ಮಂಗಳೂರು,ಆಗಸ್ಟ್ 03 : ದಲಿತರಿಗೆ ಮೀಸಲಾಗಿರುವ ಡಿಸಿ ಮನ್ನಾ ಭೂಮಿಯನ್ನು ದಲಿತರಿಗೆ ಹಂಚಿಕೆ ಮಾಡದೆ ಜಿಲ್ಲಾಧಿಕಾರಿ ನಿರ್ಲಕ್ಷ್ಯ ತೋರುತ್ತಿದ್ದಾರೆ ಎಂದು ದಲಿತ ಸಂಘಟನೆಯ ಮುಖಂಡರು ಬುಧವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದ್ದು, ಇದರಿಂದ ಆಕ್ರೋಶಿತರಾದ ಜಿಲ್ಲಾಧಿಕಾರಿ ಡಾ. ಜಗದೀಶ್ ಅವರು ಸಭೆಯನ್ನು ಬಹಿಷ್ಕರಿಸಿ ಹೊರನಡೆದ ಪ್ರಸಂಗ ನಡೆದಿದೆ.

ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಅವರ ಕಚೇರಿ ಸಭಾಂಗಣದಲ್ಲಿ ಪರಿಶಿಷ್ಟಜಾತಿ ಮತ್ತು ಪಂಗಡಗಳ ಕುಂದುಕೊರತೆ ಸಭೆ ನಡೆಯಿತು. ಡಿಸಿ ಮನ್ನಾ ಜಾಗವನ್ನು ದಲಿತರಿಗೆ ಹಂಚಿಕೆ ಮಾಡುವಂತೆ ಆಗ್ರಹ ವ್ಯಕ್ತವಾದಾಗ ಸ್ಪಷ್ಟನೆ ನೀಡಿದ ಜಿಲ್ಲಾಧಿಕಾರಿಯವರು, ಡಿಸಿ ಮನ್ನಾ ಭೂಮಿ ಬಗ್ಗೆ ಸರಕಾರದ ಮಟ್ಟದಲ್ಲಿ ಸ್ಪಷ್ಟ ಮಾರ್ಗಸೂಚಿ ಇಲ್ಲ. ಈ ಬಗ್ಗೆ ಸ್ಪಷ್ಟ ಆದೇಶ ನೀಡುವಂತೆ ಸರಕಾರಕ್ಕೆ ಬರೆಯಲಾಗಿದೆ ಎಂದರು.

ಇದರಿಂದ ಆಕ್ರೋಶಗೊಂಡ ದಲಿತ ಮುಖಂಡರು ಏರು ದನಿಯಲ್ಲಿ ಮಾತನಾಡಿ, ಅಧಿಕಾರಿಗಳು ಕಾನೂನನ್ನು ತಮ್ಮ ಮೂಗಿನ ನೇರಕ್ಕೆ ಅರ್ಥೈಸುತ್ತಾರೆ. ಡಿ.ಸಿ ಮನ್ನಾ ಜಮೀನು ಮಂಜೂರು ಮಾಡಲು ಯಾವ ಅಡ್ಡಿಗಳೂ ಇಲ್ಲ. ತಕ್ಷಣವೇ ಮಂಜೂರಾತಿ ಪ್ರಕ್ರಿಯೆ ಆರಂಭಿಸಿ, ಸಬೂಬು ಹೇಳುವುದು ಬೇಡ ಎಂದು ಹರಿಹಾಯ್ದರು. , ಜಿಲ್ಲಾಧಿಕಾರಿಯಾದ ನೀವು ದಲಿತ ವಿರೋಧಿ ಎಂದು ಹಲವರು ಏರು ಧ್ವನಿಯಲ್ಲಿ ಅಸಮದಾನ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಜಗದೀಶ್ ನೀವೇ ಮಾತನಾಡುವುದಾದರೆ ನಾನು ಸಭೆ ನಡೆಸುವುದಿಲ್ಲ ಎಂದು ಹೇಳಿದರು. ಈ ಮಾತಿಗೆ ದಲಿತ ಮುಖಂಡರು ಮತ್ತಷ್ಟು ಜೋರಾಗಿ ಜಿಲ್ಲಾಧಿಕಾರಿಯವರ ವಿರುದ್ದ ಮಾತನಾಡತೊಡಗಿದರು. ತಕ್ಷಣವೇ ಜಿಲ್ಲಾಧಿಕಾರಿ ಆಸನದಿಂದ ಎದ್ದು ಸಭೆಯನ್ನು ಬಹಿಷ್ಕರಿಸಿ ಹೊರನಡೆದರು. .

ಸಭೆ ರದ್ದಾಗುತ್ತಿದ್ದಂತೆ ಕೆರಳಿದ ದಲಿತ ಮುಖಂಡರು ಜಿಲ್ಲಾಧಿಕಾರಿ ವಿರುದ್ದ ಘೋಷಣೆಗಳನ್ನು ಕೂಗಿ ಪ್ರತಿಭಟಿಸಿದರು. ದಲಿತ ವಿರೋಧಿ ಜಿಲ್ಲಾಧಿಕಾರಿಗೆ ಧಿಕ್ಕಾರ ಎಂದು ಘೋಷಣೆ ಕೂಗಿ ಪ್ರತಿಭಟನೆ ನಡೆಸಿದರು.