DAKSHINA KANNADA
ನದಿ ನುಂಗಣ್ಣನ ಮೇಲೆ ತನಿಖೆಯ ತೂಗುಗತ್ತಿ……
ಪುತ್ತೂರು, ಅಗಸ್ಟ್ 7: ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರಿನ ಉಪ್ಪಿನಂಗಡಿಯ ಕುಟೇಲು ಎಂಬಲ್ಲಿ ನೇತ್ರಾವತಿ ನದಿ ಪಾತ್ರದಲ್ಲಿ ಅಕ್ರಮವಾಗಿ ಕಟ್ಟಿರುವ ಕಟ್ಟಡದ ಮೇಲೆ ಇದೀಗ ಕಾನೂನು ಕ್ರಮದ ತೂಗುಗತ್ತಿ ಸಿದ್ಧವಾಗಿದೆ. ಈ ಕಟ್ಟಡದ ವಿಚಾರವಾಗಿ ದಿ ಮ್ಯಾಂಗಲೂರ್ ಮಿರರ್ ಸಮಗ್ರ ವರದಿ ಪ್ರಕಟಿಸಿದ ಹಿನ್ನಲೆಯಲ್ಲಿ ಪುತ್ತೂರು ತಾಲೂಕು ಕಾರ್ಯನಿರ್ವಹಣಾಧಿಕಾರಿ ಸೂಕ್ತ ತನಿಖೆ ನಡೆಸುವ ಕುರಿತು ಗಮನಹರಿಸಿದ್ದಾರೆ. ತನ್ನ ಪಟ್ಟಾ ಜಮೀನಿಗೆ ತಾಗಿಕೊಂಡಿರುವ ನೇತ್ರಾವತಿ ನದಿ ಪಾತ್ರದ ಜಾಗವನ್ನೂ ಅತಿಕ್ರಮಿಸಿಕೊಂಡು ಈ ಕಟ್ಟಡವನ್ನು ಕಟ್ಟಲಾಗಿದೆ. ಕಳೆದ ವರ್ಷ ಪುತ್ತೂರು ಸಹಾಯಕ ಕಮಿಷನರ್ ಆಗಿದ್ದ ಡಾ. ಕೆ.ವಿ.ರಾಜೇಂದ್ರ ಕಟ್ಟಡ ಪ್ರಾರಂಭಿಸುವ ಮೊದಲೇ ಸ್ಥಳಕ್ಕೆ ಭೇಟಿ ನೀಡಿ ನದಿ ಪಾತ್ರದಲ್ಲಿ ಕಟ್ಟಡ ಕಟ್ಟದಂತೆ ಮಾಲಕನಿಗೆ ಎಚ್ಚರಿಕೆ ನೀಡಿದ್ದ ವಿಚಾರವೂ ಇದೀಗ ಬೆಳಕಿಗೆ ಬಂದಿದ್ದು, ಡಾ. ಕೆ.ವಿ.ರಾಜೇಂದ್ರ ವರ್ಗಾವಣೆಯಾದ ಬಳಿಕ ಇದೀಗ ಮತ್ತೆ ಕಟ್ಟಡವನ್ನು ಕಟ್ಟಲಾಗಿದೆ. ಸ್ಥಳೀಯ ಉಪ್ಪಿನಂಗಡಿ ಗ್ರಾಮಪಂಚಾಯತ್ ನಿಂದ ಕಟ್ಟಡದ ಹಿಂಬದಿ ಹಾಗೂ ಪಕ್ಕದಲ್ಲಿ ಕಾಮಗಾರಿಯನ್ನು ನಡೆಸಲು ಅನುಮತಿಯನ್ನೂ ನೀಡಲಾಗಿಲ್ಲ. ಈ ನಡುವೆ ಪುತ್ತೂರು ತಾಲೂಕು ಕಾರ್ಯನಿರ್ವಹಣಾಧಿಕಾರಿ ಕಟ್ಟಡವು ನದಿಪಾತ್ರವನ್ನು ಆಕ್ರಮಿಸಿಕೊಂಡಿದ್ದಲ್ಲಿ, ಅಗತ್ಯವಾಗಿ ಕಾನೂನಿನ ಕ್ರಮವನ್ನು ಜರುಗಿಸುವುದಾಗಿ ಎಚ್ಚರಿಸಿದ್ದಾರೆ. ಈಗಾಗಲೇ ಪಂಚಾಯತ್ ವತಿಯಿಂದ ಕಟ್ಟಡಕ್ಕೆ ಸೇರಿದ ಜಾಗದ ಸರ್ವೆ ನಡೆಸಲು ತೀರ್ಮಾನಿಸಲಾಗಿದ್ದು, ಒಂದು ವೇಳೆ ಸರ್ವೆಯಲ್ಲಿ ಅತಿಕ್ರಮಣ ಬೆಳಕಿಗೆ ಬಂದಲ್ಲಿ ಕಾನೂನು ಕ್ರಮ ಜರುಗಿರುವ ಎಚ್ಚರಿಕೆಯನ್ನು ನೀಡಿದ್ದಾರೆ.ವಿಪರ್ಯಾಸವೆಂದರೆ ಕಟ್ಟಡ ಮಾಲಿಕ ಕಟ್ಟಡವನ್ನು ನೇತ್ರಾವತಿ ನದಿಯಲ್ಲೇ ಕಟ್ಟುತ್ತಿರುವ ವಿಚಾರ ಸ್ಥಳೀಯ ಜನರಿಗೆ ತಿಳಿದಿದ್ದರೂ, ಯಾರೂ ಈ ಬಗ್ಗೆ ಆಕ್ಷೇಪವನ್ನು ಎತ್ತಿಲ್ಲ. ಅಲ್ಲದೆ ನೇತ್ರಾವತಿ ನದಿ ಉಳಿಸಿ ಎನ್ನುವ ಸಂಘಟನೆಯೂ ಇದೇ ಉಪ್ಪಿನಂಗಡಿಯಲ್ಲಿ ಕಾರ್ಯಾಚರಿಸುತ್ತಿದ್ದು, ಈ ಸಂಘಟನೆಗಳ ಪದಾಧಿಕಾರಿಗಳ ಕಣ್ಣಮುಂದೆಯೇ ಈ ರೀತಿ ನೇತ್ರಾವತಿಯ ಹರಣ ನಡೆಯುತ್ತಿದ್ದರೂ, ಸುಮ್ಮನಿರುವುದು ನೇತ್ರಾವತಿ ಬಗ್ಗೆ ಮಾತನಾಡುವ ಇವರ ಕಾಳಜಿಯನ್ನು ಎತ್ತಿ ತೋರಿಸುತ್ತಿದೆ.
Also Read..,