DAKSHINA KANNADA
ಗ್ಯಾಸ್ ಟ್ಯಾಂಕರ್ ಪಲ್ಟಿ, ಅನಿಲ ಸೋರಿಕೆ, ಸ್ಥಳದಲ್ಲಿ ಕಟ್ಟೆಚ್ಚರ
ಗ್ಯಾಸ್ ಟ್ಯಾಂಕರ್ ಪಲ್ಟಿ, ಅನಿಲ ಸೋರಿಕೆ, ಸ್ಥಳದಲ್ಲಿ ಕಟ್ಟೆಚ್ಚರ
ಪುತ್ತೂರು, ಜನವರಿ 10: ಅನಿಲ ತುಂಬಿದ ಟ್ಯಾಂಕರ್ ಪಲ್ಟಿಯಾಗಿ ಭಾರೀ ಪ್ರಮಾಣದ ಗ್ಯಾಸ್ ಸೋರಿಕೆಯಾದ ಘಟನೆ ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿ 75 ರ ಕೊಡ್ಯಕಲ್ಲು ಎಂಬಲ್ಲಿ ನಡೆದಿದೆ.
ಮಂಗಳೂರಿನಿಂದ ಗ್ಯಾಸ್ ತುಂಬಿಕೊಂಡ ಬೆಂಗಳೂರು ಕಡೆಗೆ ಸಾಗುತ್ತಿದ್ದ ಟ್ಯಾಂಕರ್ ಶಿರಾಡಿ ಗ್ರಾಮದ ಕೊಡ್ಯಕಲ್ಲು ಎಂಬಲ್ಲಿ ರಸ್ತೆಯಲ್ಲೇ ಪಲ್ಟಿಯಾಗಿದೆ.
ಇದರಿಂದಾಗಿ ಟ್ಯಾಂಕರ್ ನಲ್ಲಿದ್ದ ಅನಿಲ ಭಾರೀ ಪ್ರಮಾಣದಲ್ಲಿ ಸೋರಿಕೆಯಾಗುತ್ತಿದೆ. ಸ್ಥಳದಲ್ಲಿ ಉಪ್ಪಿನಂಗಡಿ ಪೋಲೀಸರು, ಅಗ್ನಿಶಾಮಕದಳ ಹಾಗೂ ಎಂ.ಆರ್.ಪಿ.ಎಲ್ ತಜ್ಞರು ಬೀಡುಬಿಟ್ಟಿದ್ದು, ಪರಿಸ್ಥಿತಿಯ ಅವಲೋಕನ ನಡೆಸುತ್ತಿದ್ದಾರೆ.
ಮುಂಜಾಗೃತಾ ಕ್ರಮವಾಗಿ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಸಂಚಾರವನ್ನು ಸಂಪೂರ್ಣ ನಿಶೇಧಿಸಲಾಗಿದ್ದು, ವಾಹನಗಳಿಗೆ ಪರ್ಯಾಯ ರಸ್ತೆಯ ವ್ಯವಸ್ಥೆಯನ್ನು ಮಾಡಲಾಗಿದೆ.
ಅನಿಲ ಸೋರಿಕೆಯಾಗಿ ಪಕ್ಕದಲ್ಲೇ ಹರಿಯುವ ತೊರೆಯಲ್ಲಿ ಸೇರಿಕೊಂಡಿದ್ದು, ಸುಮಾರು 300 ಮೀಟರ್ ನಷ್ಟು ಅನಿಲ ನೀರಿನಲ್ಲಿ ಪಸರಿಸಿದೆ.
ಈ ಕಾರಣಕ್ಕಾಗಿ ಸುತ್ತಮುತ್ತಲಿನ ಪರಿಸರದ ಮನೆಗಳಲ್ಲಿ ಬೆಂಕಿ ಹಚ್ಚದಂತೆ ಪೋಲೀಸರು ಈಗಾಗಲೇ ಸೂಚನೆಯನ್ನು ನೀಡಿದ್ದಾರೆ.
ಅಗ್ನಿಶಾಮಕದಳ ಸಿಬ್ಬಂದಿಗಳು ನಿರಂತರವಾಗಿ ಟ್ಯಾಂಕರ್ ಮೇಲೆ ನೀರು ಹಾಯಿಸುವ ಪ್ರಕ್ರಿಯೆಯಲ್ಲಿ ತೊಡಗಿಕೊಂಡಿದ್ದಾರೆ.