಕೊರಳಿನ ಭಾಗದಲ್ಲಿ ಒಂದು ಬಂದೂಕನ್ನು ಇರಿಸಿ ಯೋಧನ ಶಿರಸ್ತ್ರಾಣವೊಂದನ್ನು ಅದರ ನೆತ್ತಿಗೇರಿಸಲಾಗಿದೆ. ಸ್ಮಾರಕ ಸಮಾಧಿಯ ಪ್ರತಿ ಮುಖವೂ ಬಂಗಾರದಲ್ಲಿ ಕೆತ್ತಲಾಗಿರುವ ‘ಅಮರ್ ಜವಾನ್’ ಎಂಬ ಪದಗಳನ್ನು ಹೊಂದಿದೆ. ಯೋಧರಿಗೆ ಸಂಬಂದಪಟ್ಟ ಎಲ್ಲಾ ಕಾರಯಕ್ರಮಗಳು ಇನ್ನು ಮುಂದೆ ಇದೇ ಸ್ಥಳದಲ್ಲಿ ನಡೆಸಲು ತೀರ್ಮಾನಿಸಲಾಗಿದೆ. ದಕ್ಷಿಣಕನ್ನಡ ಜಿಲ್ಲೆಗೆ ಸಂಬಂಧಿಸಿದ ಯೋಧರ ಹುತಾತ್ಮರಾದರೆ ಅವರ ಪ್ರಾರ್ಥಿವ ಶರೀರವನ್ನು ಇಲ್ಲಿಗೆ ತಂದು ಸಾರ್ವಜನಿಕರ ದರ್ಶನಕ್ಕೆ ಇಡುವಂತ ವ್ಯವಸ್ಥೆಯ ಬಗ್ಗೆಯೂ ಇದೀಗ ಜಿಲ್ಲಾಡಳಿತದ ಜೊತೆಗೆ ಮಾತುಕತೆಗಳೂ ನಡೆಯುತ್ತಿದೆ. ದೇಶಭಕ್ತಿಯನ್ನು ತನ್ನ ಪ್ರಾಣ ಪಣಕ್ಕಿಡುವ ಮೂಲಕ ತೋರ್ಪಡಿಸುವ ಧೀರ ಯೋಧನಿಗೆ ಪ್ರತಿಯೊಬ್ಬ ನಾಗರಿಕನೂ ತಲೆಬಾಗಲೇ ಬೇಕಾಗಿದೆ. ಈ ನಿಟ್ಟಿನಲ್ಲಿ ಪುತ್ತೂರಿನ ಈ ಅಮರ್ ಜವಾನ್ ಜ್ಯೋತಿ ಸಾರ್ವಜನಿಕರಿಗೆ ಯೋಧರ ಬಗ್ಗೆ ಶ್ರದ್ಧೆ ಮೂಡಿಸುವ ಕೇಂದ್ರವಾಗಿಯೂ ಬದಲಾಗಲಿದೆ.