KARNATAKA
ಕುಮ್ಕಿ ಭೂಮಿ ವಶಕ್ಕೆ ಸರಕಾರದ ಪಿತೂರಿ
ಕುಮ್ಕಿ ಭೂಮಿ ವಶಕ್ಕೆ ಸರಕಾರದ ಪಿತೂರಿ
ಪುತ್ತೂರು,ಸೆಪ್ಟಂಬರ್ 28: ಕಂದಾಯ ಪಾವತಿಸುವ ಭೂಮಿಯನ್ನು ಹೊರತು ಉಳಿದ ಸಕಲ ಕುಮ್ಕಿ ಭೂಮಿಗಳನ್ನು ಅಧಿಕಾರಿ ವರ್ಗ ಹಾಗೂ ರಾಜಕೀಯ ಮುಖಂಡರು ಕಛೇರಿಯಲ್ಲೇ ಕುಳಿತು ಸರಕಾರ ಭೂಮಿ ಎಂದು ಬದಲಾಯಿಸುತ್ತಿದ್ದಾರೆ ಎಂದು ಭಾರತೀಯ ಕಿಸಾನ್ ಸಂಘ ಆರೋಪಿಸಿದೆ.ಪುತ್ತೂರಿನಲ್ಲಿ ಪತ್ರಿಕಾಗೋಷ್ಟಿಯನ್ನು ಉದ್ಧೇಶಿಸಿ ಮಾತನಾಡಿದ ಕಿಸಾನ್ ಸಂಘದ ಎಮ್.ಜಿ. ಸತ್ಯನಾರಾಯಣ, 1902 ರ ಕಂದಾಯ ಆದೇಶದಂತೆ ಪ್ರತಿ 30 ವರ್ಷಗಳಿಗೊಮ್ಮೆ ಭೂಮಿಯ ಅಳತೆ ಸೇರಿದಂತೆ ಸ್ವಾದೀನದಾರರ ವಿವರ, ಬೆಳೆಗಳ ವಿವರಗಳನ್ನು ದಾಖಲೆ ಮಾಡಬೇಕೆಂಬ ನಿಯಮವಿದ್ದರೂ, 1934 ರ ಬಳಿಕ ಇದು ನಡೆದಿಲ್ಲ. ಆದರೆ ಇದೀಗ ಅಧಿಕಾರಿಗಳು ಮತ್ತು ರಾಜಕೀಯ ನಾಯಕರು ಸೇರಿಕೊಂಡು ತಮಗೆ ತೋಚಿದ ಭೂಮಿಯನ್ನು ಗುರುತಿಸಿ ಅದನ್ನು ಸರಕಾರಿ ಭೂಮಿ ಎಂದು ಪರಿಗಣಿಸುವ ಮೂಲಕ ಅಕ್ರಮವೆಸಗುತ್ತಿದ್ದಾರೆ ಎಂದು ದೂರಿದರು. ಪ್ರತಿ ಗ್ರಾಮಗಳಲ್ಲಿ ಇಂಥ ಜಮೀನುಗಳನ್ನು ಗುರುತಿಸಿ ಅದನ್ನು ಅಕ್ರಮ ಸಕ್ರಮದ ಮೂಲಕ ಹಣಕ್ಕಾಗಿ ವಿತರಿಸುವ ಷಡ್ಯಂತ್ರವೂ ನಡೆಯುತ್ತಿದೆ ಎಂದರು. ಗ್ರಾಮ ಕರಣಿಕ ತಯಾರಿಸಿದ ವರದಿಯನ್ನು ಪರಿಶೀಲನೆ ನಡೆಸದೆ ಅಧಿಕಾರಿಗಳು ಹಾಗೂ ರಾಜಕೀಯ ಮುಖಂಡರು ಏಕಾಏಕಿ ರೈತರ ಭೂಮಿಗಳನ್ನು ಸರಕಾರಿ ಎಂದು ಪರಿಗಣಿಸುವುದು ಕಾನೂನುಬಾಹಿರ ಎಂದ ಅವರು ರೈತರ ಜಮೀನುಗಳನ್ನು ಸರಿಯಾಗಿ ಸರ್ವೆ ನಡೆಸದೆ ಅದನ್ನು ಸರಕಾರಿ ಭೂಮಿ ಎನ್ನುವಂತಿಲ್ಲ ಎಂದು ರಾಜ್ಯ ಹೈಕೋರ್ಟ್ 25.05.2017 ಕ್ಕೆ ಆದೇಶ ನೀಡಿದ್ದು, ಸರಕಾರ ಹೊರಡಿಸಿ ಆದೇಶಕ್ಕೆ ತಡೆಯಾಜ್ಞೆಯನ್ನೂ ನೀಡಿದೆ. ಆದರೆ ಈ ಆದೇಶವನ್ನು ಧಿಕ್ಕರಿಸಿ ಇದೀಗ ಸರಕಾರ ಮತ್ತೆ ರೈತರ ಜಮೀನುಗಳಿಗೆ ನೋಟೀಸ್ ಜಾರಿ ಮಾಡುತ್ತಿರುವುದು ನ್ಯಾಯಾಂಗ ನಿಂದನೆಯಾಗಿದೆ ಎಂದು ಅವರು ಇದೇ ಸಂದರ್ಭದಲ್ಲಿ ತಿಳಿಸಿದರು.