ಮಂಗಳೂರು,ಜುಲೈ22: ಮಂಗಳೂರು ಹೊರವಲಯದ ಬಜ್ಪೆ ಕಿನ್ನಿಪದವು ಮುಖ್ಯ ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವೃದ್ಧ ಮಹಿಳೆ ಖತೀಜಮ್ಮ (48) ಎಂಬವರಿಗೆ ಅತಿ ವೇಗದಿಂದ ಬಂದ ಮಾಜಿ ಮಂತ್ರಿ ಮತ್ತು ಮೂಲ್ಕಿ ಮೂಡಬಿದ್ರೆ ಶಾಸಕ ಅಭಯಚಂದ್ರರವರ ಕಾರು ಡಿಕ್ಕಿಯಾಗಿದೆ. ಡಿಕ್ಕಿ ಹೊಡೆದ ತೀವ್ರತೆಗೆ ಖತೀಜಮ್ಮ ರಸ್ತೆ ಬದಿಯಿಂದ ಚರಂಡಿಗೆ ಎಸೆಯಲ್ಪಟ್ಟರೂ ನಂತರ ಸಾವರಿಸಿಕೊಂಡು ಎದ್ದು ಬಂದು, ಕಾರಿನಲ್ಲಿದ್ದ ಅಭಚಂದ್ರ ಜೈನ್ ಅವರಲ್ಲಿ, “ಸಾವಧಾನದಿಂದ ಕಾರು ಚಲಾಯಿಸಬಾರದೇ” ಎಂದು ಕೇಳಿದ್ದಾರೆ. ಆಗ ತಾನೋರ್ವ ಜನಪ್ರತಿನಿಧಿ ಎಂಬುವುದನ್ನೂ ಮರೆತು, ಕಾರಿನಿಂದ ಇಳಿದ ಅಭಯಚಂಧ್ರ ಜೈನ್ ಮಹಿಳೆಯ ಮೇಲೆ ಎರಗಿ ಹೋಗಿದ್ದಲ್ಲದೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಮತ್ತು ಆಕೆಯನ್ನು ತನ್ನ ಕೈಯಿಂದ ತಳ್ಳಿ ಹಾಕಿದ್ದಾರೆ ಎಂದು ದೂರಲಾಗಿದೆ. ಮತ್ತೆ ರಸ್ತೆಗೆ ತಳ್ಳಲ್ಪಟ್ಟ ಖತೀಜಮ್ಮನಿಗೆ ತೀವ್ರ ತರಹದ ಗಾಯಗಳಾಗಿದ್ದು, ಅವರು ಈಗ ಮಂಗಳೂರಿನ ಖಾಸಾಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಈ ಸಂಬಂಧ ಬಜ್ಪೆ ಪೋಲಿಸ್ ಠಾಣೆಯಲ್ಲಿ ದೂರು ಸಲ್ಲಿಸಲಾಗಿದ್ದು, ಅಭಯಚಂದ್ರರವರ ಈ ವರ್ತನೆ ಇದು ಮೊದಲ ಬಾರಿಯೇನಲ್ಲ. ಕಳೆದ ಬಾರಿ ಮೂಲ್ಕಿಯಲ್ಲಿ ಓರ್ವ ಬಡ ರಿಕ್ಷಾ ಚಾಲಕನ ಮೇಲೆ ಎರಗಿ ಹೋಗಿದ್ದರು. ಹಾಗೆಯೇ ಮೂರು ತಿಂಗಳ ಮೊದಲು ಮೂಡಬಿದ್ರೆಯಲ್ಲಿ ಕಳಪೆ ಕಾಮಗಾರಿಯ ಕುರಿತು ಪ್ರಶ್ನಿಸಿದ ವೃದ್ಧ ಮಹಿಳೆಯನ್ನು ಏಕ ವಚನದಲ್ಲಿ ನಿಂದಿಸಿದ್ದು ವರದಿಯಾಗಿತ್ತು.