DAKSHINA KANNADA
ನಗರೋತ್ಥಾನ ಯೋಜನೆಯಲ್ಲಿ ದ.ಕ. ಜಿಲ್ಲೆಗೆ 81 ಕೋ.ರೂ. ಅನುದಾನ;ಸಚಿವ ಖಂಡ್ರೆ
ಮಂಗಳೂರು,ಆಗಸ್ಟ್ 09 : ರಾಜ್ಯದ ಒಟ್ಟು 265 ಸ್ಥಳೀಯಾಡಳಿತ ಸಂಸ್ಥೆಗಳಿಗೆ 3ನೇ ಹಂತದ ನಗರೋತ್ಥಾನ ಯೋಜನೆಯಲ್ಲಿ 2,855 ಕೋ.ರೂ. ಅನುದಾನ ಬಿಡುಗಡೆಗೊಂಡಿದ್ದು, ದಕ್ಷಿಣ ಕನ್ನಡ ಜಿಲ್ಲೆಗೆ 81 ಕೋ.ರೂ. ಅನುದಾನ ಬಿಡುಗಡೆಗೊಂಡಿದ್ದು,ತಿಂಗಳೊಳಗೆ ಕಾಮಗಾರಿ ಆರಂಭಗೊಳ್ಳಲಿದೆ ಎಂದು ರಾಜ್ಯ ಪೌರಾಡಳಿತ ಹಾಗೂ ಸಾರ್ವಜನಿಕ ಉದ್ದಿಮೆಗಳ ರಾಜ್ಯ ಸಚಿವರಾದ ಈಶ್ವರ ಬಿ. ಖಂಡ್ರೆ ತಿಳಿಸಿದ್ದಾರೆ.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಅಧಿಕಾರಿಗಳ ಸಭೆ ನಡೆಸಿ ಬಳಿಕ ಸುದ್ದಿಗೋಷ್ಟಿಯಲ್ಲಿ ಮಾಹಿತಿ ನೀಡಿದ ಅವರು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈ ಹಿಂದೆ ಪೌರಾಡಳಿತ ಇಲಾಖೆ ವ್ಯಾಪ್ತಿಯಲ್ಲಿ ನಗರೋತ್ಥಾನ ಯೋಜನೆಯ ಅಡಿಯಲ್ಲಿ 35 ಕೋ.ರೂ. ಹಣ ಬಿಡುಗಡೆಗೊಂಡಿತ್ತು.ಆಗಸ್ಟ್ ತಿಗಂಳ ಅಂತ್ಯದೊಳಗೆ ಎಲ್ಲ ಕಾಮಗಾರಿ ಮುಗಿಯಲಿದೆ. ಪ್ರಸ್ತುತ 81 ಕೋ.ರೂ. ಅನುದಾನಕ್ಕೆ ಆಡಳಿತಾತ್ಮಕ ಅನುಮೋದನೆ ದೊರೆತಿದ್ದು, ರಾಜ್ಯದ ಒಟ್ಟು 265 ಸ್ಥಳೀಯಾಡಳಿತ ಸಂಸ್ಥೆಗಳಿಗೆ 3ನೇ ಹಂತದ ನಗರೋತ್ಥಾನ ಯೋಜನೆಯಲ್ಲಿ 2,855 ಕೋ.ರೂ. ಅನುದಾನ ಬಿಡುಗಡೆಗೊಂಡಿದೆ ಎಂದರು.
ಎಸ್‌ಎಫ್‌ಸಿಯಲ್ಲಿ ಇಲಾಖೆ ವ್ಯಾಪ್ತಿಯ ಸ್ಥಳೀಯಾಡಳಿತ ಸಂಸ್ಥೆಗಳಿಗೆ 2016-17ರಲ್ಲಿ 12.59 ಕೋ.ರೂ. ಅನುದಾನ ಬಂದಿದ್ದು, ಈಗಾಗಲೇ ಶೇ. 80 ಕಾಮಗಾರಿ ಪೂರ್ಣ ಗೊಂಡಿದೆ. 2017-18ರಲ್ಲಿಯೂ 12.59 ಕೋ.ರೂ. ಅನುದಾನ ಬಿಡುಗಡೆ ಗೊಂಡಿದ್ದು, ಟೆಂಡರ್ ಪ್ರಕ್ರಿಯೆ ಮುಗಿದು ಈಗಾಗಲೇ ಕಾಮಗಾರಿ ನಡೆಯುತ್ತಿದೆ ಎಂದರು.
ಘನತ್ಯಾಜ್ಯ ವಿಲೇವಾರಿ ಕುರಿತು ಕೂಡ ಗಮನ ಹರಿಸಲಾಗಿದ್ದು, ಅದರ ನಿರ್ವಹಣೆ ಕುರಿತಂತೆ ತಿಂಗಳೊಳಗೆ ಟೆಂಡರು ಪ್ರಕ್ರಿಯೆ ಪೂರ್ಣ ಗೊಳಿಸಲು ಸೂಚಿಸಲಾಗಿದೆ. ಘಟಕ ಸ್ಥಾಪನೆಗೆ ಕೋಟೆಕಾರಿನಲ್ಲಿ ಲಭ್ಯವಿರುವ 3 ಎಕರೆ ಹಾಗೂ ವಿಟ್ಲದಲ್ಲಿ ಲಭ್ಯವಿರುವ ಒಂದು ಎಕರೆ ನಿವೇಶನವನ್ನು 5 ಎಕರೆಗೆ ಏರಿಸಲು ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಹೆಳಿದರು.
ಜಿಲ್ಲೆಯ ನಗರ, ಪಟ್ಟಣ ಸ್ಥಳೀಯಾಡಳಿತ ಸಂಸ್ಥೆಗಳಲ್ಲಿ ದುಡಿಯುತ್ತಿರುವ 29 ಮಂದಿ ಪೌರಕಾರ್ಮಿಕರಿಗೆ ಗೃಹಭಾಗ್ಯ ಯೋಜನೆಯಲ್ಲಿ 7.5 ಲಕ್ಷ ರೂ. ನೀಡಲು ತೀರ್ಮಾನಿಸಲಾಗಿದೆ. ಜತೆಗೆ ಹೊರಗುತ್ತಿಗೆ ಆಧಾರದಲ್ಲಿ ದುಡಿಯುವ ಪೌರಕಾರ್ಮಿಕರಿಗೆ ಒಪ್ಪಂದ ಅವಧಿ ಮುಗಿದ ಕೂಡಲೇ ಸ್ಥಳೀಯಾಡಳಿತ ಸಂಸ್ಥೆಯಿಂದಲೇ ನೇರವಾಗಿ ವೇತನ ನೀಡಲಾಗುವುದು. ಸ್ಥಳೀಯಾಡಳಿತ ಸಂಸ್ಥೆಗಳಲ್ಲಿ ಪ್ರಸ್ತುತ ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಸರಕಾರ ಆಡಳಿತಕ್ಕೆ ಬರುವ ಮೊದಲು ಶೇ. 50ರಷ್ಟು ಹುದ್ದೆಗಳು ಖಾಲಿ ಇತ್ತು. ಪ್ರಸ್ತುತ ರಾಜ್ಯದಲ್ಲಿ 2500 ಹುದ್ದೆಗಳ ಭರ್ತಿಗೆ ಈಗಾಗಲೇ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
You must be logged in to post a comment Login