LATEST NEWS
ಕರಂಗಲ್ಪಾಡಿ ಫ್ಟ್ಯಾಟ್ ನಲ್ಲಿ ವೇಶ್ಯಾವಾಟಿಕೆ: 4 ಮಂದಿ ಸೆರೆ
ಕರಂಗಲ್ಪಾಡಿ ಫ್ಟ್ಯಾಟ್ ನಲ್ಲಿ ವೇಶ್ಯಾವಾಟಿಕೆ : 4 ಮಂದಿ ಸೆರೆ
ಮಂಗಳೂರು, ಅಕ್ಟೋಬರ್ 14 : ಮಂಗಳೂರು ನಗರದ ಕದ್ರಿ ಪೊಲೀಸ್ ಠಾಣಾ ವ್ಯಾಪ್ತಿಯ ಕರಂಗಲ್ಪಾಡಿಯ ಫ್ಲಾಟ್ ವೊಂದರಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದ ಪಿಂಪ್ ಗಳನ್ನು ಹಾಗೂ 2 ಮಂದಿ ಗಿರಾಕಿಗಳನ್ನು ಬಂಧಿಸುವಲ್ಲಿ ಮಂಗಳೂರು ಸಿಸಿಬಿ ಪೊಲೀಸರು ಯಶಸ್ವಿಯಾಗಿರುತ್ತಾರೆ.
ಕರಂಗಲ್ಪಾಡಿಯ ದಿವ್ಯಮಹಲ್ ಆಪಾರ್ಟ್ ಮೆಂಟ್ ನ 5 ನೇ ಮಹಡಿಯ 502 ಫ್ಲಾಟ್ ನಲ್ಲಿ ಯುವತಿಯರನ್ನು ಇಟ್ಟುಕೊಂಡು ವೇಶ್ಯಾವಾಟಿಕೆ ನಡೆಸುತ್ತಿದ್ದಾರೆಂಬ ಖಚಿತ ಮಾಹಿತಿಯಂತೆ ಮಂಗಳೂರು ಸಿಸಿಬಿ ಪೊಲೀಸರು ದಾಳಿ ನಡೆಸಿದ್ದಾರೆ.
ಈ ದಾಳಿ ಸಂದರ್ಭದಲ್ಲಿ ವೇಶ್ಯಾವಾಟಿಕೆಯಲ್ಲಿ ದಲ್ಲಾಳಿಯಾಗಿದ್ದ ಬಂಟ್ವಾಳ ವಗ್ಗದ ಸಂತೋಷ್ ಕುಮಾರ್, ಬಿಜೈ ಕಾಪಿಕಅಡಿನ ದೀಪಕ್, ತೊಕ್ಕೊಟ್ಟು ಪೆರ್ಮನ್ನೂರು ಬಬ್ಬುಕಟ್ಟೆಯ ನವೀನ್ ಹಾಗೂ ದಾನವೆಗೆರೆಯ ದಲ್ಲಾಳಿ ಮಹಿಳೆ ಅಶಾ ಜಿ. ಅವರುಗಳನ್ನು ವಶಕ್ಕೆ ಪಡೆದುಕೊಂಡು, ಅವರ ವಶದಿಂದ ನಗದು ಹಣ ರೂ. 31,500/- 7 ಮೊಬೈಲ್ ಫೋನ್ ಗಳು, 2 ಬೈಕ್ ಗಳು ಒಟ್ಟು ರೂ. 2,06,100/- ಮೌಲ್ಯದ ಸೊತ್ತನ್ನು ವಶಪಡಿಸಿಕೊಳ್ಳಲಾಗಿದೆ.
ಆರೋಪಿಗಳ ಪೈಕಿ ಅಶಾ ಎಂಬಾಕೆಯು ದಿವ್ಯಮಹಲ್ ಆಪಾರ್ಟ್ ಮೆಂಟ್ ನ್ನು ಬಾಡಿಗೆಗೆ ಪಡೆದು ಯುವತಿಯರನ್ನು ಈ ಫ್ಲಾಟ್ ನಲ್ಲಿ ಇಟ್ಟುಕೊಂಡು ಸಂತೊಷ್ ಎಂಬಾತನ ಸಹಾಯದೊಂದಿಗೆ ವೇಶ್ಯಾವಾಟಿಕೆ ದಂಧೆಗೆ ಬಳಸಿಕೊಂಡು ಹಣವನ್ನು ಗಳಿಸುತ್ತಿದ್ದರು.
ವೇಶ್ಯಾವಾಟಿಕೆ ವೃತ್ತಿ ನಡೆಸುತ್ತಿದ್ದ ಇಬ್ಬರು ನೊಂದ ಮಹಿಳೆಯರನ್ನು ರಕ್ಷಣೆ ಮಾಡಲಾಗಿದೆ. ಈ ಕೃತ್ಯದಲ್ಲಿ ಭಾಗಿಯಾದ 4 ಮಂದಿ ಆರೋಪಿಗಳನ್ನು ಹಾಗೂ ವಶಪಡಿಸಿಕೊಂಡ ಸೊತ್ತನ್ನು ಮುಂದಿನ ಕ್ರಮಕ್ಕಾಗಿ ಮಂಗಳೂರು ಪೂರ್ವ(ಕದ್ರಿ) ಪೊಲೀಸ್ ಠಾಣೆಗೆ ಹಸ್ತಾಂತರಿಸಲಾಗಿದೆ.
ನಗರ ಪೊಲೀಸ್ ಕಮೀಷನರ್ ಟಿ. ಆರ್ ಸುರೇಶ್ ರವರ ಆದೇಶದಂತೆ ಕಾನೂನು ಮತ್ತು ಸುವ್ಯವಸ್ಥೆಯ ಡಿ.ಸಿ.ಪಿ ಹನುಮಂತರಾಯ ಹಾಗೂ ಅಪರಾಧ ಹಾಗೂ ಸಂಚಾರ ವಿಭಾಗದ ಡಿ.ಸಿ.ಪಿ ಯವರಾದ ಉಮಾ ಪ್ರಶಾಂತ್ ರವರ ಮಾರ್ಗದರ್ಶನದಲ್ಲಿ ಸಿಸಿಬಿ ಘಟಕದ ಅಧಿಕಾರಿ ಹಾಗೂ ಸಿಬ್ಬಂದಿಗಳು ಪತ್ತೆಕಾರ್ಯದಲ್ಲಿ ಭಾಗವಹಿಸಿದ್ದರು.