Connect with us

DAKSHINA KANNADA

ಕಬಕದಲ್ಲಿ ಗಣಿ ಸ್ಪೋಟ,ವಿರೋಧಿಸಿದವರಿಗೆ ಜೈಲಿನೂಟ

ಪುತ್ತೂರು, ಆಗಸ್ಟ್ 30 : ಹಣ, ಅಧಿಕಾರ ಈ ಎರಡು ಇದ್ದರೆ ಯಾರ ಮೇಲೆಯೂ ಸವಾರಿ ಮಾಡಬಹುದು ಎನ್ನುವುದಕ್ಕೊಂದು ಸೂಕ್ತ ಉದಾಹರಣೆಯೊಂದು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿದೆ.

ಇಲ್ಲಿನ ಜನನಿಬಿಡ ಪ್ರದೇಶದಲ್ಲಿ ಕಳೆದ ಎರಡು ವರ್ಷಗಳಿಂದ ಅಕ್ರಮವಾಗಿ ಸ್ಪೋಟಕಗಳನ್ನು ಸ್ಪೋಟಿಸುವ ಮೂಲಕ ಈ ಭಾಗದ ಜನರ ನಿದ್ದೆಗೆಡಿಸಿದೆ ಈ ಅಕ್ರಮ ಗಣಿ ಮಾಫಿಯಾ. ಇಲ್ಲಿನ ಮನೆಗಳು ಇಂದೋ , ನಾಳೆಯೋ ಬೀಳುವ ಪರಿಸ್ಥಿತಿಯಲ್ಲಿದೆ.

ಪ್ರಭಾವಿ ಉದ್ಯಮಿಯೊಬ್ಬರು ಇಲ್ಲಿ ನಡೆಸುತ್ತಿರುವ ಕಪ್ಪು ಕಲ್ಲು ಗಣಿಗಾರಿಕೆಯೇ ಈ ಎಲ್ಲಾ ಸಮಸ್ಯೆಗಳಿಗೆ ಕಾರಣವಾಗಿದ್ದು, ಇದರ ಬಗ್ಗೆ ದೂರು ನೀಡಿದವರಿಗೆ ಪೋಲೀಸ್ ಕೇಸುಗಳೂ ಆಗುತ್ತಿದೆ. ಕಬಕ ಗ್ರಾಮಪಂಚಾಯತ್ ವ್ಯಾಪ್ತಿಗೆ ಬರುವ ಕಲ್ಲಂದಡ್ಕ ಎನ್ನುವ ಪ್ರದೇಶದಲ್ಲಿರುವ ಕಪ್ಪು ಕಲ್ಲಿನ ಕೋರೆ ಇದೀಗ ಈ ಭಾಗದ ಜನರ ಜೀವನವನ್ನೇ ನುಂಗುವಂತಹ ಸ್ಥಿತಿಗೆ ತಂದೊಡ್ಡಿದೆ.

ತೀವ್ರ ತರನಾದ ಸ್ಪೋಟಕಗಳ ಬಳಕೆ

ಪ್ರಭಾವಿ ಉದ್ಯಮಿಯೋರ್ವರು ಇಲ್ಲಿ ಕಳೆದ ನಾಲ್ಕು ವರ್ಷಗಳಿಂದ ಗಣಿಗಾರಿಕೆಯನ್ನು ನಡೆಸಿಕೊಂಡು ಬರುತ್ತಿದ್ದು, ಇಲ್ಲಿ ನಡೆಸುವ ಸ್ಪೋಟದಿಂದಾಗಿ ಆಸುಪಾಸಿನ 45 ಕ್ಕೂ ಮಿಕ್ಕಿದ ಮನೆಗಳಿಗೆ ತೊಂದರೆಯಾಗುತ್ತಿದೆ. ದಿನಕ್ಕೆ ಎರಡು ಬಾರಿ ಸ್ಪೋಟಕ ಕಾಯ್ದೆಯನ್ನು ಮೀರಿ ಅತ್ಯಂತ ಹೆಚ್ಚು ಪರಿಣಾಮಕಾರಿಯಾದ ಸ್ಪೋಟಕಗಳನ್ನು ಇಲ್ಲಿ ಸಿಡಿಸಿ ಕಪ್ಪು ಕಲ್ಲುಗಳನ್ನು ಒಡೆಯಲಾಗುತ್ತಿದೆ.

ಹೀಗೆ ಸ್ಪೋಟಕಗಳನ್ನು ಒಡೆದ ಪರಿಣಾಮ ಕೇವಲ ಕಲ್ಲುಗಳು ಒಡೆಯುವುದಲ್ಲದೆ, ಪಕ್ಕದ ಇರುವ ಮನೆಯ ಗೋಡೆಗಳೂ ಒಡೆಯುತ್ತಿದೆ. ಇಲ್ಲಿರುವ ಎಲ್ಲಾ ಮನೆಗಳ ಕಥೆಯೂ ಇದೇ ಆಗಿದ್ದು, ಬಿರುಕಿಲ್ಲದ ಮನೆಗಳೇ ಇಲ್ಲಿಲ್ಲ. ತಮಗಾಗುತ್ತಿರುವ ಸಮಸ್ಯೆಯ ಕುರಿತಂತೆ ಅಧಿಕಾರಿಗಳಿಗೆ ದೂರು ನೀಡಿದ್ದಲ್ಲಿ, ದೂರು ನೀಡಿದ ವ್ಯಕ್ತಿಯ ವಿರುದ್ಧ ಪೋಲೀಸ್ ಪ್ರಕರಣವು ದಾಖಲಾಗುತ್ತದೆ ಎನ್ನುತ್ತಾರೆ ಸ್ಥಳೀಯ ನಿವಾಸಿ ಬಶೀರ್ ಅಹಮ್ಮದ್.ಕಳೆದ ನಾಲ್ಕು ವರ್ಷಗಳಿಂದ ನಿರಂತರವಾಗಿ ಇಲ್ಲಿ ಕಪ್ಪು ಕಲ್ಲು ಗಣಿಗಾರಿಕೆಯನ್ನು ನಡೆಸಿಕೊಂಡು ಬರಲಾಗುತ್ತಿದ್ದು, ಮೊದಲಿಗೆ ಭೂಮಿಯ ಮೇಲಿರುವ ಕಲ್ಲುಗಳನ್ನು ಸ್ಪೋಟಿಲಾಗುತ್ತಿತ್ತು. ಆ ಸಂದರ್ಭದಲ್ಲಿ ಅದರ ಪರಿಣಾಮ ಅಷ್ಟೊಂದು ಪ್ರಮಾಣದಲ್ಲಿ ಇಲ್ಲಿರುವ ಮನೆಗಳ ಮೇಲೆ ಆಗದ ಪರಿಣಾಮ ಈ ಬಗ್ಗೆ ಸ್ಥಳೀಯ ಜನ ಹೆಚ್ಚಾಗಿ ತಲೆ ಕೆಡಿಸಿಕೊಂಡಿರಲಿಲ್ಲ.

ಆದರೆ ಇದೀಗ ಭೂಮಿಯ ಅಡಿಭಾಗದಲ್ಲಿರುವ ಕಲ್ಲುಗಳನ್ನು ಒಡೆಯುವ ಪ್ರಕ್ರಿಯೆ ನಡೆಯುತ್ತಿದ್ದು, ಇದರ ಪರಿಣಾಮ ಇದೀಗ ಗಣಿಗಾರಿಕೆಯ ನಡೆಯುತ್ತಿರುವ ಪ್ರದೇಶದ ಆಸುಪಾಸಿನಲ್ಲಿ ಇರುವ ಮನೆಗಳ ಮೇಲೆ ಬಿದ್ದಿದೆ. ಕೂಡಲೇ ಗಣಿಗಾರಿಕೆಯನ್ನು ನಿಲ್ಲಿಸಿ ತಮ್ಮ ಮನೆಗಳಿಗೆ ರಕ್ಷಣೆ ನೀಡಬೇಕೆಂದು ಅಧಿಕಾರಿಗಳಿಗೆ ಮನವಿ ಮಾಡಿದ ತಕ್ಷಣವೇ ಪುತ್ತೂರು ನಗರ ಪೋಲೀಸರು ದೂರು ನೀಡಿದವರ ಮನೆಗೆ ನುಗ್ಗಿ ಕೇಸು ಹಾಕುವಂತಹ ಪ್ರಕ್ರಿಯೆ ನಡೆಯುತ್ತಿದೆ ಎನ್ನುವ ಆರೋಪವೂ ಇದೀಗ ಸ್ಥಳೀಯ ಜನರಿಂದ ಕೇಳಿಬರುತ್ತಿದೆ.

ಗಣಿ ಮಾಲಿಕರ ಕಡೆಯವರು ಕೇವಲ ಮೊಬೈಲ್ ಮಿಸ್ ಕಾಲ್ ಕೊಟ್ಟರೆ ಸಾಕು ಪೋಲೀಸರು ಬಂದು ಗಣಿಗಾರಿಕೆಗೆ ವಿರೋಧ ವ್ಯಕ್ತಪಡಿಸುವವರ ಮೇಲೆ ಕೇಸು ಜಡಿದು ಹೋಗುತ್ತಿದ್ದಾರೆ ಎನ್ನುತ್ತಾರೆ ಇನ್ನೋರ್ವ ನಿವಾಸಿ ಅಬ್ದುಲ್ ಖಾದರ್.
ಕಲ್ಲು ಗಣಿಗಾರಿಕೆಯನ್ನು ನಡೆಸುತ್ತಿರುವ ಉದ್ಯಮಿ ವಿರುದ್ಧ ಈ ಹಿಂದೆ ಅಕ್ರಮವಾಗಿ ಸ್ಪೋಟಕ ದಾಸ್ತಾನಿರಿಸಿದ ಬಗ್ಗೆ ಪೋಲೀಸ್ ಪ್ರಕರಣವೂ ದಾಖಲಾಗಿತ್ತು.

ಇದೀಗ ಮತ್ತೆ ಸ್ಪೋಟಕ ಕಾಯ್ದೆಯ ನಿಯಮವನ್ನು ಮೀರಿ ತನ್ನ ಕಲ್ಲು ಗಣಿಗಾರಿಕೆಯಲ್ಲಿ ಸ್ಪೋಟಕಗಳನ್ನು ಬಳಸುತ್ತಿದ್ದಾರೆ ಎನ್ನುವ ಆರೋಪಗಳೂ ಕೇಳಿಬರುತ್ತಿದೆ. ಆದರೆ ಈ ಬಗ್ಗೆ ದೂರು ನೀಡಿದವರ ವಿರುದ್ಧವೇ ಪ್ರಕರಣಗಳು ದಾಖಲಾಗುತ್ತಿರುವುದರಿಂದ ಹೆಚ್ಚಿನ ಜನ ಮೌನವಾಗಿಯೇ ತನ್ನ ಸಂಕಷ್ಟಗಳನ್ನು ಸಹಿಸಿಕೊಳ್ಳಬೇಕಾದ ಪರಿಸ್ಥಿತಿಯೂ ನಿರ್ಮಾಣವಾಗಿದೆ.ಸಂಬಂಧಪಟ್ಟವರು ಈ ಕೂಡಲೇ ಎಚ್ಚೆತ್ತುಕೊಳ್ಳಬೇಕು ಮತ್ತು ಈ ಗಣಿ ಮಾಫಿಯಕ್ಕೆ ಕಡಿವಾಣ ಹಾಕಬೇಕಿದೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *