ಹರ್ಯಾಣ, ಆಗಸ್ಟ್25: ಅತ್ಯಾಚಾರ ಪ್ರಕರಣದಲ್ಲಿ ವಿವಾದಾತ್ಮಕ ಸ್ವಯಂಘೋಷಿತ ದೇವಮಾನವ ರಾಮ್ ರಹೀಂ ಸಿಂಗ್‌ ವಿರುದ್ಧ ಸಿಬಿಐ ವಿಶೇಷ ನ್ಯಾಯಾಲಯ ತೀರ್ಪು ನೀಡಿದ ಬಳಿಕ ಹರ್ಯಾಣ ಮತ್ತು ಚಂಡಿಗಢದಲ್ಲಿ  ಹಿಂಸೆ ಭುಗಿಲೆದ್ದಿದೆ.

ಚಂಡಿಗಢದಲ್ಲಿ ಎರಡು ರೈಲು ನಿಲ್ದಾಣಗಳಿಗೆ ದುಷ್ಕರ್ಮಿಗಳು ಬೆಂಕಿ ಹಚ್ಚಿದ್ದಾರೆ.ಅನೇಕ ಕಡೆಗಳಲ್ಲಿ ರಾಮ್ ರಹೀಂ ಸಿಂಗ್ ಅನುಯಾಯಿಗಳು ಹಿಂಸಾಚಾರಕ್ಕಿಳಿದಿದ್ದು, ಟೈಮ್ಸ್‌ ನೌ ಚಾನೆಲ್‌ನ ಓಬಿ ವ್ಯಾನನ್ನು ದುಷ್ಕರ್ಮಿಗಳು ಸುಟ್ಟು ಹಾಕಿದ್ದಾರೆ.

ಮಾಲೌಟ್‌ ರೈಲ್ವೆ ನಿಲ್ದಾಣ ಮತ್ತು ಪೆಟ್ರೋಲ್‌ ಪಂಪ್‌ಗೂ ಪ್ರತಿಭಟನೆಕಾರರು ಬೆಂಕಿ ಹಚ್ಚಿದ್ದಾರೆ. ಪಂಜಾಬಿನ ಭಟಿಂಡಾದಲ್ಲೂ ಇಂತಹದೇ ವಿಧ್ವಂಸಕ ಕೃತ್ಯಗಳು ನಡೆದ ವರದಿಯಾಗಿದೆ. ಭಟಿಂಡಾ, ಮಾನ್ಸಾ ಮತ್ತು ಫಿರೋಜ್‌ಪುರಗಳಲ್ಲಿ ಕರ್ಫ್ಯೂ ಹೇರಲಾಗಿದೆ.

ಸಿಬಿಐ ವಿಶೇಷ ನ್ಯಾಯಾಲಯ ತೀರ್ಪು ನೀಡಿರುವ ಪಂಚಕುಲಾದಲ್ಲಿ ಡೇರಾ ಪ್ರತಿಭಟನೆಕಾರರು ಪೊಲೀಸರು ಹಾಗೂ ಮಾಧ್ಯಮ ಪ್ರತಿನಿಧಿಗಳ ಮೇಲೆ ದಾಳಿ ನಡೆಸಿದ್ದಾರೆ.ಅವರನ್ನು ಚದುರಿಸಲು ಪೊಲೀಸರು ಅಶ್ರುವಾಯು ಸಿಡಿಸಿದ್ದಾರೆ. ಈಗಾಗಲೇ 15 ಕೂ ಅಧಿಕ ಜನ ಸಾವನ್ನಪ್ಪಿದ್ದಾರೆ, 100 ಕ್ಕೂ ಅಧಿಕ ಜನರು ಗಾಯಗೊಂಡಿದ್ದಾರೆ.  2 ಲಕ್ಷಕ್ಕೂ ಅಧಿಕ ರಾಮ್ ರಹೀಂ ಅನುಯಾಯಿಗಳು ಮಾನಯ ನ್ಯಾಯಾಲಯ ರಾಮ್ ರಹೀಂ ದೋಷಿ ಎಂದು  ತೀರ್ಪು ನೀಡಿದ ಬಳಿಕ ಬೀದಿಗಿಳಿದ್ದಾರೆ.ಮಹಿಳೆಯರು ಅಧಿಕ ಸಂಖ್ಯೆಯಲ್ಲಿರುವುದರಿಂದ ಪೋಲಿಸರಿಗೂ  ಪರಿಸ್ಥಿತಿ ನಿಭಾಯಿಸುವಲ್ಲಿ ಸಮಸ್ಯೆಗಳಾಗುತ್ತದ್ದು ತೀವ್ರ  ಸ್ವರೂಪ ಪಡೆಯುತ್ತಿದೆ.