FILM
ಕಿರಿಕ್ಕು ಸಾನ್ವಿಯ ಬದಲಾಯ್ತು ಲಕ್ಕು

ಕಿರಿಕ್ಕು ಸಾನ್ವಿಯ ಬದಲಾಯ್ತು ಲಕ್ಕು
“ಏನ್ರೀ ಆ ಹುಡುಗಿ ಅದೇನು ಅದೃಷ್ಟ ಮಾಡಿದ್ದಾಳೆ ನೋಡ್ರಿ, ಕೈ ತುಂಬಾ ಸಿನ್ಮಾ, ಕನ್ನಡ ಹಾಗೂ ಪರಭಾಷೆಯಿಂದಲೂ ಆಫರ್ …’ಸದ್ಯ ಕಿರಿಕ್ ಪಾರ್ಟಿ ಚಿತ್ರದಲ್ಲಿ ನಾಯಕಿಯಾಗಿದ್ದ ರಶ್ಮಿ ಮಂದಣ್ಣ ಬಾಚಿಕೊಳ್ಳುತ್ತಿರೋ ಅವಕಾಶ ಕಂಡು ಖಾಲಿ ಕೂತಿರುವ ನಟಿಯರೆಲ್ಲಾ ನಟಿಕೆ ಮುರಿಯಲಾರಂಭಿಸಿದ್ದಾರೆ.
ರಶ್ಮಿಕಾರನ್ನು ನೋಡಿದ ಕೆಲವರು ಖುಷಿಯಿಂದ ಹಾಗೂ ಇನ್ನು ಕೆಲವರು ಹೊಟ್ಟೆಕಿಚ್ಚಿನಿಂದ ಈ ಮೇಲಿನ ಮಾತನಾಡಿಕೊಳ್ಳುತ್ತಿದ್ದಾರಂತೆ. ಹಾಗಂತ ಅವರು ಖುಷಿ ಪಡುವುದರಲ್ಲಿ, ಹೊಟ್ಟೆ ಕಿಚ್ಚು ಪಡುವುದರಲ್ಲಿ ತಪ್ಪಿಲ್ಲ ಬಿಡಿ. ಮೊನ್ನೆ ಮೊನ್ನೆ ಕನ್ನಡಕ ಸರಿಪಡಿಸಿಕೊಂಡು ಸಾನ್ವಿಯಾಗಿ “ಕಿರಿಕ್’ ಮಾಡಿದ ಹುಡುಗಿ ರಶ್ಮಿಕಾ ಪ್ರಸ್ತುತ ತುಂಬಾನೇ ಬಿಝಿ ನಟಿ ಎಂದೇ ಹೇಳಬಹುದು.

ಕನ್ನಡದ ಹುಡುಗಿಯಾಗಿ ಮೊದಲ ಸಿನಿಮಾ ರಿಲೀಸ್ ಆಗಿ ಹಿಟ್ ಆಗುತ್ತಿದ್ದಂತೆ ರೆ ರಶ್ಮಿಕಾ ಮಂದಣ್ಣ ಮಾತ್ರ ಕೈ ತುಂಬಾ ಅವಕಾಶ ಪಡೆಯುತ್ತಾ ಚಿತ್ರರಂಗದಲ್ಲಿ ಗಟ್ಟಿ ನೆಲೆಯೂರುವ ಎಲ್ಲಾ ಲಕ್ಷಣಗಳು ಗೋಚರಿಸುತ್ತವೆ. “ಕಿರಿಕ್ ಪಾರ್ಟಿ’ ಚಿತ್ರ ಆರಂಭವಾದಾಗ ರಶ್ಮಿಕಾ ಮಂದಣ್ಣ ಚಿತ್ರರಂಗದ ನ್ಯೂ ಎಂಟ್ರಿ. ಆದರೆ, ಈಗ ಚಿತ್ರ 100 ದಿನ ಆಗುವಷ್ಟರಲ್ಲಿ ರಶ್ಮಿಕಾ ಎಲ್ಲರಿಗೂ ಪರಿಚಯದ ಮುಖವಾಗಿದ್ದಾರೆ.
ಚಿತ್ರರಂಗದಲ್ಲಿ ಬೇಡಿಕೆಯ ನಟಿಯಾಗಿಬಿಟ್ಟಿದ್ದಾರೆ. ಸದ್ಯ ರಶ್ಮಿಕಾ ಮಂದಣ್ಣ ಕೈಯಲ್ಲಿ ಮೂರು ಸಿನಿಮಾಗಳಿವೆ. ಅದರಲ್ಲಿ ಎರಡು ಕನ್ನಡ ಸಿನಿಮಾವಾದರೆ, ಒಂದು ತೆಲುಗು ಸಿನಿಮಾ. ಚಿತ್ರ ಬಿಡುಗಡೆಯಾದ ಮೂರು ತಿಂಗಳೊಳಗೆ ಪರಭಾಷೆಯ ಗಮನ ಸೆಳೆದ ನಟಿ ಎಂಬ ಹೆಗ್ಗಳಿಕೆ ಕೂಡಾ ರಶ್ಮಿಕಾಗಿದೆ.
ಪುನೀತ್‌ರಾಜಕುಮಾರ್ ಅವರ “ಅಂಜನಿ ಪುತ್ರ’ ಹಾಗೂ ಗಣೇಶ್ ನಾಯಕರಾಗಿರುವ “ಚಮಕ್’ ಚಿತ್ರಗಳಲ್ಲಿ ಬಿಝಿಯಾಗಿರುವ ರಶ್ಮಿಕಾ ತೆಲುಗಿನಲ್ಲೂ ಒಂದು ಸಿನಿಮಾ ಒಪ್ಪಿಕೊಂಡಿದ್ದು, ನಾಗ ಶೌರ್ಯ ಈ ಚಿತ್ರದ ನಾಯಕ.
ಖುಷಿಯಲ್ಲಿ ರಶ್ಮಿಕಾ
ಮೊದಲ ಚಿತ್ರ ಬಿಡುಗಡೆಯಾಗುತ್ತಿದ್ದಂತೆ ರಶ್ಮಿಕಾಗೆ ಈ ಮಟ್ಟಕ್ಕೆ ಅವಕಾಶ ಸಿಗುತ್ತಿರುವ ಹಾಗೂ ಜನ ಗುರುತಿಸುತ್ತಿರುವ ಬಗ್ಗೆ ಸಹಜವಾಗಿಯೇ ಖುಷಿ ಇದೆ. ಇದಕ್ಕೆಲ್ಲಾ ಕಾರಣ ಜನ ತನ್ನನ್ನು ಇಷ್ಟಪಟ್ಟಿದ್ದು ಎನ್ನಲು ರಶ್ಮಿಕಾ ಮರೆಯುವುದಿಲ್ಲ. “”ನನಗೆ “ಕಿರಿಕ್ ಪಾರ್ಟಿ’ ಚಿತ್ರದ ಆಫರ್ ಬಂದಾಗ ನನ್ನ ಪಾತ್ರವನ್ನು ಜನ ಈ ಮಟ್ಟಕ್ಕೆ ಇಷ್ಟಪಡುತ್ತಾರೆಂದು ನಾನಂದುಕೊಂಡಿರಲಿಲ್ಲ.
ಕೊಟ್ಟ ಪಾತ್ರಕ್ಕೆ ನ್ಯಾಯ ಒದಗಿಸಲು ಪ್ರಯತ್ನಿಸಿದೆ. ಅದನ್ನು ಜನ ಇಷ್ಟಪಟ್ಟಿದ್ದಾರೆ. ಜನ ಹಾಗೂ ಕನ್ನಡ ಚಿತ್ರರಂಗ ಬೇಗನೇ ನನ್ನನ್ನು ಗುರುತಿಸಿ, ಪ್ರೋತ್ಸಾಹಿಸುತ್ತಿದೆ. ಹಾಗಾಗಿಯೇ ಒಳ್ಳೊಳ್ಳೆ ಅವಕಾಶಗಳು ಸಿಗುತ್ತಿವೆ. ಜನ ಇಷ್ಟಪಡದಿದ್ದರೆ, ಅವರು ನನ್ನ ಅಭಿನಯವನ್ನು ಇಷ್ಟಪಡದಿದ್ದರೆ ನಾನು ಇವತ್ತು ಇಷ್ಟೊಂದು ಅವಕಾಶಗಳನ್ನು ಪಡೆಯಲು ಸಾಧ್ಯವಾಗುತ್ತಿರಲಿಲ್ಲ’ ಎಂದು ಖುಷಿಯಿಂದ ಹೇಳುತ್ತಾರೆ ರಶ್ಮಿಕಾ.
ಅಂದಹಾಗೆ, ರಶ್ಮಿಕಾ ಒಂದು ವಿಷಯವನ್ನು ಸೂಕ್ಷ್ಮವಾಗಿ ಗಮನಿಸಿದ್ದಾರೆ. ಆದೇನೆಂದರೆ ಇತ್ತೀಚಿನ ದಿನಗಳಲ್ಲಿ ಕನ್ನಡದ ನಟಿಯರಿಗೆ ಹೆಚ್ಚೆಚ್ಚು ಅವಕಾಶ ಸಿಗುತ್ತಿರುವುದು ಮತ್ತು ಕನ್ನಡದ ನಟಿಯರು ಮಿಂಚುತ್ತಿರೋದು.
“ಇತ್ತೀಚಿನ ದಿನಗಳಲ್ಲಿ ಕನ್ನಡದ ನಟಿಯರಿಗೆ ಒಳ್ಳೊಳ್ಳೆ ಅವಕಾಶಗಳು ಸಿಗುತ್ತಿವೆ. ಹಿಂದೆ ಮುಂಬೈಯಿಂದ ನಾಯಕಿಯರನ್ನು ಕರೆತರುತ್ತಿದ್ದರು. ಆದರೆ, ಈಗ ಕಾಲ ಬದಲಾಗಿದೆ. ಕನ್ನಡದ ನಟಿಯರಿಗೆ ಅವಕಾಶ ಕೊಡುತ್ತಿದ್ದಾರೆ. ಅದರಲ್ಲೂ ಹೊಸ ನಿರ್ದೇಶಕರು ಹೊಸ ಪ್ರತಿಭೆಗಳಿಗೆ ಅವಕಾಶ ಕೊಡುತ್ತಿದ್ದಾರೆ. ನಮ್ಮ ಕನ್ನಡದ ನಟಿಯರು ಕೂಡಾ ಅದನ್ನು ಚೆನ್ನಾಗಿ ಬಳಸಿಕೊಳ್ಳುತ್ತಿದ್ದಾರೆ’ ಎಂದು ಖುಷಿಯಿಂದ ಹೇಳುತ್ತಾರೆ ರಶ್ಮಿಕಾ.