ಮಂಗಳೂರು ಅಗಸ್ಟ್ 15 : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸ್ವಾತಂತ್ರ್ಯೋತ್ಸವವನ್ನು ಅದ್ಧೂರಿಯಾಗಿ ಆಚರಿಸಲಾಯಿತು. ಮಂಗಳೂರಿನ ನೆಹರೂ ಮೈದಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಧ್ವಜಾರೋಹಣ ನೆರವೇರಿಸಿದರು.
ಬಳಿಕ ಸ್ವಾತಂತ್ರ್ಯೋತ್ಸವದ ಸಂದೇಶ ನೀಡಿದ ಅವರು ಜಿಲ್ಲೆಯಲ್ಲಿ ನಡೆದ ಪ್ರಗತಿ ಹಾಗೂ ಅಭಿವೃದ್ಧಿ ಕಾಮಗಾರಿಗಳಿಗೆ ರಾಜ್ಯ ಸರ್ಕಾರದಿಂದ ಬಿಡುಗಡೆಯಾದ ಅನುದಾನಗಳ ವಿವರ ನೀಡಿದರು.
ಕಾರ್ಯಕ್ರಮದ ಅಂಗವಾಗಿ ಪೊಲೀಸ್ ಪಡೆ, ಗೃಹರಕ್ಷಕ ದಳ, ಅಗ್ನಿಶಾಮಕ ದಳ ,ಸ್ಕೌಟ್ಸ್ ಮತ್ತು ಗೈಡ್ಸ್ ಸೇರಿದಂತೆ ಎನ್ ಸಿ ಸಿ ವಿಭಾಗದ ವಿದ್ಯಾರ್ಥಿಗಳ ಆಕರ್ಷಕ ಪಥಸಂಚಲನ ಕೂಡ ನಡೆಯಿತು .
ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಮಹನೀಯರಿಗೆ ಸ್ವಾತಂತ್ರ್ಯೋತ್ಸವದ ಅಂಗವಾಗಿ ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಯಿತು. ಎಸ್ಎಸ್ಎಲ್ ಸಿ ಪರೀಕ್ಷೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಗೆ ಗರಿಷ್ಠ ಅಂಕ ಪಡೆದ ೧೦ ಮಂದಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಜಿಲ್ಲಾಡಳಿತ ವತಿಯಿಂದ ಲ್ಯಾಪ್ ಟಾಪ್ ವಿತರಿಸಲಾಯಿತು . ಮುಖ್ಯಮಂತ್ರಿ ಹರೀಶ್ ಸಾಂತ್ವನ ಯೋಜನೆಯಡಿ ಜಿಲ್ಲೆಯ ಮೂವರಿಗೆ ಜೀವ ರಕ್ಷಕ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು .
ಈ ಸಂದರ್ಭದಲ್ಲಿ ಪುತ್ತೂರು ನಗರಸಭೆಗೆ ಹಾಗೂ ಬೆಳ್ತಂಗಡಿಯ ಪಟ್ಟಣ ಪಂಚಾಯಿತಿಗೆ ಬಯಲು ಶೌಚ ಮುಕ್ತ ನಗರ ಪ್ರಶಸ್ತಿ ಯನ್ನು ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ವಿತರಿಸಿದರು. ಸಂಸದ ನಳಿನ್ ಕುಮಾರ್ ಕಟೀಲ್, ಶಾಸಕ ಮೊಯಿದಿನ್ ಬಾವಾ, ಜೆ. ಆರ್ ಲೋಬೊ, ವಿಧಾನ ಪರಿಷತ್ ಮುಖ್ಯ ಸಚೇತಕ ಐವನ್ ಡಿ ಸೋಜಾ, ಮೇಯರ್ ಕವಿತಾ ಸನಿಲ್, ಬಿಷಪ್ ಅಲೋಶಿಯಸ್ ಪಾವ್ಲ್ ಡಿ ಸೊಜಾ ಅವರುಗಳು ಉಪಸ್ಥಿತರಿದ್ದರು. 

Facebook Comments

comments