ಮಂಗಳೂರು, ಆಗಸ್ಟ್ 24:  ಡಿವೈಎಸ್ಪಿ ಗಣಪತಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಸದ ನಳಿನ್ ಕುಮಾರ್ ಕಟೀಲ್ ಮಂಗಳೂರಿನಲ್ಲಿ ಸುದ್ಧಿಗೋಷ್ಟಿಯಲ್ಲಿ ಮಾತನಾಡಿದ್ದು, ಡಿವೈಎಸ್ಪಿ ಗಣಪತಿ ಬಳಿಯಿದ್ದ ರಹಸ್ಯಗಳನ್ನು ಅಳಿಸಿ ಹಾಕಿದ ರಾಜ್ಯ ಸರಕಾರಕ್ಕೆ ಆಡಳಿತದಲ್ಲಿ ಮುಂದುವರಿಯಲು ನೈತಿಕ ಹಕ್ಕಿಲ್ಲದ ಹಿನ್ನಲೆಯಲ್ಲಿ ಸರಕಾರವೇ ಸ್ವಯಂಪ್ರೇರಿತವಾಗಿ ಆಧಿಕಾರದಿಂದ ಕೆಳಗಿಳಿಯಬೇಕೆಂದು ಅವರು ಆಗ್ರಹಿಸಿದ್ದಾರೆ. ಮಡಿಕೇರಿಯ ಲಾಡ್ಜ್ ನಲ್ಲಿ ನಡೆದ ಗಣಪತಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅನೇಕ ಪ್ರಶ್ನೆಗಳು ಹುಟ್ಟಿಕೊಂಡಿದ್ದು, ಗಣಪತಿಯವರಿಂದ ಕೆಲವು ಖಾಲಿ ಪೇಪರ್ ಗಳಿಗೆ ಸಹಿ ಹಾಕಿಸಿ, ನಂತರ ಅವರ ಕೊಲೆ ಮಾಡಿಸಿ ಶವವನ್ನು ನೇತು ಹಾಕಿಸಿರುವ ಸಂಭವ ಜಾಸ್ತಿಯಾಗಿದೆ. ಗಣಪತಿಯವರು ತಮ್ಮ ಅಂತ್ಯದ ಸಮಯದಲ್ಲಿ ಸಚಿವ ಕೆ.ಜೆ.ಜಾರ್ಜ್ ಸಹಿತ ಇಬ್ಬರು ಉನ್ನತ ಅಧಿಕಾರಿಗಳ ಹೆಸರುಗಳನ್ನು ಸ್ಪಷ್ಟವಾಗಿ ಹೇಳಿದ್ದಾರೆ. ಅದರೊಂದಿಗೆ ಅವರ ಮೊಬೈಲ್ ಫೋನ್, ಕಂಪ್ಯೂಟರ್ ಗಳನ್ನು ಪರಿಶೀಲಿಸಿದ್ದರೆ, ಅನೇಕ ನಾಯಕರ ಅಸಲೀ ಕಥೆ ಬಯಲಿಗೆ ಬರುತ್ತಿತ್ತು. ಅದನ್ನೆಲ್ಲಾ ತಪ್ಪಿಸಲು ಸರಕಾರ ವ್ಯವಸ್ಥಿತ ಸಂಚು ರೂಪಿಸಿದೆ ಎಂದು ಫಾರನ್ಸಿಕ್ ವರದಿಯಿಂದ ಸ್ಪಷ್ಟವಾಗಿದೆ. ಇಂಥ ಕೊಲೆಗಡುಕ, ನೀಚ, ಕೆಟ್ಟ ಸರಕಾರ ಇನ್ನು ಮುಂದುವರಿಯಬಾರದು. ಈಗಾಗಲೇ ದಕ್ಷ ಅಧಿಕಾರಿಗಳನ್ನು ಕೊಂದು ಜೀರ್ಣಿಸಿಕೊಂಡಿರುವ ಈ ಸರಕಾರ ಮುಂದುವರಿದರೆ ಪ್ರಾಮಾಣಿಕರಿಗೆ ಉಳಿಗಾಲವಿಲ್ಲ. ಇನ್ನು ಪಾರದರ್ಶಕ ತನಿಖೆ ನಡೆಯುತ್ತದೆ ಎನ್ನುವ ವಿಶ್ವಾಸ ಜನರಿಗೆ ಇಲ್ಲದೇ ಇರುವುದರಿಂದ ಸರಕಾರವೇ ನೈತಿಕ ಹೊಣೆ ಹೊತ್ತು ಅಧಿಕಾರದಿಂದ ಕೆಳಗಿಳಿಯಬೇಕೆಂದು ಅವರು ಗುಡುಗಿದ್ದಾರೆ.

Share Information