BELTHANGADI
ಯುವಕನ ಮೇಲಿನ ಹಿಂಸೆಗೆ ಗ್ರಾಮಸ್ಥರ ಪ್ರತಿಭಟನೆ
ಯುವಕನ ಮೇಲಿನ ಹಿಂಸೆಗೆ ಗ್ರಾಮಸ್ಥರ ಪ್ರತಿಭಟನೆ
ಬೆಳ್ತಂಗಡಿ,ಸೆಪ್ಟಂಬರ್ 28: ಕಾಡಿನಿಂದ ಮರ ಕದಿಯಲಾಗಿದೆ ಎನ್ನುವ ಆರೋಪದ ಹಿನ್ನಲೆಯಲ್ಲಿ ಪುದುವೆಟ್ಟು ಪರಿಸರದ ಯುವಕನ ಮೇಲೆ ಅರಣ್ಯ ಇಲಾಖೆ ಅಧಿಕಾರಿಗಳ ನಡೆಸಿದ ಹಲ್ಲೆಯನ್ನು ಖಂಡಿಸಿ ಪುದುವೆಟ್ಟು ಗ್ರಾಮಸ್ಥರು ಪ್ರತಿಭಟನೆ ನಡೆಸಿದರು. ಬೆಳ್ತಂಗಡಿಯ ಅರಣ್ಯ ಇಲಾಖೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದ ಗ್ರಾಮಸ್ಥರು ಹಲ್ಲೆ ನಡೆಸಿದ ಫಾರೆಸ್ಟರ್ ಕೀರ್ತನ್ ಶೆಟ್ಟಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು. ಪುದುವೆಟ್ಟು ಕಾಡಿನಲ್ಲಿ ಮರ ಕಳ್ಳತನ ನಡೆಸಿದ್ದಾರೆ ಎನ್ನುವ ಮಾಹಿತಿ ಹಿನ್ನಲೆಯಲ್ಲಿ ಅರಣ್ಯ ಇಲಾಖೆಯ ಫಾರೆಸ್ಟರ್ ಕೀರ್ತನ್ ಶೆಟ್ಟಿ ಹಾಗೂ ಆತನ ಸಿಬ್ಬಂದಿಗಳು ಕಮಲ್ ದಾಸ್ (35) ಎಂಬ ಯುವಕನಿಗೆ ಅಮಾನುಷವಾಗಿ ಹಲ್ಲೆ ನಡೆಸಿದ್ದರು.
ಧರ್ಮಸ್ಥಳದ ಅರಣ್ಯ ವಸತಿಗೃಹದಲ್ಲಿ ಕೂಡಿ ಹಾಕಿ ಹಲ್ಲೆ ನಡೆಸಿದ್ದಾರಲ್ಲದೆ, ಆತನ ಮರ್ಮಾಂಗಕ್ಕೆ ಲಾಠಿ ಹಾಕಿ ಹಿಂಸೆ ನಡೆಸಿದ್ದಾರೆ. ಮರ ಕಡಿದಿರುವುದನ್ನು ಒಪ್ಪಿಕೊಳ್ಳುವಂತೆ ಮರಕ್ಕೆ ಕಟ್ಟಿ ಹಾಕಿಯೂ ಹೊಡೆದಿರುವುದಾಗಿ ಯುವಕ ದೂರಿದ್ದಾನೆ.
ಕೃತ್ಯವನ್ನು ಖಂಡಿಸಿ ಬೆಳ್ತಂಗಡಿಗೆ ಆಗಮಿಸಿದ ಪುದುವೆಟ್ಟು ಭಾಗದ ಜನ ಅರಣ್ಯ ಅಧಿಕಾರಿಗಳನ್ನು ತರಾಟೆಗೂ ತೆಗೆದುಕೊಂಡಿದ್ದಾರೆ. ಈ ಸಂದರ್ಭದಲ್ಲಿ ಬಿಜೆಪಿ ಯುವಮೋರ್ಚಾದ ಜಿಲ್ಲಾಧ್ಯಕ್ಷ ಹರೀಶ್ ಪೂಂಜಾ ಸೇರಿದಂತೆ ವಿವಿಧ ಪಕ್ಷದ ಮುಖಂಡರು ಉಪಸ್ಥಿತರಿದ್ದು, ಗ್ರಾಮಸ್ಥರಿಗೆ ಧೈರ್ಯ ತುಂಬಿದರು.
You must be logged in to post a comment Login