ಪುತ್ತೂರು,ಅಗಸ್ಟ್ 14: ಪುತ್ತೂರು ವಿವೇಕಾನಂದ ಶಿಶು ಮಂದಿರದ ವತಿಯಿಂದ ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಇಂದು ರಾಧಾ-ಕೃಷ್ಣ ವೇಷಧಾರಿ ಪುಟಾಣಿಗಳ ಮೆರವಣಿಗೆ ನಡೆಯಿತು. ಸಾವಿರಕ್ಕೂ ಮಿಕ್ಕಿದ ಪುಟಾಣಿಗಳು ರಾಧಾ ಹಾಗೂ ಕೃಷ್ಣನ ವೇಷ ಪಾಲ್ಗೊಳ್ಳುವ ಮೂಲಕ ಕೃಷ್ಣ ಜನ್ಮಾಷ್ಟಮಿಯಲ್ಲಿ ರಾಧಾ-ಕೃಷ್ಣರಾಗಿ ಮೆರೆದರು.

ರೋಡಿನಲ್ಲಿ ಕೃಷ್ಣ, ಗಾಡಿಯಲ್ಲಿ ಕೃಷ್ಣ, ಬೆಣ್ಣೆ ತಿನ್ನುವ ಕೃಷ್ಣ, ಐಸ್ ಕ್ರೀಂ ಚೀಪುವ ಕೃಷ್ಣ ಹೀಗೆ ಹಲವು ಮುಖಗಳ ಕೃಷ್ಣರು ಇಂದು ಪುತ್ತೂರಿನ ಪೇಟೆಯಾದ್ಯಂತ ಸಂಚರಿಸುತ್ತಿದ್ದರು. ವಿವೇಕಾನಂದ ಶಿಶು ಮಂದಿರ ಕಳೆದ ಹಲವು ವರ್ಷಗಳಿಂದ ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ನಡೆಸಿಕೊಂಡು ಬರುತ್ತಿರುವ ಕೃಷ್ಣವೇಷ ಕಾರ್ಯಕ್ರಮದಲ್ಲಿ ಭಾಗವಹಿಸಲು ಬಂದ ಪುಟಾಣಿಗಳ ಒಂದೊಂದು ರೂಪದ ದರ್ಶನವಾಯಿತು. ಜಾತಿ-ಮತ, ಮೇಲು-ಕೀಳು ಎನ್ನುವ ಭೇಧವಿಲ್ಲದೆ ಎಲ್ಲರೂ ಆಚರಿಸುವಂತಹ ಕೃಷ್ಣಾಷ್ಟಮಿಗೆ ತನ್ನ ಮಕ್ಕಳನ್ನು ಕೃಷ್ಣನಂತೆ ಶೃಂಗರಿಸುವ ಇಚ್ಛೆ ಪೋಷಕರದು.

ಇದೇ ಕಾರಣಕ್ಕಾಗಿ ಇಂಥ ಪೋಷಕರಿಗೆ ಒಂದು ವೇದಿಕೆಯನ್ನು ಕಲ್ಪಿಸುವ ನಿಟ್ಟಿನಲ್ಲಿ ಕೃಷ್ಣವೇಷ ಕಾರ್ಯಕ್ರಮದಲ್ಲಿ ಸಾವಿರಕ್ಕೂ ಮಿಕ್ಕಿದ ಬಾಲ ಕೃಷ್ಣರು ಹಾಗೂ ಬಾಲ ರಾಧೆಯರು ಕಾಣಿಸಿಕೊಂಡಿದ್ದರು. ವಿಶ್ವಕ್ಕೆ ಶಾಂತಿಯ, ಭಾತೃತ್ವದ ಸಂದೇಶವನ್ನು ನೀಡುವ ಕೃಷ್ಣಾಷ್ಟಮಿಯಲ್ಲಿ ಅತ್ಯಂತ ಸಡಗರದಿಂದ ಆಚರಿಸುವುದು ಭಾರತೀಯ ಪರಂಪರೆಯಲ್ಲಿ ಹಿಂದಿನಿಂದಲೂ ಬೆಳೆದು ಬಂದ ಸಂಪ್ರದಾಯವೂ ಆಗಿದೆ.

ಪುತ್ತೂರಿನ ಶಿಶು ಮಂದಿರದಿಂದ ಹೊರಟ ರಾಧಾ-ಕೃಷ್ಣ ವೇಷಧಾರಿ ಮಕ್ಕಳು ಪುತ್ತೂರು ಪೇಟೆಯನ್ನು ಸುತ್ತಿ ಮಹಲಿಂಗೇಶ್ವರ ದೇವಸ್ಥಾನದ ನಟರಾಜ ವೇದಿಕೆಯಲ್ಲಿ ಪ್ರಶಸ್ತಿಯನ್ನು ಸ್ವೀಕರಿಸಿದರು. ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲಾ ಮಕ್ಕಳಿಗೂ ಪ್ರಶಸ್ತಿಯನ್ನು ಕೊಡುವ ಪದ್ಧತಿ ಹಿಂದಿನಿಂದಲೂ ನಡೆದುಕೊಂಡು ಬಂದಿದ್ದು, ಮಕ್ಕಳು ಅತ್ಯಂತ ಲವಲವಿಕೆಯಿಂದ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.


ರಾಧಾ-ಕೃಷ್ಣ ವೇಷ ಧರಿಸಿ ದೇವರಂತೆ ಕಾಣುವ ಮಕ್ಕಳನ್ನು ಪೋಷಕರ ಎತ್ತಿ ಹಿಡಿದ ಸಂಭ್ರಮಿಸುವ ದೃಶ್ಯ ಸಾಮಾನ್ಯವಾಗಿತ್ತು. ಮೇಲು-ಕೀಳು ಎಂಬ ಭೇಧವಿಲ್ಲದೆ ಈ ಕಾರ್ಯಕ್ರಮ ನಡೆದಿದ್ದು, ಎಲ್ಲರ ಪ್ರಶಂಶೆಗೂ ಪಾತ್ರವಾಗಿತ್ತು.