ಸುಳ್ಯ, ಆಗಸ್ಟ್ 08 : ಸುಬ್ರಹ್ಮಣ್ಯ ಪರಿಸರ ಸೂಕ್ಷ್ಮವಲಯ ವಿಸ್ತರಣೆಗೆ ಕಲ್ಮಕಾರು ಗ್ರಾಮಸ್ಥರ ವಿರೋಧ ತೀವ್ರಗೊಂಡಿದ್ದು, ಯೋಜನೆ ವಿರೋಧಿಸಿ ವೈಲ್ಡ್ ಲೈಫ್ ಸಿಬ್ಬಂದಿ ವಾಸವಿರುವಲ್ಲಿಗೆ ತೆರಳಿ ಮುತ್ತಿಗೆ ಹಾಕಲು ಯತ್ನಿಸಿದ್ದಾರೆ.

ಗ್ರಾಮಸ್ಥರ ಬೆದರಿಕೆಗೆ ಹೆದರಿದ ಮೂವರು ಗಾರ್ಡ್ ಗಳು ಸ್ಥಳದಿಂದ ಕಾಲ್ಕಿತ್ತಿದ್ದಾರೆ. ಯೋಜನೆಯಿಂದ ಅತಂಕಗೊಂಡ ಗ್ರಾಮದ ನಾಗರಿಕರೆಲ್ಲರೂ ಭಾನುವಾರ ದಿಢೀರ್ ಸಭೆ ನಡೆಸಿದರು. ಕಲ್ಮಕಾರು ಶಾಲೆ ಬಳಿ ಸೇರಿದ್ದ ಗ್ರಾಮಸ್ಥರೆಲ್ಲರೂ ನಮ್ಮ ಕಂದಾಯ ಭೂಮಿ ವ್ಯಾಪ್ತಿಗೆ ಯೋಜನೆ ವಿಸ್ತರಿಸಬೇಡಿ, ಕೃಷಿ ಅವಲಂಬಿತ ನಮ್ಮನ್ನು ಸಂಕಷ್ಟಕ್ಕೆ ದೂಡಬೇಡಿ, ನಮಗೆ ತೊಂದರೆ ನೀಡುವ ಅಧಿಕಾರಿಗಳನ್ನು ಗ್ರಾಮದ ಒಳಗೆ ಬಿಟ್ಟುಕೊಡೆವು ಎಂದು ಆಗ್ರಹಿಸಿದರು, ಸುಮಾರು 400ಕ್ಕೂ ಅಧಿಕ ಗ್ರಾಮಸ್ಥರು ಸೇರಿದ್ದರು. ಸಭೆಯ ಆರಂಭದಲ್ಲೇ ಹೋರಾಟದ ರೂಪುರೇಷೆ ಬಗ್ಗೆ ಚರ್ಚೆ ನಡೆಯಿತು.

ನಮಗೆ ಬಂದಿರುವ ತೊಂದರೆ ವಿರುದ್ಧ ಹೋರಾಟಕ್ಕೆ ರಾಜಕೀಯ ಬೇಡ, ರಾಜಕೀಯ ಬದಿಗಿಟ್ಟು ಹೋರಾಡುವುದಾದರೆ ಗ್ರಾಮಸ್ಥರಾದ ನಾವೆಲ್ಲರೂ ಜತೆಗಿರುತ್ತೇವೆ. ಯಾವ ತ್ಯಾಗಕ್ಕೂ ನಾವು ಹಿಂಜರಿಯುವುದಿಲ್ಲ. ಹೋರಾಟದ ನೇತೃತ್ವ ವಹಿಸಿರುವವರು ಈ ಬಗ್ಗೆ ಸ್ಪಷ್ಟಪಡಿಸಬೇಕು ಎಂದು ಸಭೆಯಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದರು. ಮುಖಂಡರು ಇದಕ್ಕೆ ಸಮ್ಮತಿ ವ್ಯಕ್ತಪಡಿಸಿ ರಾಜಕೀಯ ರಹಿತ ಹೋರಾಟಕ್ಕೆ ನಾವೆಲ್ಲ ಬದ್ಧರು ಎಂದರು. ಪ್ರಮುಖರು ಪರಿಸರ ಸೂಕ್ಷ್ಮವಲಯಕ್ಕೆ ಗ್ರಾಮಗಳ ಸೇರ್ಪಡೆಯಿಂದ ಅಗುವ ಸಾಧಕ-ಬಾಧಕ ಬಗ್ಗೆ ಸಭೆಗೆ ಮಾಹಿತಿ ನೀಡಿದರು. ಮಲೆನಾಡು ಜಂಟಿ ಕ್ರಿಯಾಸಮಿತಿ ಅಧ್ಯಕ್ಷ ಪ್ರದೀಪ್ ಕುಮಾರ್, ತಾ.ಪಂ.ಸದಸ್ಯ ಉದಯ ಕೊಪ್ಪಡ್ಕ, ಹರ್ಷ ಕುಮಾರ ದೇವಜನಮನೆ, ಎಪಿಎಂಸಿ ಸದಸ್ಯ ಗಣೇಶ್ ಭಟ್ ಇಡ್ಯಡ್ಕ ಮಾತನಾಡಿದರು.

ಸಭೆ ಬಳಿಕ ಗ್ರಾಮಸ್ಥರೆಲ್ಲರೂ ವೈಲ್ಡ್ ಲೈಫ್ ಫಾರೆಸ್ಟರ್ ಮತ್ತು ಗಾರ್ಡ್ ವಾಸವಿರುವ ಸ್ಥಳಕ್ಕೆ ತೆರಳಿ ಅಲ್ಲಿದ್ದ ಸಿಬ್ಬಂದಿಗೆ ಇಲ್ಲಿಂದ ಜಾಗ ಖಾಲಿ ಮಾಡುವಂತೆ ಬೆದರಿಕೆ ಒಡ್ಡಿದರು. ಅದರಂತೆ ಕಲ್ಮಕಾರಿಂದ ಕಾಲ್ಕಿತ್ತಿದ್ದಾರೆ. ಕರ್ತವ್ಯಕ್ಕೆ ತೊಂದರೆ ಮಾಡಿದ ಗ್ರಾಮಸ್ಥರ ಕ್ರಮಕ್ಕೆ ಕೆಲ ಪರಿಸರ ಪ್ರೇಮಿಗಳು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Facebook Comments

comments