Connect with us

  DAKSHINA KANNADA

  ನಕಲಿ ದಾಖಲೆ ನೀಡಿ 50 ಲಕ್ಷಕ್ಕೂ ಅಧಿಕ ಪಂಗನಾಮ ಹಾಕಿದ ಕರ್ನಾಟಕ ಜಾನಪದ ಪರಿಷತ್ ಗಡಿನಾಡ ಘಟಕದ ಅಧ್ಯಕ್ಷ ಕೇಶವಪ್ರಸಾದ್ ನಾಣಿತ್ತಿಲು

  ಮಂಗಳೂರು,ಜುಲೈ 25 : ಕೆಲವರು ಎಷ್ಟು ಚಾಣಾಕ್ಷರಿರುತ್ತಾರೆ ಅಂದ್ರೆ ಬ್ಯಾಂಕ್ ಅಧಿಕಾರಿಗಳನ್ನು ಮಾತಿನಿಂದಲೇ ಮರುಳಾಗಿಸಿ ಲೋನ್ ತೆಗೆದು ಬಿಡುತ್ತಾರೆ. ಇನ್ನು ಕೆಲವರು ಖೊಟ್ಟಿ ದಾಖಲೆಗಳನ್ನು ತೋರಿಸಿ ಸಾಲ ಪಡೆದು ಅಧಿಕಾರಿಗಳನ್ನೇ ಯಾಮಾರಿಸುತ್ತಾರೆ. ಹೀಗೆ ಮೋಸ ಗೊತ್ತಾಗುವ ಹೊತ್ತಿಗೆ ಆತ ಬ್ಯಾಂಕುಗಳನ್ನೇ ಎದುರು ಹಾಕ್ಕೊಳ್ಳುವಷ್ಟರ ಮಟ್ಟಿಗೆ ಬೆಳೆದಿರುತ್ತಾನೆ. ಹೌದು… ಇಂಥ ಖತರ್ನಾಕ್ ವಂಚಕನ ಕತೆ ಮಂಗಳೂರಿನಲ್ಲಿ ಬೆಳಕಿಗೆ ಬಂದಿದೆ.
  ವ್ಯಕ್ತಿಯೊಬ್ಬ ರಾಜಕೀಯದ ಕರಿನೆರಳಿನಡಿ ವಿವಿಧ ಬ್ಯಾಂಕುಗಳಿಗೆ ಖೊಟ್ಟಿ ದಾಖಲೆ ನೀಡಿ ಲಕ್ಷಾಂತರ ರೂಪಾಯಿ ಮೋಸಗೈದ ವೃತ್ತಾಂತವಿದು. ಆತನ ಹೆಸರು ಕೇಶವಪ್ರಸಾದ್ ನಾಣಿತ್ತಿಲು. ಗಡಿನಾಡು ಕಾಸರಗೋಡು ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿಯೂ ಆಗಿರೋ ಈತ, ಕರ್ನಾಟಕ ಸರಕಾರದಡಿ ಬರುವ ಜಾನಪದ ಅಕಾಡೆಮಿಯ ಗಡಿನಾಡು ಘಟಕದ ಅಧ್ಯಕ್ಷನಾಗಿದ್ದಾನೆ. ಈತನ ವಿರುದ್ಧ ಮಂಗಳೂರಿನ ಕೆನರಾ ಬ್ಯಾಂಕ್ ಸೇರಿದಂತೆ ಕಾಸರಗೋಡಿನ ಹಲವು ಬ್ಯಾಂಕುಗಳಿಗೆ ನಕಲಿ ದಾಖಲೆ ನೀಡಿ ಸಾಲ ತೆಗೆದು ವಂಚಿಸಿದ ಆರೋಪ ಕೇಳಿಬಂದಿದೆ.
  ಕಾಸರಗೋಡು ಜಿಲ್ಲೆಯ ಕುಂಬಳೆ ಸೇವಾ ಸಹಕಾರಿ ಬ್ಯಾಂಕಿನಿಂದ ಕೇಶವಪ್ರಸಾದ್ ತನ್ನ ಪತ್ನಿ ಹೆಸರಲ್ಲಿ ಜಾಗ ಅಡವಿಟ್ಟು 2009ರಲ್ಲಿ ಎಂಟು ಲಕ್ಷ ರೂಪಾಯಿ ಲೋನ್ ಮಾಡಿದ್ದ. ಆದರೆ ಐದು ವರ್ಷದ ಅವಧಿ ಮೀರಿದ್ದರೂ ಸಾಲ ಪಾವತಿ ಮಾಡಿರಲಿಲ್ಲ. ಇದೀಗ ಆಡಳಿತ ಕಮಿಟಿ ಬದಲಾದಾಗ ಅಡವಿಟ್ಟ ಜಾಗದ ದಾಖಲೆಯೇ ನಕಲಿ ಅನ್ನೋದು ಬಯಲಾಗಿದೆ. ಹೀಗಾಗಿ ಬ್ಯಾಂಕ್ ಆಡಳಿತ ಕಮಿಟಿ ಕುಂಬ್ಲೆ ಪೊಲೀಸ್ ಠಾಣೆಗೆ ದೂರು ನೀಡಿದ್ದು ಕೇಶವಪ್ರಸಾದ್ ವಿರುದ್ಧ ಎಫ್ಐಆರ್ ದಾಖಲಾಗಿದೆ.
  ವಿಶೇಷ ಅಂದ್ರೆ, ಬ್ಯಾಂಕಿನಲ್ಲಿ ಈ ಹಿಂದೆ ಕಾರ್ಯದರ್ಶಿ ಆಗಿದ್ದ ಜಗದೀಶ್ ರೈ ಕೂಡ ಮೋಸದಲ್ಲಿ ಶಾಮೀಲಾಗಿದ್ದು, ಬ್ಯಾಂಕು ಆತನನ್ನು ಸೇವೆಯಿಂದ ವಜಾ ಮಾಡಿದೆ. ಇದಲ್ಲದೆ, ಕೇಶವಪ್ರಸಾದ್ ಮಂಗಳೂರಿನ ಉರ್ವಾ ಸ್ಟೋರಿನಲ್ಲಿ ಪ್ರಿಂಟಿಂಗ್ ಪ್ರೆಸ್ ಇದೆಯೆಂದು ನಕಲಿ ದಾಖಲೆ ಸೃಷ್ಟಿಸಿ ಬಲ್ಮಠ ಶಾಖೆಯ ಕೆನರಾ ಬ್ಯಾಂಕಿನಿಂದ 2003ರಲ್ಲಿ 40 ಲಕ್ಷ ರೂಪಾಯಿ ಸಾಲ ಮಾಡಿ ವಂಚಿಸಿದ್ದ. ಈ ವಿಚಾರದಲ್ಲಿ ಮಂಗಳೂರಿನ ಪಾಂಡೇಶ್ವರ ಠಾಣೆಯಲ್ಲಿ ಕೇಸು ದಾಖಲಾಗಿದ್ದು, ಮಂಗಳೂರಿನ ಸಿಜೆಎಂ ನ್ಯಾಯಾಲಯ 2009ರಲ್ಲಿ ಆಸ್ತಿ ಜಪ್ತಿಗೆ ಆದೇಶ ಮಾಡಿದೆ. ಹೀಗಿದ್ದರೂ ಕೇಶವಪ್ರಸಾದ್, ಬಿಜೆಪಿ ಮತ್ತು ಕಾಂಗ್ರೆಸ್ ರಾಜಕಾರಣಿಗಳ ಕೃಪೆಯಿಂದ ತನ್ನ ಬಂಧನವಾಗದಂತೆ ನೋಡಿಕೊಂಡಿದ್ದಾನೆ.
  ಇದಲ್ಲದೆ, ಕಾಸರಗೋಡಿನಲ್ಲಿ ಕೇಶವಪ್ರಸಾದ್, ಒಂದೇ ಮನೆಯ ದಾಖಲೆ ಪತ್ರವನ್ನು ಪೋರ್ಜರಿ ಮಾಡಿ, ನಾಲ್ಕು ಬ್ಯಾಂಕುಗಳಿಂದ ಲೋನ್ ತೆಗೆದಿರುವ ವಿಚಾರದಲ್ಲಿಯೂ ಕೇಸು ದಾಖಲಾಗಿದೆ. ಒಟ್ಟಿನಲ್ಲಿ ಸಾಮಾನ್ಯ ಜನ ಇಂತಹ ವಂಚನೆಗಳಲ್ಲಿ ಶಾಮೀಲಾದರೆ ಪೊಲೀಸರು ಹಿಂದೆ ಮುಂದೆ ನೋಡದೆ ಬಂಧಿಸುತ್ತಾರೆ. ಆದರೆ ಜನರಿಗೆ ಬುದ್ಧಿ ಹೇಳಬೇಕಾದ ರಾಜಕಾರಣಿಗಳೇ ಇಂಥ ಕೃತ್ಯ ಎಸಗಿದರೆ ಪೊಲೀಸರು ಮೌನವಾಗಿರುವುದು ನಮ್ಮ ವ್ಯವಸ್ಥೆಗೆ ಹಿಡಿದ ಕನ್ನಡಿ ಎನ್ನಬೇಕು..

  Share Information
  Advertisement
  Click to comment

  You must be logged in to post a comment Login

  Leave a Reply