Connect with us

DAKSHINA KANNADA

ಆಳ್ವಾಸ್ ವಿರಾಸತ್ 2018 ವಿಶೇಷ – ಕೆಕೆ, ಶಂಕರ್ ಮಹದೇವನ್ , ಕೈಲಾಶ್ ಖೇರ್ ಸಂಗೀತ ರಸದೌತಣ

ಆಳ್ವಾಸ್ ವಿರಾಸತ್ 2018 ವಿಶೇಷ – ಕೆಕೆ, ಶಂಕರ್ ಮಹದೇವನ್ , ಕೈಲಾಶ್ ಖೇರ್ ಸಂಗೀತ ರಸದೌತಣ

ಮೂಡಬಿದಿರೆ ಜನವರಿ 10:ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಮೂಡುಬಿದಿರೆಯು ನಡೆಸುವ ರಾಷ್ಟ್ರೀಯ ಸಾಂಸ್ಕೃತಿಕ ಉತ್ಸವ ‘ಆಳ್ವಾಸ್ ವಿರಾಸತ್’ ಜನವರಿ 12ರಿಂದ 14ರವರೆಗೆ ಮೂರು ದಿನಗಳ ಕಾಲ ಮೂಡುಬಿದಿರೆಯ ಪುತ್ತಿಗೆಯ ವಿವೇಕಾನಂದ ನಗರದ ಆಳ್ವಾಸ್ ಆವರಣದಲ್ಲಿ ಅದ್ದೂರಿಯಿಂದ ನಡೆಯಲಿವೆ. ಪ್ರತಿದಿನ ವೈವಿಧ್ಯಪೂರ್ಣ ಸಂಗೀತ, ನೃತ್ಯಗಳ ಕಾರ್ಯಕ್ರಮಗಳಿದ್ದು ಮುಸ್ಸಂಜೆಯಿಂದ ತಡರಾತ್ರಿಯವರೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳು ಕಳೆಗಟ್ಟಲಿವೆ.

ಪ್ರಸ್ತುತ ನಾಗಾಲ್ಯಾಂಡಿನ ರಾಜ್ಯಪಾಲರಾಗಿರುವ ಪದ್ಮನಾಭ ಬಾಲಕೃಷ್ಣ ಆಚಾರ್ಯರು ದೀಪ ಬೆಳಗಿಸುವ ಮೂಲಕ ಆಳ್ವಾಸ್ ವಿರಾಸತ್ 2018ನ್ನು ಉದ್ಘಾಟಿಸಲಿದ್ದಾರೆ. ಸಭಾಕಾರ್ಯಕ್ರಮದ ಅಧ್ಯಕ್ಷತೆಯಲ್ಲಿ ಡಾ. ಡಿ.ವೀರೇಂದ್ರ ಹೆಗ್ಗಡೆಯವರು ವಹಿಸಲಿದ್ದಾರೆ.

ಇದೇ ಸಂದರ್ಭದಲ್ಲಿ ಪದ್ಮಭೂಷಣ ಪಂಡಿತ್ ರಾಜನ್‍ಸಾಜನ್ ಮಿಶ್ರಾ ಸಹೋದರರಿಗೆ ಆಳ್ವಾಸ್ ವಿರಾಸತ್ 2018ರ ಪುರಸ್ಕಾರ ನೀಡಿ ಗೌರವಿಸಲಾಗುವುದು.

ಆಳ್ವಾಸ್ ವಿರಾಸತ್ 2018ರ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಮುಖ್ಯವಾಗಿ 12.01.2018 ಹಿಂದಿ ಚಿತ್ರರಂಗದ ಪ್ರಸಿದ್ಧ ಹಿನ್ನಲೆಗಾಯಕರಾದ ಕೆ.ಕೆ.ಮತ್ತು ತಂಡದಿಂದ ‘ಸಂಗೀತ ರಸಸಂಜೆ’ ನಡೆಯಲಿದ್ದು ಚಿತ್ರ ಸಂಗೀತಾಸಕ್ತರಿಗೆ ರಸದೌತಣ ದೊರೆಯಲಿದೆ.

ದಿನಾಂಕ 13.01.2018ನೇ ಶನಿವಾರ ಬಹುಭಾಷಾ ಹಿನ್ನೆಲೆಗಾಯಕ, ಸಂಗೀತ ನಿರ್ದೇಶಕರಾಗಿ ಜನಮನ್ನಣೆಗಳಿಸಿರುವ ಶಂಕರಮಹದೇವನ್-ಎಹ್ಸಾನ್-ಲೋಯ್ ಮತ್ತು ಸಿದ್ಧಾರ್ಥ ಮಹದೇವನ್ ತಂಡವು ‘ಸುಮಧುರ ಸಂಗೀತ’ದ ಮೂಲಕ ಜನಮನಸೂರೆಗೊಳ್ಳಲಿದೆ.

ದಿನಾಂಕ 14.01.2018ನೇ ಭಾನುವಾರ ಹಿಂದಿ ಚಿತ್ರರಂಗದ ಖ್ಯಾತ ಹಿನ್ನಲೆಗಾಯಕರಾದ ಕೈಲಾಶ್ ಖೇರ್ ಮತ್ತು ತಂಡ ಚಿತ್ರ ಸಂಗೀತಾಸಕ್ತರಲ್ಲಿ ಸಂಚಲನವನ್ನುಂಟು ಮಾಡಲಿದ್ದಾರೆ.

ಪೇಟೆಯಿಂದ ಪುತ್ತಿಗೆಗೆ ಮತ್ತು ಪುತ್ತಿಗೆಯಿಂದ ಪೇಟೆಯವರೆಗೆ ಉಚಿತ ಬಸ್ಸಿನ ವ್ಯವಸ್ಥೆಯನ್ನು ಈ ಸಂದರ್ಭದಲ್ಲಿ ಮಾಡಲಾಗಿದೆ.