UDUPI
ಅರಣ್ಯದಲ್ಲಿ ಅಕ್ರಮ ಗಣಿಗಾರಿಕೆ : ಈ ಪುಡಾರಿಗಿಲ್ಲ ಯಾರದ್ದೂ ಹೆದರಿಕೆ …!

ಉಡುಪಿ, ಅಗಸ್ಟ್ 19 : ಅದು ಕಸ್ತೂರಿ ರಂಗನ್ ವ್ಯಾಪ್ತಿಗೆ ಒಳಪಟ್ಟ ಪಶ್ಚಿಮಘಟ್ಟದ ತಪ್ಪಲಿನ ಪ್ರದೇಶ. ಈ ರಾಷ್ಟ್ರೀಯ ಉದ್ಯಾನವನದ ವ್ಯಾಪ್ತಿಯಲ್ಲಿ ಗಣಿಗಾರಿಕೆ ಮಾಡುವುದಕ್ಕೆ ಯಾವುದೇ ಅವಕಾಶವಿಲ್ಲ. ಆದರೂ ಇಲ್ಲಿನ ಪುಡಿ ರಾಜಕಾರಣಿಯೊಬ್ಬ ತನ್ನ ಅಧಿಕಾರ ದುರುಪಯೋಗಪಡಿಸಿಕೊಂಡು ಅಕ್ರಮ ಕಲ್ಲುಕೋರೆಯನ್ನು ನಡೆಸುತ್ತಿದ್ದಾರೆ.
ಹೌದು, ಇದು ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಚಾರ ಪಂಚಾಯತ್ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಅಕ್ರಮ ಕೆಂಪುಕಲ್ಲು ಗಣಿಗಾರಿಕೆ ಪ್ರದೇಶ. ಈ ಅಕ್ರಮ ಕಲ್ಲುಗಣಿಗಾರಿಕೆ ನಡೆಸುತ್ತಿರುವುದು ಈ ಚಾರ ಪಂಚಾಯತ್‌ನ ಸದಸ್ಯ ದಿನೇಶ್ ಶೆಟ್ಟಿ . ಅದೂ ಸರ್ಕಾರಿ ಜಾಗದಲ್ಲಿ. ಗೋಮಾಳ ಪ್ರದೇಶದಲ್ಲಿ ಕಾನೂನುಗಳನ್ನು ಗಾಳಿಗೆ ತೂರಿ ಭೂಗರ್ಭವನ್ನು ಅಗೆದು ಅಕ್ರವಾಗಿ ಕೆಂಪು ಕಲ್ಲುಗಳನ್ನು ಕತ್ತರಿಸಿ ಮಾರಾಟಮಾಡುತ್ತಿದ್ದಾನೆ. ಚಾರ ಪಂಚಾಯತ್‌ನಿಂದ ಕೇವಲ ಒಂದೇ ಕಿಲೋ ಮೀಟರ್ ದೂರದಲ್ಲಿ ಈ ಅಕ್ರಮ ಕೆಂಪು ಕಲ್ಲು ಗಣಿಗಾರಿಕೆ ನಡೆಯುತಿದ್ದರೂ ಅಧಿಕಾರಿಗಳು ಮತ್ತು ಜಿಲ್ಲಾಡಳಿತ ಮಾತ್ರ ಹಗಲು ನಿದ್ದೆ ಮಾಡುತ್ತಿದೆ.ಕಾರಣ ಗ್ರಾಮ ಪಂಚಾಯತ್ ಸದಸ್ಯ ದಿನೇಶನ ರಾಜಕಾರಣ. ದೊಡ್ಡವರ ಹೆಸರುಗಳನ್ನು ಹೇಳಿಕೊಂಡು ಸ್ಥಳೀಯ ಮುಗ್ದ ಗ್ರಾಮಸ್ಥರನ್ನು ಹೆದರಿಸಿ-ಬೆದರಿಸಿ ಗಣಿಕಾರಿಕೆ ನಡೆಸುತ್ತಿದ್ದಾನೆ. ಈತನ ಈ ಕಲ್ಲು ಗಣಿಗಾರಿಕೆಯಿಂದಾಗಿ ಇಲ್ಲಿನ ರಸ್ತೆಗಳೆಲ್ಲವು ಹಾಳಾಗಿ ಹೋಗಿದೆ. ಸುತ್ತಮುತ್ತಲಿನ ಮನೆಯವರು ಯಂತ್ರದ ಶಬ್ದದಿಂದ ಕಳೆದ ಅಣೆಕ ತಿಂಗಳುಗಳಿಂದ ನೆಮ್ಮದಿಯ ನಿದ್ದೆಯನ್ನೇ ಮರೆತಿದ್ದಾರೆ.!!. ಈ ಬಗ್ಗೆ ಗ್ರಾಮಸ್ಥರು ವಿ.ಎ, ತಹಶೀಲ್ದಾರ್ ಅವರ ಗಮನಕ್ಕೆ ತಂದಿದ್ದರೂ ಯಾವುದೇ ಕ್ರಮವಾಗುತ್ತಿಲ್ಲ ಎಂದರೇ ನೀವೇ ಊಹಿಸಿ ದಿನೇಶನ ಮಹಿಮೆಯ ಪ್ರಭಾವ..! ಇದೀಗ ಈ ಪುಡಿ ರಾಜಕರಣಿ ವಿರುದ್ದ ಸ್ಥಳೀಯ ಜನತೆ, ಗ್ರಾಮಸ್ಥರು ತಿರುಗಿಬಿದ್ದಿದ್ದಾರೆ. ಈಗಾಗಲೇ ಜಿಲ್ಲಾಧಿಕಾರಿಗೆ ಲಿಖಿತ ರೂಪದಲ್ಲಿ ದೂರು ಸಲ್ಲಿಸಿದ್ದಾರೆ, ಇದಕ್ಕೆ ಸ್ಪಂದನೆ ದೊರೆಯದೆ ಹೋದಲ್ಲಿ ಅಕಾಡಕ್ಕೆ ಇಳಿದು ಕೋರೆಯನ್ನು ಶಾಶ್ವತವಾಗಿ ಬಂದ್ ಮಾಡಲು ಅಣಿಯಾಗುತ್ತಿದ್ದಾರೆ. ಇದಕ್ಕೆ ಅವಕಾಶ ಕೊಡದೆ ಜಿಲ್ಲಾಧಿಕಾರಿಗಳು ಕ್ರಮ ಕೈಗೊಳ್ಳಬೇಕಿದೆ.