UDUPI
ಕಲೆ ಸಂಸ್ಕೃತಿ ಉಳಿವಿಗೆ ಯುವಜನತೆ ಮುಂದಾಗಿ-ದಿನಕರ ಬಾಬು
ಕಲೆ ಸಂಸ್ಕೃತಿ ಉಳಿವಿಗೆ ಯುವಜನತೆ ಮುಂದಾಗಿ-ದಿನಕರ ಬಾಬು
ಉಡುಪಿ, ಅಕ್ಟೋಬರ್ 23 : ನಾಡಿನ ಕಲೆ ಸಂಸ್ಕೃತಿ ಉಳಿಸುವಲ್ಲಿ ಯುವಕ ಯುವತಿಯರ ಸಕ್ರಿಯ ಪಾಲ್ಗೊಳ್ಳುವಿಕೆ ಅಗತ್ಯವಾಗಿದ್ದು, ಜನಪರ ಉತ್ಸವದಂತಹ ಕಾರ್ಯಕ್ರಮಗಳು ಈ ನಿಟ್ಟಿನಲ್ಲಿ ಪ್ರೋತ್ಸಾಹದಾಯಕವಾಗಿದೆ ಎಂದು ಉಡುಪಿ ಜಿಲ್ಲಾ ಪಂಚಾಯತ್ ಅಧ್ಯಕ್ಷ ದಿನಕರ ಬಾಬು ಹೇಳಿದರು.
ಅವರು ಅಕ್ಟೋಬರ್ 21ರಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಡುಪಿ, ಹಾಗೂ ನವಚೇತನ ಯುವಕ-ಯುವತಿ ಮಂಡಲ ಕಟ್ಟೆಗುಡ್ಡೆ, ಕುತ್ಪಾಡಿ ಉಡುಪಿ ಇದರ ಆಶ್ರಯದಲ್ಲಿ ಆಯೋಜಿಸಲಾದ ಜನಪರ ಉತ್ಸವ-2017 ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ನಮ್ಮ ಸಂಸ್ಕಂತಿಯನ್ನು ಉಳಿಸುವಲ್ಲಿ ಜಿಲ್ಲೆಯ ಯುವಕ, ಯುವತಿ ಮಂಡಲಗಳು ಉತ್ಸಾಹದಿಂದ ಕಾರ್ಯನಿರ್ವಹಿಸುತ್ತಿದ್ದು, ನವಚೇತನ ಯುವಕ ಯುವತಿ ಮಂಡಲದ ಕೊಡುಗೆಯನ್ನು ಈ ಸಂದರ್ಭದಲ್ಲಿ ಅವರು ಪ್ರಶಂಸಿಸಿದರು. ಈ ಸಲದ ಯುವಜನೋತ್ಸವಕ್ಕೆ ಇಲ್ಲಿಂದ 7 ತಂಡಗಳು ಭಾಗವಹಿಸಲಿರುವುದು ಹೆಮ್ಮೆಯ ವಿಷಯವಾಗಿದೆ, ಈ ರೀತಿಯಾಗಿ ನವಚೇತನ ಯುವಕ –ಯುವತಿ ಮಂಡಲ ಕಲೆ ಸಂಸ್ಕೃತಿ ಉಳಿಸುವಲ್ಲಿ ಶಕ್ತರಾಗಿದ್ದಾರೆ ಎಂದರು.
ಕಾರ್ಯಕ್ರಮದ ಅಧ್ಯಕ್ಷೆತೆ ವಹಿಸಿ ಮಾತನಾಡಿದ ಉಡುಪಿ ತಾಲೂಕು ಪಂಚಾಯತ್ ಅಧ್ಯಕ್ಷರಾದ ನಳಿನಿ ಪ್ರದೀಪ್ ರಾವ್, ಕಲಾ ಆರಾಧನೆಯಿಂದಾಗಿ ಮನುಷ್ಯ ಮಾನಸಿಕವಾಗಿ ಮತ್ತು ದೈಹಿಕವಾಗಿ ಸದೃಢಗೊಳ್ಳಲು ಸಾಧ್ಯ; ಸಣ್ಣ ಮಕ್ಕಳಿಗೆ ನಾಡಿನ ಕಲೆ ಸಂಸ್ಖಂತಿಯ ವಿಚಾರಧಾರೆ ಎರೆದರೆ ಮಕ್ಕಳು ದೇಶದ, ನಾಡಿನ ಉತ್ತಮ ಪ್ರಜೆಯಾಗಲು ಸಾಧ್ಯ, ಕಲೆ ಸಂಸ್ಕೃತಿ ಉಳಿದರೆ ದೇಶ ಏಳಿಗೆಯನ್ನು ಕಾಣುತ್ತದೆ ಎಂದರು.
ಉದ್ಯಾವರ ಗ್ರಾಮ ಪಂಚಾಯತ್ ಸದಸ್ಯ ಹಾಗೂ ಕಲಾವಿದರಾಗಿರುವ ಪ್ರದೀಪ್‍ಚಂದ್ರ ಕುತ್ಪಾಡಿ ಮಾತನಾಡಿ, ಕಲೆ ಮನುಷ್ಯನಿಗೆ ಬದುಕಲು, ವ್ಯಕ್ತಿತ್ವ ರೂಪಿಸಲು ಕಲಿಸುತ್ತದೆ ಎಂದರು. ಕಾರ್ಯಕ್ರಮದ ಮೊದಲು ಸ್ಥಳೀಯ ಕಲಾ ತಂಡದವರಿಂದ ಚೆಂಡೆ, ಕರಗ, ಸೋಮನಕುಣಿತ ವಲ್ಲದೆ, ಚಿತ್ರದುರ್ಗದ ಗಾರುಡಿ ಗೊಂಬೆ, ಕೀಲು ಕುದುರೆ ಕುಣಿತ, ರಾಮನಗರದ ಪೂಜಾ ಕುಣಿತ, ದಾವಣಗೆರೆ ತಂಡದಿಂದ ಡೊಳ್ಳು ಕುಣಿತ ಮೆರವಣಿಗೆಯನ್ನು ಅತ್ಯಾಕರ್ಷಕವಾಗಿಸಿತ್ತು. ಜಿಲ್ಲಾ ಪಂಚಾಯತ್ ಅಧ್ಯಕ್ಷ ದಿನಕರ ಬಾಬು ಅವರು ವರ್ಣರಂಜಿತ ಮೆರವಣಿಗೆಗೆ ಚಾಲನೆ ನೀಡಿದರು.