ಪುತ್ತೂರು,ಅಗಸ್ಟ್ 23: ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಉಪ್ಪಿನಂಗಡಿ ಸಮೀಪದ ಕುಟೇಲು ಎಂಬಲ್ಲಿ ನೇತ್ರಾವತಿ ನದಿ ಪರಂಬೋಕು ಜಮೀನನ್ನು ಅತಿಕ್ರಮಿಸಿ ಕಟ್ಟಡ ಕಟ್ಟಿರುವ ವಿಚಾರದ ಬಗ್ಗೆ ಇದೀಗ ಪುತ್ತೂರು ಸಹಾಯಕ ಆಯುಕ್ತರು ತನಿಖೆಯನ್ನು ಕೈಗೆತ್ತಿಕೊಂಡಿದ್ದಾರೆ. ನದಿಯನ್ನು ಅತಿಕ್ರಮಿಸಿ ಅಕ್ರಮವಾಗಿ ಕಟ್ಟಡವನ್ನು ಕಟ್ಟಿರುವ ಕುರಿತು ‘ದಿ ಮಂಗಳೂರು ಮಿರರ್ ‘ ಗ್ರೌಂಡ್ ಜಿರೋ ರಿಪೋರ್ಟ್ ಮಾಡಿತ್ತು. ಈ ಸಂದರ್ಭದಲ್ಲಿ ಬೆಳಕಿಗೆ ಬಂದ ಅಕ್ರಮದ ಕುರಿತು ಈ ಹಿಂದೆ ವಿಸೃತ ವರದಿಯನ್ನೂ ಪ್ರಕಟಿಸಿದೆ.

ಆ ಬಳಿಕ ಸ್ಥಳೀಯ ಉಪ್ಪಿನಂಗಡಿ ಗ್ರಾಮಪಂಚಾಯತ್ ಪಿಡಿಒ ನದಿ ಭಾಗಕ್ಕೆ ತಾಗಿಕೊಂಡಿರುವ ಸ್ಥಳದಲ್ಲಿ ಕಟ್ಟಡ ಕಟ್ಟಲು ಪಂಚಾಯತ್ ನಿಂದ ಯಾವುದೇ ಪರವಾನಗಿಯನ್ನು ಕಟ್ಟಡ ಮಾಲಿಕನಿಗೆ ನೀಡಿಲ್ಲ ಎಂದು ಸ್ಪಷ್ಟಪಡಿಸಿದ್ದರು. ಬಳಿಕ ಈ ವಿಚಾರವಾಗಿ ಯಾವುದೇ ಕ್ರಮ ಕೈಗೊಳ್ಳದ ಹಿನ್ನಲೆಯಲ್ಲಿ ಪುತ್ತೂರು ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿಯವರನ್ನೂ ಸಂಪರ್ಕಿಸಲಾಗಿದ್ದರೂ, ಅವರೂ ಕೂಡಾ ತನಿಖೆ ನಡೆಸುವ ಭರವಸೆಯನ್ನು ನೀಡಿದ್ದರು.

ಆದರೆ ಭರವಸೆ ನೀಡಿ ಹದಿನೈದು ದಿನಗಳಾದರೂ ಸಂಬಂಧಿಸಿದ ಕಟ್ಟಡದ ವಿರುದ್ಧ ಯಾವುದೇ ತನಿಖೆಯೂ ನಡೆಯದ ಹಿನ್ನಲೆಯಲ್ಲಿ ಪುತ್ತೂರು ಸಹಾಯಕ ಆಯುಕ್ತರು ಇದೀಗ ಅಖಾಡಕ್ಕೆ ಧುಮುಕಿದ್ದಾರೆ. ಇನ್ನು ಒಂದು ವಾರದೊಳಗೆ ಅಕ್ರಮ ಕಟ್ಟಡ ಕಟ್ಟಲಾಗಿರುವ ಜಾಗದ ಸರ್ವೆ ನಡೆಸಲಾಗುವುದು ಹಾಗೂ ಸರ್ವೆಯಲ್ಲಿ ಅಕ್ರಮ ಕಂಡು ಬಂದಲ್ಲಿ ಕಟ್ಟಡ ಮಾಲಿಕನ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವ ಎಚ್ಚರಿಕೆಯನ್ನು ಅವರು ನೀಡಿದ್ದಾರೆ.

 ‘ ದಿ ಮ್ಯಾಂಗಲೂರು ಮಿರರ್ ‘ ಈ ರೀತಿಯ ಅಕ್ರಮ ಚಟುವಟಿಕೆಗಳ ಬಗ್ಗೆ ನಿರಂತರ ತನ್ನ ಸಮರ ಸಾರಲಿದ್ದು, ಅಕ್ರಮವನ್ನು ತಡೆಯುವ ತನಕ ವಿರಮಿಸುವುದಿಲ್ಲ ಎನ್ನುವುದಕ್ಕೆ ನೇತ್ರಾವತಿ ನದಿಯನ್ನು ಕಬಳಿಸಿ ಕಟ್ಟಡ ಕಟ್ಟಿದ ಮಾಲಿಕನ ವಿರುದ್ಧದ ತನಿಖೆಯೇ ಸಾಕ್ಷಿಯಾಗಿದೆ.

Facebook Comments

comments