ಬೆಂಗಳೂರು, ಆಗಸ್ಟ್ 24:ಗಣೇಶ ಚತುರ್ಥಿಗೆ ಮೋದಿ ಸರ್ಕಾರ ಹೊಸ ಗಿಫ್ಟ್ ಕೊಟ್ಟಿದೆ. ಇದೇ ಮೊದಲ ಬಾರಿಗೆ 200 ರೂಪಾಯಿ ಮುಖ ಬೆಲೆಯ ಹೊಸ ನೋಟುಗಳನ್ನು ದೇಶದ ಜನರಿಗೆ ಬಿಡುಗಡೆ ಮಾಡಿದೆ.
ಈ ಬಗ್ಗೆ ಭಾರತೀಯ ರಿಸರ್ವ್ ಬ್ಯಾಂಕ್ ಪ್ರಕಟನೆ ನೀಡಿದ್ದು ನಾಳೆ ಶುಕ್ರವಾರದಿಂದ 200 ರೂಪಾಯಿ ಮುಖಬೆಲೆಯ ನೋಟುಗಳನ್ನು ಬಿಡುಗಡೆ ಮಾಡುವುದಾಗಿ ಅದು ಹೇಳಿದೆ. ನೂತನ 500 ರೂಪಾಯಿ ಮುಖಬೆಲೆಯ ನೋಟಿನ ಎತ್ತರದಷ್ಟೇ 200 ರೂ. ನೋಟು ಇರಲಿದ್ದು, ಅಗಲ ಸ್ವಲ್ಪ ಕಡಿಮೆ. ಹೊಸ ನೋಟು ಕಡು ಹಳದಿ ಬಣ್ಣದಲ್ಲಿದ್ದು, ಮುಂಭಾಗದ ಮಧ್ಯದಲ್ಲಿಮಹಾತ್ಮಾ ಗಾಂಧಿ ಭಾವಚಿತ್ರವಿದೆ. ನೋಟಿನ ಹಿಂಭಾಗದಲ್ಲಿ ಸಾಂಚಿ ಸ್ತೂಪದ ಚಿತ್ರವಿದೆ.
ಭಾರತೀಯ ರಿಸರ್ವ್ ಬ್ಯಾಂಕ್ 200 ರೂ. ಮುಖಬೆಲೆಯ ಹೊಸ ನೋಟುಗಳನ್ನು ಚಲಾವಣೆಗೆ ನೀಡಲು ಸಜ್ಜಾಗಿದೆ. ನೋಟಿನಲ್ಲಿ ಮಹಾತ್ಮಗಾಂಧಿ ಚಿತ್ರವಿದ್ದು, ಆರ್ ಬಿ ಐ ಗವರ್ನರ್ ಡಾ. ಊರ್ಜಿತ್ ಆರ್. ಪಟೇಲ್ ಅವರ ಸಹಿಯುಳ್ಳ ಈ ಹೊಸ ನೋಟುಗಳು ಆಯ್ದ ಆರ್ ಬಿಐ ಕಚೇರಿಗಳಲ್ಲಿ ಮತ್ತು ಪ್ರಮುಖ ಬ್ಯಾಂಕ್ ಗಳಲ್ಲಿ ಬಿಡುಗಡೆ ಮಾಡಲಿದೆ. ಕೆಲ ದಿನಗಳಲ್ಲಿ ಎಲ್ಲಾ ಕಡೆಗಳಲ್ಲೂ ಇವು ಲಭ್ಯವಾಗಲಿವೆ ಎಂದು ತಿಳಿಸಿದೆ.