ಮಂಗಳೂರು,ಆಗಸ್ಟ್ 21 : ಆರ್ ಎಸ್ ಎಸ್ ಕಾರ್ಯಕರ್ತ ಶರತ್ ಮಡಿವಾಳ ಹತ್ಯೆ ಪ್ರಕರಣದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸರಿಗೆ ಭಾರೀ ಯಶಸ್ಸು ಕಂಡು ಬರುತ್ತಿದೆ. ಶರತ್ ಮಡಿವಾಳ ಹತ್ಯೆ ಮಾಡಿದ ಪ್ರಮುಖ ಮೂವರು ಆರೋಪಿಗಳಲ್ಲಿ ಒಬ್ಬನನ್ನು ಬಂಧಿಸುವಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸರು ಯಶಸ್ವಿಯಾಗಿದೆ. ಬಂಧಿತ ಆರೋಪಿಯನ್ನು ಶರೀಫ್ ಎಂದು ಗುರುತಿಸಲಾಗಿದ್ದು ಈತನನ್ನು ಮೈಸೂರಿನಿಂದ ಬಂಧಿಸಿ ಕರೆತರಲಾಗಿದೆ. ಈತ ಶರತ್ ಹತ್ಯೆ ಪ್ರಕರಣದಲ್ಲಿ ನೇರವಾಗಿ ಭಾಗಿಯಾಗಿದ್ದ ಎಂದು ಪೋಲಿಸ್ ಮೂಲಗಳು ಹೇಳಿವೆ. ಇವನ ಬಂಧನದಿಂದ ಶರತ್ ಮಡಿವಾಳ ಹತ್ಯೆ ಪ್ರಕರಣದಲ್ಲಿ ಬಂಧಿತರಾಗಿರುವ ಒಟ್ಟು ಸಂಖ್ಯೆ ಎಂಟಕ್ಕೆ ಏರಿದೆ. ಪ್ರಕರಣದ ಪ್ರಮುಖ ಆರೋಪಿಗಳಲ್ಲಿ ಮತ್ತೊಬ್ಬ ಆರೋಪಿ ಇಬ್ರಾಹಿಂ ಈಗಾಗಲೇ ವಿದೇಶಕ್ಕೆ ಪರಾರಿಯಾಗಿರುವ ಸಂಶಯ ವ್ಯಕ್ತಪಡಿಸಲಾಗಿದೆ. ಈ ನಿಟ್ಟಿನಲ್ಲಿ ಪೊಲೀಸರು ತನಿಖೆ ಆರಂಭಿಸಿದ್ದು ವಿದೇಶಕ್ಕೆ ಪರಾರಿಯಾಗಿರುವ ಈತನ ಬಂಧನಕ್ಕೂ ಪೊಲೀಸರು ತಂತ್ರ ರೂಪಿಸುತ್ತಿದ್ದು ಇದಕ್ಕಾಗಿ ಇಂಟರ್ ಪೋಲ್ ನೆರವು ಪಡೆಯಲು ಬೇಕಾದ ಕ್ರಮಗಳನ್ನು ಆರಂಭಿಸಿದೆ. ಜುಲೈ 4 ರಂದು ಬಂಟ್ವಾಳದ ಬಿ. ಸಿ ರೋಡ್ ಎಂಬಲ್ಲಿ ರಾತ್ರಿ ತನ್ನ ಲಅಂಡ್ರಿ ಅಂಗಡಿಯ ಬಾಗಿಲು ಮುಚ್ಚಿ ಮನೆಗೆ ಹೋಗುವ ಸಂದರ್ಭದಲ್ಲಿ ಬೈಕಿನಲ್ಲಿ ಬಂದ 3 ಮಂದಿ ದುಷ್ಕರ್ಮಿಗಳ ತಂಡ ಶರತ್ ಮಡಿವಾಳ್ ಅವರನ್ನು ಮಾರಕಾಸ್ತ್ರಗಳಿಂದ ಕಡಿದು ಹತ್ಯೆ ಮಾಡಿ ಪರಾರಿಯಾಗಿತ್ತು.