DAKSHINA KANNADA
ಪುತ್ತೂರಿನಲ್ಲೊಬ್ಬ ಶ್ವಾನಪ್ರೇಮಿ ಜನಪ್ರತಿನಿಧಿ

ಪುತ್ತೂರಿನಲ್ಲೊಬ್ಬ ಶ್ವಾನಪ್ರೇಮಿ ಜನಪ್ರತಿನಿಧಿ
ಪುತ್ತೂರು,ಸೆಪ್ಟಂಬರ್ 27: ಸಮಾಜದಲ್ಲಿ ಹೆಣ್ಣಿನ ಮೇಲಿನ ತಾರತಮ್ಯ ಇಂದು ನಿನ್ನೆಯದಲ್ಲ. ಈ ತಾರತಮ್ಯವನ್ನು ಜನ ಕೇವಲ ಮನುಷ್ಯರಿಗೆ ಮಾತ್ರ ಸೀಮಿತಗೊಳಿಸದೆ ಇದನ್ನು ತಮ್ಮ ಅತ್ಯಂತ ಸನಿಹದ ಹಾಗೂ ನಂಬಿಕಸ್ಥ ಪ್ರಾಣಿಯಾದ ನಾಯಿಯಲ್ಲೂ ಕಾಣಲಾಗುತ್ತಿದ್ದಾನೆ. ಮನೆಯಲ್ಲಿ ಸಾಕುವ ನಾಯಿಯು ಇಡುವ ಹೆಣ್ಣು ಮರಿಗಳೂ ಇದೇ ಗತಿಯಿದೆ. ಇದೇ ಕಾರಣಕ್ಕಾಗಿ ಬೀದಿ ನಾಯಿಗಳಾಗುವ ಈ ಮರಿಗಳನ್ನು ಆರೈಕೆ ಮಾಡುತ್ತಿರುವ ಶ್ವಾನ ಪ್ರೇಮಿಯೊಬ್ಬರು ಪುತ್ತೂರಿನಲ್ಲಿದ್ದಾರೆ. ಪುತ್ತೂರಿನಲ್ಲಿ ಜನಪ್ರತಿನಿಧಿಯಾಗಿ ಹೆಸರುವಾಸಿಯಾಗಿರುವ ಇವರು ತೆರೆಮರೆಯಲ್ಲಿ ನಡೆಸುತ್ತಿರುವ ಶ್ವಾನ ಪ್ರೇಮದ ಕುರಿತ ಒಂದು ಸ್ಟೋರಿ ಇಲ್ಲಿದೆ.ಕಳೆದ ಹಲವು ವರ್ಷಗಳಿಂದ ಸದ್ದಿಲ್ಲದೆ ಈ ಕಾರ್ಯ ಮಾಡುತ್ತಿರೋದು ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರಿನ ನಿವಾಸಿ ರಾಜೇಶ್ ಬನ್ನೂರು. ಪುತ್ತೂರು ನಗರಸಭೆಯಲ್ಲಿ ನಿರಂತರ 20 ವರ್ಷಗಳ ಕಾಲ ಸದಸ್ಯರಾಗಿ ಆಯ್ಕೆಯಾಗಿರುವ ಇವರು ಪುತ್ತೂರು ಪುರಸಭೆಯಾಗಿದ್ದ ಸಂದರ್ಭದಲ್ಲಿ ಪುರಸಭಾ ಅಧ್ಯಕ್ಷರೂ ಆಗಿದ್ದವರು. ನಗರಸಭೆಯ ಸದಸ್ಯರಾಗಿ ಹೆಸರುವಾಸಿಯಾಗಿರುವ ರಾಜೇಶ್ ಬನ್ನೂರು ನಡೆಸುತ್ತಿರುವ ಶ್ವಾನಪ್ರೇಮ ಮಾತ್ರ ತೆರೆಮರೆಯಲ್ಲಿಯೇ ಇದೆ.
ಜನರಲ್ಲಿ ಯಾವ ರೀತಿ ಹೆಣ್ಣಿನ ಬಗ್ಗೆ ತಾರತಮ್ಯವಿದೆಯೋ,ಅದನ್ನೇ ನಾಯಿಗಳಲ್ಲೂ ತೋರಿಸುತ್ತಿದ್ದಾರೆ. ತಾವೇ ಅತ್ಯಂತ ಮುದ್ದಾಗಿ ಸಾಕಿದ ನಾಯಿ ಇಡುವ ಗಂಡು ಮರಿಗಳನ್ನು ಮಾತ್ರ ತನ್ನ ಬಳಿಯಿಟ್ಟು, ಹೆಣ್ಣು ಮರಿಯನ್ನು ಬೀದಿಗೆ ಬಿಡುವ ಜಾಯಮಾನ ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಇಂಥ ಬೀದಿಗೆ ಬಿದ್ದ ಮರಿಗಳು ಕೆಲವು ಆಹಾರವಿಲ್ಲದೆ ಸತ್ತರೆ, ಇನ್ನು ಕೆಲವು ಬೀದಿಯಲ್ಲಿ ಸಿಕ್ಕಿದನ್ನೆಲ್ಲಾ ತಿಂದು ಬೀದಿಬದಿ ನಾಯಿಯಾಗಿ ಬೆಳೆಯುತ್ತದೆ.ಇಂಥ ಆಹಾರವಿಲ್ಲದೆ ಅಲೆದಾಡುವ ನಾಯಿಗಳಿಗೆ ಅನ್ನದಾತ ಈ ರಾಜೇಶ್ ಬನ್ನೂರು.
ಪುತ್ತೂರು ಪೇಟೆಯಲ್ಲಿ ಅಲೆದಾಡುವ ಸುಮಾರು 38 ನಾಯಿಗಳು ಈಗಾಗಲೇ ಇವರ ದಿನನಿತ್ಯದ ಗಿರಾಕಿಗಳಾಗಿವೆ.ಇದರ ಜೊತೆಗೆ ದಾರಿಯಲ್ಲಿ ಸಿಗುವ ಇನ್ನಷ್ಟು ನಾಯಿಗಳಿಗೂ ದಿನಕ್ಕೆ ಎರಡು ಬಾರಿ ಆಹಾರವನ್ನು ನೀಡುವ ಅನ್ನದಾತ ಇವರು. ಅಲ್ಲದೆ ಎಲ್ಲಾ ನಾಯಿಗಳಿಗೂ ತಾಂತ್ರಿಕ ಹೆಸರಾದ ಬ್ಲೂಟೂತ್, ಗಿಬ್ಬ, ವೈಫೈ, ರೆಡಿಯೋ ಹೀಗೆ ವಿಭಿನ್ನ ಹೆಸರುಗಳ ಮೂಲಕ ನಾಯಿಗಳನ್ನು ಕರೆದಾಗ ಎಲ್ಲಾ ನಾಯಿಗಳೂ ಇವರ ಮುಂದೆ ಬಾಲ ಆಡಿಸಿಕೊಂಡು ಪ್ರತ್ಯಕ್ಷವಾಗಿ ಬಿಡುತ್ತದೆ.
ಬೀದಿ ನಾಯಿಗಳನ್ನು ಒಂದು ಕಡೆ ಸೇರಿಸಿ ಅವುಗಳಿಗೆ ಸರಿಯಾದ ವ್ಯವಸ್ಥೆಯನ್ನು ಕಲ್ಪಿಸಬೇಕೆಂಬ ಇಂಗಿತ ವ್ಯಕ್ತಪಡಿಸುತ್ತಾರೆ ರಾಜೇಶ್ ಬನ್ನೂರು. ನಾಯಿಗಳ ಆರೈಕೆ ಮಾಡುವ ವ್ಯವಸ್ಥೆಗಾಗಿ ಸರಕಾರವೇನಾದರೂ ಭೂಮಿ ನೀಡಿದ್ದಲ್ಲಿ ಸಣ್ಣ ಮಟ್ಟಿನ ಶೆಡ್ ನಿರ್ಮಿಸಿ ಬೀದಿ ನಾಯಿಗಳನ್ನು ಸಾಕಬೇಕೆನ್ನುವ ಇವರ ಆಶಯಕ್ಕೆ ಸರಕಾರ ಹಾಗೂ ಸಂಘ ಸಂಸ್ಥೆಗಳು ನೆರವು ನೀಡಬೇಕಿದೆ. ಮನುಷ್ಯನ ಅತ್ಯಂತ ನಂಬಿಕಸ್ಥ ಪ್ರಾಣಿಯಾಗಿರುವ ನಾಯಿಗಳು ಇಂದು ಬೀದಿ ನಾಯಿಯಾಗಿ ಜನರನ್ನು ಕಾಡುತ್ತಿರುವಾಗ ಸಂದರ್ಭದಲ್ಲಿ ಇವುಗಳನ್ನು ನಿಯಂತ್ರಿಸುವ ಹಾಗೂ ಮಾನವೀಯತೆ ಮೆರೆಯುವ ರಾಜೇಶ್ ಬನ್ನೂರ್ ಗೆ ಸೂಕ್ತ ಪ್ರೋತ್ಸಾಹ ನೀಡುವ ಅಗತ್ಯ ಸಮಾಜದ ಮೇಲಿದೆ ಎನ್ನುತ್ತಾರೆ ಹಿಂದೂ ಮುಖಂಡರಾಗಿರುವ ಅರುಣ್ ಪುತ್ತಿಲ.ನಗರಸಭೆಯ ಸದಸ್ಯತ್ವದ ಜೊತೆಗೆ ಪತ್ರಿಕಾ ಏಜೆಂಟ್ ಆಗಿಯೂ ಕಾರ್ಯ ನಿರ್ವಹಿಸುತ್ತಿರುವ ಬನ್ನೂರರ ಶ್ವಾನ ಪ್ರೇಮಕ್ಕೆ ಪುತ್ತೂರಿನ ಎರಡು ಹೋಟೇಲ್ ಗಳು ಹಾಗೂ ಇತರ ಸ್ನೇಹಿತರು ತಿಂಡಿ ಮತ್ತು ಇತರ ರೂಪದಲ್ಲಿ ಸಹಕಾರ ನೀಡುತ್ತಿದೆ. ಅಲ್ಲದೆ ನಾಯಿಗಳಿಗೆ ಚಿಕಿತ್ಸೆ ನೀಡಲು ಕರೆದಲ್ಲಿಗೆ ಬರುವ ಪಶುವೈದ್ಯರ ಸಹಕಾರವೂ ಇವರಿಗೆ. ಜನತೆಯ ಜೊತೆಗೆ ಬೀದಿ ನಾಯಿಗಳಿಗೂ ಸಹಾಯ ಮಾಡುತ್ತಿರುವ ರಾಜೇಶ್ ಬನ್ನೂರು ಪ್ರಯತ್ನ ನಿಜಕ್ಕೂ ಶ್ಲಾಘನೀಯ.