ಮಂಗಳೂರು,ಆಗಸ್ಟ್ 26 :ಪ್ರಾಚೀನ ತುಳುನಾಡಿನಲ್ಲಿ ಪ್ರತಿಷ್ಠಿತ ಬಂಟ ಮನೆತನದ ಗುತ್ತಿನ ಚಾವಡಿಯಲ್ಲಿ ನ್ಯಾಯ ತೀರ್ಮಾನ ನಡೆಸುವ ಪದ್ಧತಿ ಜಾರಿಯಲ್ಲಿತ್ತು. ಗುತ್ತಿನ ಯಜಮಾನ ತೆಗೆದುಕೊಂಡ ನಿಷ್ಪಕ್ಷಪಾತದ ತೀರ್ಮಾನ ಸರ್ವರ ಮೆಚ್ಚುಗೆಗೆ ಪಾತ್ರವಾಗುತ್ತಿತ್ತು.ಜಿಲ್ಲೆಯಲ್ಲಿ ಧರ್ಮಧರ್ಮದ ನಡುವೆ ಇತ್ತೀಚೆಗೆ ಹದಗೆಡುತ್ತಿರುವ ಸೌಹಾರ್ದಯುತ ಸಂಬಂಧ ಮತ್ತೆ ಮರುಸ್ಥಾಪಿಸಲು ಈ ಹಿಂದಿನ ವ್ಯವಸ್ಥೆಯೇ ಜಾರಿಗೆ ಬರುವ ಅನಿವಾರ್ಯತೆ ಇದೆ ಎಂದು ಉಳ್ಳಾಲ ಸಯ್ಯದ್ ಮದನಿ ದರ್ಗಾ ಸಮಿತಿ ಅಧ್ಯಕ್ಷ ಹಾಜಿ ಅಬ್ದುಲ್ ರಶೀದ್ ಹೇಳಿದರು.
ಅವರು ಶ್ರೀ ಸಿದ್ಧಿವಿನಾಯಕ ಪ್ರತಿಷ್ಠಾನ ಹಾಗೂ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಆಶ್ರಯದಲ್ಲಿ ಮಂಗಳೂರಿನ ಬಂಟ್ಸ್ ಹಾಸ್ಟೆಲ್‍ನ ಓಂಕಾರನಗರದಲ್ಲಿ ನಡೆಯುತ್ತಿರುವ ಸಾರ್ವಜನಿಕ ಶ್ರೀ ಗಣೇಶೋತ್ಸವದ ಧಾರ್ಮಿಕ ಸಭೆಯ ಮುಖ್ಯ ಅತಿಥಿಯಾಗಿ ಮಾತನಾಡಿದರು.
ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ಅಧ್ಯಕ್ಷ ಹಾಗೂ ಆಡಳಿತ ನಿರ್ದೇಶಕ ರಾಜ್ ಕಿರಣ್ ಜಿ.ರೈ ಮಾತನಾಡಿ, ಪ್ರಪಂಚದಾದ್ಯಂತ ಶ್ರೀ ಗಣೇಶನನ್ನು ಆರಾಧಿಸಲಾಗುತ್ತಿದ್ದು, ಗಣೇಶೋತ್ಸವದ ಕಾರ್ಯಕ್ರಮದಲ್ಲಿ ಸರ್ವಧರ್ಮೀಯರನ್ನು ಒಗ್ಗೂಡಿಸುವ ಮೂಲಕ ಶ್ರೀ ಗಣೇಶ ಸರ್ವರೂ ಸೇರಿ ಆರಾಧಿಸುವ ದೇವರಾಗಿದ್ದಾರೆ ಎಂದು ಹೇಳಿದರು.
ಕೂಳೂರು ಚರ್ಚ್‍ನ ಧರ್ಮಗುರು ರೇಫಾ ವಿನ್ಸೆಂಟ್‍ಡಿಸೋಜ ಮಾತನಾಡಿ, ಸಾರ್ವಜನಿಕ ಗಣೇಶೋತ್ಸವದಿಂದ ಈಶಸೇನೆ, ದೇಶಸೇನೆ ಹಾಗೂ ಕಲಾಸೇನೆ ಎಂಬ ನಾಲ್ಕು ಬಗೆಯ ಸೇನಾ ಕಾರ್ಯಗಳು ನಡೆಯುತ್ತಿರುವುದು ಪ್ರಶಂಸನೀಯ ಎಂದರು. ಈ ಸಂದರ್ಭದಲ್ಲಿ ರಾಜ್ ಕಿರಣ್ ಜಿ. ರೈ, ಮೊಂಡೊವಿ ಮೋಟರ್ಸ್‍ನ ಆಡಳಿತ ನಿರ್ದೇಶಕ ಆರೂರು ಸಂಜಯರಾವ್, ಮನೋಹರ ಶೆಟ್ಟಿ, ಡಾ. ಮಹಮ್ಮದ್ ಇಕ್ಬಾಲ್, ಪತ್ರಕರ್ತ ಡಾ. ರೊನಾಲ್ಡ್  ಅನಿಲ್ ಫೆರ್ನಾಂಡಿಸ್, ಡಾ. ಸದಾನಂದ ಪೆರ್ಲ, ಜೀವನ್‍ರಾಮ್ ಸುಳ್ಯರವರನ್ನು ಸನ್ಮಾನಿಸಿ ಗೌರವಿಸಲಾಯಿತು.

Facebook Comments

comments