ಮಂಗಳೂರು,ಆಗಸ್ಟ್ 22 : ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿದ್ದ ದಕ್ಷಿಣಕನ್ನಡ ಜಿಲ್ಲೆಯ ಬಿ.ಸಿ.ರೋಡ್ ನಲ್ಲಿ ನಡೆದ ಆರ್ ಎಸ್ ಎಸ್ ಕಾರ್ಯಕರ್ತ ಶರತ್ ಮಡಿವಾಳ ಹತ್ಯೆಯ ಮತ್ತೊಬ್ಬ ಪ್ರಮುಖ ಆರೋಪಿಯನ್ನು ದಕ್ಷಿಣ ಕನ್ನಡ ಜಿಲ್ಲಾ ಪೋಲೀಸರು ಬಂಧಿಸಿದ್ದಾರೆ. ಶರತ್ ಹತ್ಯೆಯಲ್ಲಿ ನೇರವಾಗಿ ಭಾಗಿಯಾಗಿದ್ದ ಶರೀಫ್ ಜೊತೆ ಕೃತ್ಯಕ್ಕೆ ಸಹಕರಿಸಿದ ಜಬ್ಬಾರ್ ಎನ್ನುವವನನ್ನೂ ಪೋಲೀಸರು ವಶಕ್ಕೆ ಪಡೆದುಕೊಂಡಿದ್ದು, ನ್ಯಾಯಾಲಯ ಆತನನ್ನು 7 ದಿನಗಳ ಕಾಲ ಪೋಲೀಸ್ ಕಸ್ಟಡಿಗೆ ನೀಡಿದೆ. ಶರತ್ ಹತ್ಯೆ ಸಂಬಂಧಿಸಿದಂತೆ ದಕ್ಷಿಣಕನ್ನಡ ಜಿಲ್ಲಾ ಪೋಲೀಸರು ಈಗಾಗಲೇ ಒಟ್ಟು 9 ಜನ ಆರೋಪಿಗಳನ್ನು ಬಂಧಿಸಿದ್ದು, ಇನ್ನೂ ಹಲವರಿಗಾಗಿ ಪೋಲೀಸರು ಶೋಧ ಕಾರ್ಯ ನಡೆಸುತ್ತಿದ್ದಾರೆ. ಜುಲೈ 4 ರಂದು ರಾತ್ರಿ ಸುಮಾರು 9 ಗಂಟೆಯ ವೇಳೆಗೆ ಬಿ.ಸಿ.ರೋಡ್ ನಲ್ಲಿರುವ ತನ್ನ ಲಾಂಡ್ರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಶರತ್ ನನ್ನು ಬೈಕಿನಲ್ಲಿ ಬಂದ ಮೂವರಿದ್ದ ತಂಡ ತಲೆಗೆ ಕಡಿದು ಹತ್ಯೆ ಮಾಡಿತ್ತು.