LATEST NEWS
ಪಿಲಿಕೋಲದ ವೇಳೆ ಹುಲಿವೇಷಧಾರಿ ವ್ಯಕ್ತಿ ಮೈಮುಟ್ಟಿದ ವಿಡಿಯೋ ವೈರಲ್

ಪಿಲಿಕೋಲದ ವೇಳೆ ಹುಲಿವೇಷಧಾರಿ ವ್ಯಕ್ತಿ ಮೈಮುಟ್ಟಿದ ವಿಡಿಯೋ ವೈರಲ್
ಉಡುಪಿ ಮೇ 6: ಉಡುಪಿ ಜಿಲ್ಲೆಯ ಕಾಪುವಿನಲ್ಲಿ ಶನಿವಾರ ನಡೆದ ಪಿಲಿಕೋಲದ ವೇಳೆ ಹುಲಿವೇಷ ಧಾರಿ ವ್ಯಕ್ತಿ ಮೈಮುಟ್ಟಿದ ವೀಡಿಯೋ ಈಗ ವೈರಲ್ ಆಗಿದೆ.
ಉಡುಪಿ ತಾಲೂಕಿನ ಕಾಪುವಿನಲ್ಲಿ ನಿನ್ನೆ ನಡೆದ ಘಟನೆ ನಡೆದಿದ್ದು, ಪಿಲಿಕೋಲ ಅನ್ನೋದು ಈ ಭಾಗದಲ್ಲಿ ನಡೆಯುವ ಅಪರೂಪದ ಒಂದು ದೈವದ ಆಚರಣೆ. ಇಲ್ಲಿ ದೈವದ ಪಾತ್ರಧಾರಿ ನೆರೆದ ಭಕ್ತರಲ್ಲಿ ಯಾರನ್ನಾದರೂ ಮುಟ್ಟಿದರೆ ಆತ ವರ್ಷದೊಳಗೆ ಸಾಯುತ್ತಾನೆ ಅನ್ನೋದು ನಂಬಿಕೆ.

ಒಂದು ವೇಳೆ ದೈವದ ಪಾತ್ರಧಾರಿಯಿಂದ ಸ್ಪರ್ಶಿಸಿಕೊಂಡವ ದೇವರಿಗೆ ಶರಣಾಗಿ ತಪ್ಪು ಕಾಣಿಕೆ ಹಾಕದಿದ್ದರೆ, ಆತ ವರ್ಷದೊಳಗೆ ಅಸುನೀಗುತ್ತಾನೆ ಅನ್ನೋದು ಶತಮಾನಗಳ ನಂಬಿಕೆ. ಹಾಗಾಗಿ ಪಿಲಿಕೋಲದ ದಿನ ಸಾವಿರಾರು ಭಕ್ತರು ಭಯ ಭಕ್ತಿಯಿಂದ ಸೇರುತ್ತಾರೆ.
ಶನಿವಾರ ನಡೆದ ದರ್ಶನದ ವೇಳೆ ಮುಂಬೈನಿಂದ ಕೋಲ ನೋಡಲು ಬಂದಿದ್ದ ಯುವಕನೊಬ್ಬನನ್ನು ದೈವ ಪಾತ್ರಧಾರಿ ಅಟ್ಟಾಡಿಸಿಕೊಂಡು ಹೋಗಿ ಮುಟ್ಟಿದ್ದಾನೆ. ಆತನ ಜೊತೆಗೆ ಬಂದಿದ್ದ ಆತನ ಹಿರಿಯ ಸಂಬಂಧಿಯೊಬ್ಬರು ಇದರಿಂದ ಗಾಬರಿಗೊಂಡು ದೈವದ ಪಾತ್ರಧಾರಿಯ ಮೇಲೆ ಹಲ್ಲೆ ನಡೆಸಿದ್ದಾರೆ.
ಇದರಿಂದ ಕೆಲಕಾಲ ಗೊಂದಲದ ವಾತಾವರಣ ಉಂಟಾಗಿದೆ. ಸದ್ಯ ಈ ವಿಡಿಯೋ ಕರಾವಳಿ ಭಾಗದಲ್ಲಿ ವೈರಲ್ ಆಗಿದೆ. ಈ ಘಟನೆ ನಡೆದ ಬಳಿಕ ದೈವದಿಂದ ಮುಟ್ಟಿಸಿಕೊಂಡ ಇಬ್ಬರೂ ತಪ್ಪು ಕಾಣಿಕೆ ಹಾಕಿ ವಾಪಾಸಾಗಿದ್ದಾರೆ ಎಂದು ತಿಳಿದು ಬಂದಿದೆ.