LATEST NEWS
ದೇವರ ಹೆಸರನ್ನು ಹೇಳಿ ರಾಜಕೀಯ ಮಾಡುವವರನ್ನು ಮೆಟ್ಟಿ ನಿಲ್ಲಬೇಕು : ಪ್ರಕಾಶ್ ರೈ
ದೇವರ ಹೆಸರನ್ನು ಹೇಳಿ ರಾಜಕೀಯ ಮಾಡುವವರನ್ನು ಮೆಟ್ಟಿ ನಿಲ್ಲಬೇಕು : ಪ್ರಕಾಶ್ ರೈ
ಮಂಗಳೂರು,ಡಿಸೆಂಬರ್ 13: ಸಾವನ್ನು ಮುಂದಿಟ್ಟುಕೊಂಡು ರಾಜಕೀಯ ಮಾಡುವವರು ದೊಡ್ಡ ರಾಕ್ಷಸರು ರಾಜ್ಯದಲ್ಲಿ ಇದ್ದಾರೆ. ಇವರು ಯಾರು ಅಂಥ ರಾಜ್ಯದ ಜನತೆಗೆ ಗೊತ್ತಿದೆ.
ಜನರು ಯಾರೂ ಮೂರ್ಖರಲ್ಲ. ಎಂದು ಖ್ಯಾತ ಬಹುಭಾಷಾ ನಟ ಪ್ರಕಾಶ್ ರೈ ಬಿಜೆಪಿ ಹಾಗೂ ಸಂಘ ಪರಿವಾರದ ವಿರುದ್ದ ಪರೋಕ್ಷ ವಾಗ್ದಾಳಿ ನಡೆಸಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ಮಾಣಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ಅವರ ನೇತೃತ್ವದಲ್ಲಿ ಹಮ್ಮಿಕೊಂಡ ಸಾಮರಸ್ಯ ಪಾದಯಾತ್ರೆಯ ಸಮಾರೋಪ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.
ಮನುಷ್ಯ ನನ್ನು ಕೊಲ್ಲುವ ಅರ್ಹತೆ ಯಾರಿಗೂ ಇಲ್ಲ. ಆದರೆ ಸಾವಿನಲ್ಲಿ ರಾಜಕೀಯ ಮಾಡುವ ವ್ಯಕ್ತಿಗಳು ರಾಜ್ಯದಲ್ಲಿದ್ದಾರೆ.
ಸಾವನ್ನು ಮುಂದಿಟ್ಟುಕೊಂಡು ಜನರ ಮಧ್ಯೆ ವೈಮಸ್ಸು ಹುಟ್ಟಿಸಿ ಅ ಮೂಲಕ ದ್ವೇಷದ ರಾಜಕಾರಣ ಮಾಡಲಾಗುತ್ತಿದೆ ಎಂದು ಆರೋಪಿಸಿದರು.
ಹೀಗೆ ದೇವರ ಹೆಸರನ್ನು ಹೇಳಿ ರಾಜಕೀಯ ಮಾಡುವವರನ್ನು ಮೆಟ್ಟಿ ನಿಲ್ಲಬೇಕಿದೆ.
ಈ ಹಿನ್ನೆಲೆಯಲ್ಲಿ ಎಲ್ಲರೂ ಒಂದಾಗಬೇಕು ಎಂದು ಅವರು ಕರೆ ನೀಡಿದರು.
ಸಭೆಯಲ್ಲಿ ಮಾತನಾಡಿದ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಬಿ ರಮಾನಾಥ ರೈ ಅವರು ಕೆಲವು ತಿಂಗಳ ಹಿಂದೆ ಜಿಲ್ಲೆಯಲ್ಲಿ ಹತ್ಯೆಗಳು ನಡೆದಿವೆ.
ಸಾಮರಸ್ಯಕ್ಕೆ ಹೆಸರಾದ ದಕ್ಷಿಣ ಕನ್ನಡ ಜಿಲ್ಲೆಯನ್ನು ಮತೀಯವಾದಿಗಳು ಪ್ರಯೋಗಾಲಯ ಮಾಡುವ ಹುನ್ನಾರ ನಡೆಸುತ್ತಿದ್ದಾರೆ ಎಂದು ಆರೋಪಿಸಿದರು.
ದೇವರು, ಧರ್ಮ, ದೇಶಪ್ರೇಮದ ಹೆಸರಿನಲ್ಲಿ ವಂಚಿಸುವ ಜನ ಸಮಾಜದಲ್ಲಿದ್ದಾರೆ.
ಪ್ರಸ್ತುತ ಸಮಯದಲ್ಲಿ ಈ ಸಾಮರಸ್ಯ ನಡಿಗೆ ಬೇಕಿತ್ತೇ ಎಂಬ ಮಾತುಗಳು ಕೇಳಿಬಂದಿತ್ತು.
ನಾವು ಕಾನೂನಿಗೆ ತಲೆ ಬಾಗಿಯೇ ಕೆಲಸ ಮಾಡುತ್ತೇವೆ ಹೊರತು ಕಾನೂನು ಉಲ್ಲಂಘಿಸಲ್ಲ ಎಂದು ಹೇಳಿದ ಅವರು ಈ ಸಾಮರಸ್ಯ ಪಾದಯಾತ್ರೆ ದಿಢೀರ್ ನಿರ್ಧಾರವಲ್ಲ.
ಪೂರ್ವಭಾವಿಯಾಗಿಯೇ ನಡೆಸಿದ ಯೋಜನೆ ಎಂದು ಅವರು ಸ್ಪಷ್ಟಪಡಿಸಿದರು. ಈ ಸಾಮರಸ್ಯ ನಡಿಗೆ ಫರಂಗಿಪೇಟೆಯಿಂದ ಮಾಣಿಯವರೆಗೆ ಮಾತ್ರ ನಡೆಯುವುದು ಅಲ್ಲ.
ಜೀವನದ ಕೊನೆಯ ತನಕ ಒಬ್ಬರೊಬ್ಬರ ಜತೆಯಾಗಿ ನಡೆಯೋಣ ಎಂದು ಕರೆ ನೀಡಿದರು.
ಸಚಿವ ಯು.ಟಿ. ಖಾದರ್, ಶಾಸಕ ಅಭಯ ಚಂದ್ರ ಜೈನ್, ಶ್ರೀ ರಾಮ್ ರೆಡ್ಡಿ,ಡಾ. ಸಿದ್ದನ ಗೌಡ ಪಾಟೀಲ್, ಸಹಿತ ಅನೇಕ ರಾಜಕೀಯ ಧುರೀಣರು ಸಭೆಯಲ್ಲಿ ಪಾಲ್ಗೊಂಡಿದ್ದರು.