BANTWAL
ಕಲ್ಲಡ್ಕ ವಿದ್ಯಾಕೇಂದ್ರಕ್ಕೆ ಅನುದಾನ ಕಟ್, ಸರಕಾರಕ್ಕೆ ಪ್ರಭಾಕರ್ ಭಟ್ ಟಾರ್ಗೆಟ್
ಪುತ್ತೂರು ಅಗಸ್ಟ್ 08 : ಆರ್.ಎಸ್.ಎಸ್ ಮುಖಂಡ ಡಾ.ಕಲ್ಲಡ್ಕ ಪ್ರಭಾಕರ್ ಭಟ್ ಅವರನ್ನು ಯಾವುದಾದರೂ ಕಾರಣಕ್ಕೂ ಮಣಿಸಬೇಕು ಎನ್ನುವ ನಿಟ್ಟಿನಲ್ಲಿ ಕಾರ್ಯಾಚರಿಸುತ್ತಿರುವ ರಾಜ್ಯ ಸರಕಾರ ಇದೀಗ ಪ್ರಭಾಕರ್ ಭಟ್ ಅಧ್ಯಕ್ಷರಾಗಿರುವ ಶ್ರೀರಾಮ ವಿದ್ಯಾಕೇಂದ್ರ ಹಾಗೂ ಶ್ರೀದೇವಿ ವಿದ್ಯಾಕೇಂದ್ರ ಪುಣಚಕ್ಕೆ ಕೊಲ್ಲೂರು ದೇವಸ್ಥಾನದಿಂದ ಬರುತ್ತಿದ್ದ ಅನುದಾನವನ್ನು ರದ್ದುಗೊಳಿಸಿದೆ.
2007 ರಿಂದ 2017 ರ ವರೆಗೆ ಸುಮಾರು 10 ವರ್ಷಗಳಿಂದ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದ ವತಿಯಿಂದ ಈ ಎರಡು ಶಾಲೆಗಳನ್ನು ದತ್ತು ತೆಗೆದುಕೊಂಡಿತ್ತು. ಈ ಕಾರಣಕ್ಕಾಗಿ ದೇವಸ್ಥಾನದ ವತಿಯಿಂದ ಸುಮಾರು 2.83 ಕೋಟಿ ರೂಪಾಯಿಗಳನ್ನು ಈ ಶಾಲೆಗಳ ಅಭಿವೃದ್ಧಿಗಾಗಿ ವ್ಯಯಿಸಲಾಗಿತ್ತು. ಆದರೆ ಇದೀಗ ರಾಜ್ಯ ಸರಕಾರ ಏಕಾಏಕಿ ಈ ಶಾಲೆಗಳಿಗೆ ನೀಡುತ್ತಿದ್ದ ಅನುದಾನವನ್ನು ರದ್ದುಗೊಳಿಸುವಂತೆ ರಾಜ್ಯ ಧಾರ್ಮಿಕ ಆಯುಕ್ತರ ಮುಖಾಂತರ ಆದೇಶ ಹೊರಡಿಸಿದೆ.
ಈ ನಿರ್ಧಾರದ ಹಿಂದೆ ಆರ್.ಎಸ್.ಎಸ್ ಮುಖಂಡ ಡಾ. ಪ್ರಭಾಕರ್ ಭಟ್ ಅವರನ್ನು ಟಾರ್ಗೆಟ್ ಮಾಡುವ ಷಡ್ಯಂತ್ರ ಕಾಣುತ್ತಿದ್ದು, ಸರಕಾರದ ಈ ನಿರ್ಧಾರದಿಂದ ಎರಡೂ ವಿದ್ಯಾಕೇಂದ್ರಗಳಲ್ಲಿ ಕಲಿಯುತ್ತಿರುವ ಸಾವಿರಾರು ಸಂಖ್ಯೆಯ ವಿದ್ಯಾರ್ಥಿಗಳಿಗೆ ಸಂಕಷ್ಟ ಎದುರಾಗಿದೆ.
ರಾಜಕೀಯ ಷಡ್ಯಂತ್ರ..ಡಾ. ಪ್ರಭಾಕರ್ ಭಟ್.
ಎರಡು ಶಾಲೆಗಳ ಅನುದಾನವನ್ನು ರದ್ದುಗೊಳಿಸುವುದರ ಹಿಂದೆ ರಾಜ್ಯ ಸರಕಾರದ ರಾಜಕೀಯ ಷಡ್ಯಂತ್ರವಿದೆ ಎಂದು ಡಾ. ಕಲ್ಲಡ್ಕ ಪ್ರಭಾಕರ್ ಭಟ್ ಪ್ರತಿಕ್ರಿಯಿಸಿದ್ದಾರೆ. ಪುತ್ತೂರು ವಿದ್ಯಾವರ್ಧಕ ಸಂಘದ ಅಧ್ಯಕ್ಷರಾಗಿರುವ ಡಾ. ಕಲ್ಲಡ್ಕ ಪ್ರಭಾಕರ್ ಭಟ್ ಆಡಳಿತಕ್ಕೊಳಪಟ್ಟ ಶ್ರೀರಾಮ ವಿದ್ಯಾಕೇಂದ್ರ ಕಲ್ಲಡ್ಕ ಹಾಗೂ ಶ್ರೀದೇವಿ ವಿದ್ಯಾಕೇಂದ್ರ ಪುಣಚ ದಲ್ಲಿ ಶೇಕಡಾ 98 ರಷ್ಟು ವಿದ್ಯಾರ್ಥಿಗಳು ಬಡ ಕುಟುಂಬಗಳಿಂದ ಬರುತ್ತಿದ್ದು, ರಾಜ್ಯ ಸರಕಾರದ ಈ ನಿರ್ಧಾರ ಬಡ ವಿದ್ಯಾರ್ಥಿಗಳ ಹೊಟ್ಟೆಗೆ ಹೊಡೆದಂತಾಗಿದೆ.
ಮುಖ್ಯಮಂತ್ರಿ ಸಿದ್ಧರಾಮಯ್ಯ ಬಾಯಿ ಬಿಟ್ಟಾಗಲೆಲ್ಲಾ ಅಹಿಂದಾ ಮಂತ್ರವನ್ನು ಹೇಳುತ್ತಿದ್ದು, ಈ ಅಹಿಂದಾ ವರ್ಗಕ್ಕೆ ಸೇರಿದ ಮಕ್ಕಳೇ ಈ ವಿದ್ಯಾಕೇಂದ್ರಗಳಲ್ಲಿ ಕಲಿಯುತ್ತಿದ್ದು, ರಾಜ್ಯ ಸರಕಾರದ ಈ ನಿರ್ಧಾರ ಅಹಿಂದ ವರ್ಗಕ್ಕೆ ನೀಡಿದ ಹೊಡೆತ ಎಂದೂ ಅವರು ಪ್ರತಿಕ್ರಿಯಿಸಿದ್ದಾರೆ.
ಕಲ್ಲಡ್ಕ ಪ್ರಭಾಕರ್ ಭಟ್ ವಿರುದ್ಧ ಇಡೀ ರಾಜ್ಯ ಸರಕಾರ ನಿಂತಿದ್ದು, ಯಾವುದಾದರೂ ಕಾರಣದಲ್ಲಿ ಭಟ್ಟರನ್ನು ನಿಯಂತ್ರಿಸುವ ಪ್ರಯತ್ನದಲ್ಲಿ ಸರಕಾರವೀಗ ನಿರತವಾಗಿದೆ. ಈ ಪ್ರಯತ್ನದ ಮೊದಲ ಭಾಗವಾಗಿ ಪ್ರಭಾಕರ್ ಭಟ್ ಮೇಲೆ ಇರುವ ಹಳೆಯ ಕೇಸುಗಳನ್ನು ಮರು ತನಿಖೆ ನಡೆಸುವುದಾಗಿತ್ತು.
ಬಳಿಕ ಇದೀಗ ಪ್ರಭಾಕರ್ ಭಟ್ ಆಡಳಿತಕ್ಕೊಳಪಟ್ಟ ವಿದ್ಯಾಕೇಂದ್ರಗಳನ್ನು ಟಾರ್ಗೆಟ್ ಮಾಡುವ ಹಂತಕ್ಕೆ ಸರಕಾರ ಮುಂದಡಿಯಿಟ್ಟಿರುವುದು ಕರಾವಳಿ ಭಾಗದ ಕೆಲವು ವರ್ಗಗಳ ಆಕ್ರೋಶಕ್ಕೂ ಕಾರಣವಾಗಿದೆ.