DAKSHINA KANNADA
ಜನಪ್ರತಿನಿಧಿಗಳಿಗೆ ಕಾಯದೆ ಜನರಿಂದೇ ಸೇತುವೆ ಉದ್ಘಾಟನೆ.
ಪುತ್ತೂರು. ಜುಲೈ 16: ಪ್ರಸಿದ್ಧ ನಾಗಕ್ಷೇತ್ರವಾದ ಕುಕ್ಕೆ ಸುಬ್ರಮಣ್ಯ ಹಾಗೂ ಧರ್ಮಸ್ಥಳ ಕ್ಷೇತ್ರವನ್ನು ಸಂಪರ್ಕಿಸುವ ರಸ್ತೆಯಾದ ಪುತ್ತೂರು ತಾಲೂಕಿನ ಕುದ್ಮಾರು ಗ್ರಾಮದ ಶಾಂತಿಮುಗೇರು ಎಂಬಲ್ಲಿ ನೂತನವಾಗಿ ನಿರ್ಮಾಣವಾದ ಸೇತುವೆಗೆ ಇಂದು ಗ್ರಾಮಸ್ಥರೇ ಸೇರಿ ಉದ್ಘಾಟನೆ ನೆರವೇರಿಸಿದರು. ಸುಮಾರು 13.81 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗಿರುವ ಈ ಸೇತುವೆಯ ಕಾಮಗಾರಿ ಮುಗಿದರೂ, ಉದ್ಘಾಟನೆಯ ಭಾಗ್ಯ ಮಾತ್ರ ದೊರೆಕಿರಲಿಲ್ಲ. ಲೋಕೋಪಯೋಗಿ ಇಲಾಖೆ ಸೇತುವೆ ಉದ್ಘಾಟನೆಗಾಗಿ ಜನಪ್ರತಿನಿಧಿಗಳ ಸಮಯಕ್ಕೆ ಕಾಯುತ್ತಿದ್ದರೆ, ಈ ಬೆಳವಣಿಗೆಯಿಂದ ಬೇಸತ್ತ ಶಾಂತಿಮುಗೇರು, ಅಲಂಗಾರು, ಕಾಣಿಯೂರು ಗ್ರಾಮದ ಜನ ಇಂದು ಸೇತುವೆಗೆ ಅಧಿಕೃತ ಚಾಲನೆ ನೀಡಿದ್ದಾರೆ. ಮಂಗಳೂರು-ಬೆಂಗಳೂರು, ಮಾಣಿ-ಮೈಸೂರು, ಸುಬ್ರಮಣ್ಯ ಮಂಜೇಶ್ವರ ರಾಜ್ಯ ಹಾಗೂ ರಾಷ್ಟ್ರೀಯ ಹೆದ್ದಾರಿಗಳಿಗೆ ಈ ಸೇತುವೆಯು ಸಂಪರ್ಕ ಸೇತುವಾಗಿದೆ.
You must be logged in to post a comment Login