PUTTUR
ರಿಯಲ್ ಹೀರೋ ‘ಕ್ಯಾಪ್ಟನ್ ರಾಧೇಶ್ ‘
ಪುತ್ತೂರು,ಜುಲೈ18: ರೀಲ್ ನಲ್ಲಿ ಹಿರೋಗಿರಿಯನ್ನು ತೋರಿಸಿ ಅಸಂಖ್ಯಾತ ಅಭಿಮಾನಿಗಳನ್ನು ಗಿಟ್ಟಿಸಿರುವವರ ಮಧ್ಯೆ ರಿಯಲ್ ಹಿರೋಗಳು ತೆರೆಯಲ್ಲೇ ಮರೆಯಾಗುತ್ತಾರೆ. ಅಂಥ ರಿಯಲ್ ಹಿರೋಗಳೇ ನಮ್ಮ ಹೆಮ್ಮೆಯ ಸೈನಿಕರು. ಈ ಹಿರೋಗಳಿಗೆ ನಟನೆ ಮಾಡಿ ಗೊತ್ತಿಲ್ಲ, ಆ ಕಾರಣಕ್ಕಾಗಿಯೇ ಅವರ ಪ್ರತಿ ಮಾತೂ ದೇಶಭಕ್ತಿಯ ಕಿಚ್ಚು ಹತ್ತಿಸುತ್ತದೆ. ಹೌದು ಇಲ್ಲಿ ನಾವು ಹೇಳ ಹೊರಟಿರೋದು ಐದು ವರ್ಷಗಳ ಸತತ ಪ್ರಯತ್ನ ಮಾಡಿ ಇಂದು ವಿಶ್ವದ ಪ್ರತಿಷ್ಟಿತ ಸೇನೆಯ ಕ್ಯಾಪ್ಟನ್ ಆಗಿ ಹೊರಹೊಮ್ಮಿದ ಯುವಕನ ಬಗ್ಗೆ. ಹೌದು ಇದು ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರಿನ ಧೀರ ಸೈನಿಕನ ಇಂಟ್ರೆಸ್ಟಿಂಗ್ ಸ್ಟೋರಿ. ಅಂದ ಹಾಗೆ ಈ ಯುವಕ ಮಾತ್ರವಲ್ಲದೆ, ಈತನ ಇಡೀ ಕುಟುಂಬವೇ ದೇಶಸೇವೆಯಲ್ಲಿ ತೊಡಗಿಸಿಕೊಂಡಿದೆ.
ಇದು ಕ್ಯಾಪ್ಟನ್ ರಾಧೇಶ್ ಎನ್ನುವ ಯುವಕನ ಸಾಹಸದ ಕಥೆ. ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರಿನ ನಿವಾಸಿ ಮಾಜಿ ಸೈನಿಕ ರಾಧಾಕೃಷ್ಣ ಗೌಡ ಹಾಗೂ ಉಷಾ ದಂಪತಿಗಳ ಎರಡನೇ ಮಗ. ವಿಶ್ವದ ಅತೀ ಎತ್ತರದ ಯುದ್ಧ ಭೂಮಿ ಹಾಗೂ ಕ್ಲಿಷ್ಟಕರ ಯುದ್ಧ ಭೂಮಿಯೆಂದೇ ಖ್ಯಾತವೆತ್ತ ಸಿಯಾಚಿನ್ ನಲ್ಲಿ ಎರಡು ವರ್ಷಗಳ ಕಾಲ ಭೂ ಸೇನೆಯ 18 ನೇ ಗ್ರೇನೇಡಿಯರ್ಸ್ ಬೆಟಾಲಿಯನ್ ಗೆ ಲೆಫ್ಟಿನೆಂಟ್ ಆಗಿ ಕಾರ್ಯನಿರ್ವಹಿಸಿರುವ ಇವರು ಇದೀಗ ಕ್ಯಾಪ್ಟನ್ ಆಗಿ ಪದೋನ್ನತಿ ಹೊಂದಿ ಕಾರ್ಗಿಲ್ ನತ್ತ ಪಯಣ ಬೆಳೆಸಿದ ಯುವಕ. ಎಂ.ಟೆಕ್ ಶಿಕ್ಷಣವನ್ನು ಪಡೆದಿರುವ ಕ್ಯಾಪ್ಟನ್ ರಾಧೇಶ್ ಗೆ ಚಿಕ್ಕಂದಿನಿಂದಲೂ ಸೇನೆಯಲ್ಲಿ ಕಾರ್ಯನಿರ್ವಹಿಸಬೇಕೆಂಬ ಹಂಬಲ.ಇದಕ್ಕಾಗಿ ಐದು ವರ್ಷಗಳ ಕಾಲ ಸತತ ಪ್ರಯತ್ನ ನಡೆಸಿದ ರಾಧೇಶ್ ಇದೀಗ ಸೇನೆಯ ಎಲ್ಲಾ ಪರೀಕ್ಷೆಗಳನ್ನು ಎದುರಿಸಿ ಕ್ಯಾಪ್ಟನ್ ಹಂತದವರೆಗೆ ತಲುಪಿದ ಧೀರ ಯೋಧ.
ಸಿಯಾಚಿನ್ ಹಿಮಗಳ ನಡುವಿನ ತನ್ನ ಅನುಭವವನ್ನು ಹೇಳುವಾಗ ಯೋಧರ ಬಗೆಗಿನ ಗೌರವ ದುಪ್ಪಟ್ಟಾಗುತ್ತಿದ್ದು, ಯೋಧರ ಬಗ್ಗೆ ಹಗುರವಾಗಿ ಮಾತನಾಡುವರ ಮೇಲೆ ರೋಷ ಕುದಿಯುತ್ತದೆ. ಸಿಯಾಚಿನ್ ಗ್ಲೇಸರ್ ಸಮುದ್ರ ಮಟ್ಟದಿಂದ 20 ಸಾವಿರ ಅಡಿ ಎತ್ತರದಲ್ಲಿರುವ, ಆಮ್ಲಜನಕ ಕೊರತೆಯ ಹಾಗೂ ಮೈನಸ್ 40 ಡಿಗ್ರಿ ಸೆಲ್ಸಿಯಸ್ ಗಿಂತಲೂ ಕಡಿಮೆಯಿರುವ ಈ ಪ್ರದೇಶದಲ್ಲಿ ಒಂದು ನಿಮಿಷ ನಿಲ್ಲುವುದೇ ಕಷ್ಟವಾಗಿರುವಾಗ ರಾಧೇಶ್ ನಂತಹ ಸೈನಿಕರು ವರ್ಷಗಟ್ಟಲೆ ಶತ್ರುಗಳಿಂದ ರಾಷ್ಟ್ರ ಹಾಗೂ ಜನತೆಯನ್ನು ರಕ್ಷಿಸುವ ಕಾರ್ಯದಲ್ಲಿ ತೊಡಗಿದ್ದಾರೆ. ಒಬ್ಬ ವ್ಯಕ್ತಿ ದಿನಕ್ಕೆ 8 ರಿಂದ 10 ಲೀಟರ್ ನೀರು ಕುಡಿದರೆ, ಈ ಸೈನಿಕರು ಕುಡಿಯುವುದು ಕೇವಲ ಮೂರು ಲೀಟರ್ ನೀರು. ಹೆಚ್ಚಿನ ನೀರು ಕುಡಿದಲ್ಲಿ ಆತನ ಆರೋಗ್ಯದ ಮೇಲೆ ಪರಿಣಾಮ ಬೀರುವಂತಹ ವಾತಾವರಣವೂ ಅಲ್ಲಿಯದು. ಸಿಯಾಚಿನ್ ಬೇಸ್ ಕ್ಯಾಂಪ್ ನಿಂದ ಸುಮಾರು 80 ಕಿಲೋ ಮೀಟರ್ ದೂರದ ಪ್ರದೇಶದಲ್ಲಿ ಪೆಟ್ರೋಲಿಂಗ್ ಜವಾಬ್ದಾರಿ ಹೊತ್ತಿದ್ದ ರಾಧೇಶ್ ತಂಡಕ್ಕೆ ದಿನಕ್ಕೆ 7 ರಿಂದ 8 ಕಿಲೋ ಮೀಟರ್ ನಷ್ಟು ಮಾತ್ರ ನಡೆಯಲು ಸಾಧ್ಯವಾಗುತ್ತದೆ. ಕಾರಣ ಹೆಜ್ಜೆ ಹೆಜ್ಜೆಗೂ ಪ್ರತಿಕೂಲ ಹವಾಮಾನ. ಪ್ರತಿ 8 ಕಿಲೋ ಮೀಟರ್ ಮಾರ್ಗ ಮಧ್ಯೆ ತಾತ್ಕಾಲಿಕ ವಿರಾಮದ ಕೊಠಡಿಗಳನ್ನು ನಿರ್ಮಿಸಲಾಗುತ್ತಿದ್ದು, ಅಲ್ಲಿ ವೈದ್ಯಕೀಯ ತಪಾಸಣೆ ನಡೆದ ಬಳಿಕ ಸೈನಿಕ ಮುಂದೆ ಸಾಗಲು ಶಕ್ತನಾಗಿದ್ದಾನೆ ಎಂದು ವೈದ್ಯರು ವರದಿ ನೀಡಿದ್ದಲ್ಲಿ ಮಾತ್ರ ಯೋಧ ಮುಂದುವರೆಯಲು ಸಾಧ್ಯ. ಪ್ರತಿ ಕ್ಷಣಕ್ಕೂ ಬದಲಾಗುವ ವಾತಾವರಣದಲ್ಲಿ ಕೆಲಸ ನಿರ್ವಹಿಸುತ್ತಿದ್ದ ರಾಧೇಶ್ ಇದೀಗ ಕ್ಯಾಪ್ಟನ್ ಆಗಿ ಪದೋನ್ನತಿ ಹೊಂದಿ ಕಾರ್ಗಿಲ್ ಕಡೆ ಪ್ರಯಾಣ ಬೆಳೆಸುತ್ತಿದ್ದಾರೆ. ಪಿಯುಸಿಯಲ್ಲೇ ಸುಮಾರು 8 ಸಲ ಸೈನ್ಯಕ್ಕೆ ಸೇರುವ ಪ್ರಯತ್ನ ನಡೆಸಿದ್ದ ರಾಧೇಶ್ 9 ನೇ ಪ್ರಯತ್ನದಲ್ಲಿ ಜಯಗಳಿಸುವ ಮೂಲಕ ಭೂ ಸೇನೆಯಲ್ಲಿ ಕಮಿಷನ್ಡ್ ಆಫಿಸರ್ ಆಗುವ ಕನಸನ್ನು ನನಸು ಮಾಡಿದ್ದಾರೆ. ಎಂ.ಟೆಕ್ ವಿಧ್ಯಾಭ್ಯಾಸ ಪಡೆದ ಯುವಕರಿಂದು ಕೈ ತುಂಬಾ ಸಂಬಳ ಹಾಗೂ ಆರಾಮದ ಕೆಲಸಕ್ಕೆ ಮಾರುಹೋಗುತ್ತಿರುವ ಈ ದಿನಗಳಲ್ಲಿ ರಾಧೇಶ್ ದೇಶಸೇವೆಗಾಗಿ ಕನಸುಗಳನ್ನೇ ಮುಡಿಪಾಗಿಟ್ಟ ನಿಜವಾದ ಹಿರೋ ಆಗಿದ್ದಾರೆ.
ಕ್ಯಾಪ್ಟನ್ ರಾಧೇಶ್ ತಂದೆ ರಾಧಾಕೃಷ್ಣ ಗೌಡರೂ ಸೇನೆಯಲ್ಲಿ 9 ವರ್ಷಗಳ ಕಾಲ ಸೇವೆ ಸಲ್ಲಿಸಿ ಬಳಿಕ ಬ್ಯಾಂಕ್ ನೌಕರಿಯಲ್ಲಿ ಮುಂದುವರಿದವರು. ತನ್ನ ಹಿರಿಯ ಮಗನನ್ನು ಸೇನೆಯಲ್ಲಿ ಕಮಿಷನ್ಡ್ ಆಫೀಸರ್ ಆಗಿ ಮಾಡಬೇಕೆಂಬು ಮಹದಿಚ್ಛೆಯಿದ್ದ ರಾಧಾಕೃಷ್ಣರಿಗೆ ಇದೀಗ ಇಬ್ಬರು ಮಕ್ಕಳೂ ಸೇನೆಯಲ್ಲಿ ಉನ್ನತ ಸ್ಥಾನವನ್ನು ಪಡೆದಿರುವುದು ಸಂತಸ ತಂದಿದೆ. ಗಡಿಯಲ್ಲಿ ಯುದ್ಧದ ವಾತಾವರಣವಿದ್ದರೂ, ತನ್ನ ಕರುಳ ಕುಡಿಯನ್ನು ಸೇನೆಗಾಗಿ ಕಳುಹಿಸುತ್ತಿರುವ ಈ ಕುಟುಂಬ ನಿಜಕ್ಕೂ ವಿಭಿನ್ನ. ರಾಧೇಶ್ ಅಜ್ಜ ಪೋಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸಿದ್ದರೆ, ಚಿಕ್ಕಪ್ಪ ಇತ್ತೀಚೆಗೆ ಕೆ.ಎಸ್.ಆರ್.ಪಿ ಚೀಫ್ ಕಮಾಂಡೆಂಟ್ ಆಗಿ ನಿವೃತ್ತಿ ಹೊಂದಿದವರು.
ತನ್ನ 25 ನೇ ವಯಸ್ಸಿನಲ್ಲೇ ಸೇನೆಯ ಉನ್ನತ ಹುದ್ದೆಗೇರಿರುವ ರಾಧೇಶ್ ಗೆ ದೇಶ ಸೇವೆ ಮಾಡಬೇಕೆಂಬ ಕಾತರ. ಐಷಾರಾಮಿ ಜೀವನಕ್ಕೆ ಮೊರೆ ಹೋಗುತ್ತಿರುವ ಇಂದಿನ ಯುವಕರಿಗೆ ರೋಲ್ ಮೋಡಲ್ ಆಗಿ ರಾಧೇಶ್ ಗುರುತಿಸಲ್ಪಡುತ್ತಿದ್ದಾರೆ. ಈ ಯುವಕನ ದೇಶಪ್ರೇಮಕ್ಕೆ ಒಂದು ದೊಡ್ಡ ಸಲಾಂ…
You must be logged in to post a comment Login