DAKSHINA KANNADA
ನಕ್ಸಲ್ ಚಟುವಟಿಕೆ ಆರೋಪ, ಆರೋಪಿಗಳಿಗೆ ನ್ಯಾಯಾಲಯದಿಂದ ಜಾಮೀನು
ಮಂಗಳೂರು, ಆಗಸ್ಟ್ 16 : ನಕ್ಸಲ್ ಚಟುವಟಿಕೆಗೆ ಬೆಂಬಲ ನೀಡಿದ ಹಿನ್ನಲೆಯಲ್ಲಿ ಬೆಳ್ತಂಗಡಿ ತಾಲೂಕಿನ ಕುತ್ಲೂರು ನಿವಾಸಿಗಳಾದ ವಿಠಲ ಮಲೆಕುಡಿಯ ಹಾಗೂ ಆತನ ತಂದೆ ಲಿಂಗಪ್ಪ ಮಲೆಕುಡಿಯ ವಿರುದ್ಧ ಪೋಲೀಸರು ಇದೀಗ ನ್ಯಾಯಾಲಯಕ್ಕೆ ಚಾರ್ಚ್ ಶೀಟ್ ಸಲ್ಲಿಸಿದ್ದಾರೆ. ಈ ಸಂಬಂಧ ದಕ್ಷಿಣ ಕನ್ನಡ ಜಿಲ್ಲಾ ಮೂರನೇ ಹೆಚ್ಚುವರಿ ಜಿಲ್ಲಾ ನ್ಯಾಯಾಲಯದಿಂದ ಸಮನ್ಸ್ ಬಂದ ಹಿನ್ನಲೆಯಲ್ಲಿ ಇಂದು ವಿಠಲ ಮಲೆಕುಡಿಯ ಹಾಗೂ ಲಿಂಗಪ್ಪ ಮಲೆಕುಡಿಯ ನ್ಯಾಯಾಲಯಕ್ಕೆ ಹಾಜರಾಗಿದ್ದರು. ದಕ್ಷಿಣ ಕನ್ನಡ ಜಿಲ್ಲಾ ಪೋಲೀಸರು ನ್ಯಾಯಾಲಯಕ್ಕೆ ಸಲ್ಲಿಸಿದ ದೋಷಾರೋಪಣ ಪಟ್ಟಿಯಲ್ಲಿ ವಿಕ್ರಮ್ ಗೌಡ, ಪ್ರದೀಪ್, ಜಾನ್, ಸುಂದರಿ ಹಾಗೂ ಪ್ರಭಾ ಎನ್ನುವ ಆರೋಪಿಗಳು ಭಾರತ ಸರಕಾರದಿಂದ ನಿಷೇಧಿತ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾದ ಮಾರ್ಕಿಸ್ಟ್ ಲೆನಿನಿಷ್ಟ್ ಪೀಪಲ್ ವಾರ್ ಇದರ ಅಂಗಸಂಸ್ಥೆಯಾದ ಸಿ.ಪಿ.ಐ ಮಾವೋವಾದಿ ನಕ್ಸಲ್ ಸಂಘಟನೆಗೆ ಸೇರಿದವರಾಗಿದ್ದು, ಆರೋಪಿಗಳು ತಮ್ಮ ನಕ್ಸಲ್ ಸಂಘಟನೆಯನ್ನು ಬಲಪಡಿಸುವ ಉದ್ದೇಶದಿಂದ ಬೆಳ್ತಂಗಡಿ ತಾಲೂಕಿನ ವೇಣೂರು ಪೋಲೀಸ್ ಠಾಣಾ ವ್ಯಾಪ್ತಿಯ ಕುತ್ಲೂರು ಅರಣ್ಯ ಪ್ರದೇಶದಲ್ಲಿ ತಲೆಮರೆಸಿಕೊಂಡು ಸ್ಥಳೀಯ ಬುಡಕಟ್ಟು ಜನಾಂಗದವರಿಗೆ ಸರಕಾರದ ವಿರುದ್ದ ಸಿಡಿದೇಳುವಂತೆ ಮನವೊಲಿಸಿ ನಕ್ಸಲ್ ಸಂಘಟನೆಯನ್ನು ಬೆಂಬಲಿಸುವಂತೆ ಮಾಡಿ ಸರಕಾರವನ್ನು ಬಡುಮೇಲು ಮಾಡುವ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗಿದ್ದು, ಈ ಮೇಲ್ಕಂಡ ಆರೋಪಿಗಳು ನಡೆಸುತ್ತಿದ್ದ ನಕ್ಸಲ್ ಸಭೆಗಳಲ್ಲಿ ಭಾಗಿಯಾಗುವ ಹಾಗೂ ಅವರಿಗೆ ಸಹಾಯ ಮಾಡುತ್ತಿದ್ದ ಹಾಗೂ ನಕ್ಸಲ್ ಕರಪತ್ರಗಳನ್ನು ಹಂಚುವ, ಚುನಾವಣಾ ಬಹಿಷ್ಕಾರದ ಕರಪತ್ರಗಳನ್ನು ಹಂಚುವ ಕಾರ್ಯದಲ್ಲಿ ತೊಡಗಿದ್ದ ಆರೋಪ ವಿಠಲ್ ಮಲೆಕುಡಿಯ ಹಾಗೂ ಆತನ ತಂದೆ ಲಿಂಗಪ್ಪ ಮಲೆಕುಡಿಯರ ಮೇಲಿದ್ದು, ಈ ಹಿನ್ನಲೆಯಲ್ಲಿ ಇಬ್ಬರೂ ಆರೋಪಿಗಳು ಇಂದು ನ್ಯಾಯಾಲಯದ ಮುಂದೆ ಹಾಜರಾಗಿದ್ದರು. ನ್ಯಾಯಾಲಯ ಇಬ್ಬರಿಗೂ ಜಾಮೀನು ಮಂಜೂರು ಮಾಡಿದ್ದು, ಮುಂದಿನ ವಿಚಾರಣೆಯನ್ನು ಆಕ್ಟೋಬರ್ 11 ಕ್ಕೆ ಮುಂದೂಡಿದೆ.
You must be logged in to post a comment Login