Connect with us

LATEST NEWS

ಕಾವ್ಯ ಆತ್ಮಹತ್ಯೆ ಪಿಎಂ ರಿಪೋರ್ಟಿನಲ್ಲಿ ದೃಢ,ಕಾರಣ ಮಾತ್ರ ನಿಗೂಢ

ಮಂಗಳೂರು, ಆಗಸ್ಟ್ 25 : ರಾಜ್ಯದೆಲ್ಲೆಡೆ ತೀವೃ ಕುತೂಹಲಕ್ಕೆ ಹಾಗೂ ಆಕ್ರೋಶಕ್ಕೆ ಕಾರಣವಾಗಿದ್ದ ಮೂಡಬಿದಿರೆಯ ಆಳ್ವಾಸ್ ಕಾಲೇಜಿನ ವಿದ್ಯಾರ್ಥಿನಿ, ಕ್ರೀಡಾಪಟು ಕಾವ್ಯ ನಿಗೂಢ ಸಾವಿನ ಪ್ರಕರಣಕ್ಕೆ  ಸಂಬಂಧಿಸಿದಂತೆ ಪೋಸ್ಟ್ ಮಾರ್ಟಂ ರಿಪೋರ್ಟ್ ಪೋಲೀಸರ ಕೈ ಸೇರಿದೆ ಎನ್ನಲಾಗಿದೆ. ಈ ವರದಿ ಪ್ರಕಾರ ಕಾವ್ಯಾ ಸಾವು ಆತ್ಮಹತ್ಯೆಯಿಂದಲೇ ನಡೆದಿರುವುದು ಸಾಬೀತಾಗಿದ್ದು, ಕಾವ್ಯಾ ಹಿಂಸೆ ನೀಡಿ ಕೊಲೆ ಮಾಡಲಾಗಿದೆ ಎನ್ನುವ ಆರೋಪಗಳಿಗೆ ಸಂಬಂಧಿಸಿದಂತಹ ಯಾವುದೇ ಪುರಾವೆಗಳೂ ಈ ರಿಪೋರ್ಟ್ ನಲ್ಲಿ ದೃಢಪಟ್ಟಿಲ್ಲ. ರಿಪೋರ್ಟ್ ಪ್ರಕಾರ ಕಾವ್ಯಾಳ ಕುತ್ತಿಗೆಯಲ್ಲಿ ನೇಣು ಹಾಕಿಕೊಂಡಿರುವ ಮಾರ್ಕ್ ಒಂದನ್ನು ಬಿಟ್ಟರೆ, ಆಕೆಯ ದೇಹದಲ್ಲಿ ಬೇರೆ ಯಾವುದೇ ಗಾಯದ ಗುರುತುಗಳು ಪತ್ತೆಯಾಗಿಲ್ಲ ಎನ್ನಲಾಗಿದೆ. ಆದರೆ ಕಾವ್ಯಾ ಪೋಷಕರು ಈ ಹಿಂದೆ ಹೇಳಿದಂತೆ ಕಾವ್ಯಾ ಕಾಲಿಗೆ ಉಗುರುಸುತ್ತು ಆಗಿದ್ದ ಹಿನ್ನಲೆಯಲ್ಲಿ ಅದಕ್ಕೆ ಶಸ್ತ್ರಚಿಕಿತ್ಸೆ ಮಾಡಲಾಗಿತ್ತು. ಶಸ್ತ್ರಚಿಕಿತ್ಸೆ ಮಾಡಿದ ಮಾರ್ಕ್ ಆಕೆಯ ಕಾಲಿನಲ್ಲೇ ಇತ್ತು. ಅಲ್ಲದೆ ಆಕೆಯ ಬಲಕೈ ಯಲ್ಲಿ ದೊಡ್ಡದೊಂದು ಜಿಡ್ಡು ಕೂಡಾ ಇತ್ತೆನ್ನಲಾಗಿದೆ. ಆದರೆ ಪೋಲೀಸರ ಪೋಸ್ಟ್ ಮಾರ್ಟಂ ರಿಪೋರ್ಟ್ ನಲ್ಲಿ ಈ ಎರಡೂ ಗುರುತುಗಳು ಇಲ್ಲ ಎನ್ನುವ ಮಾಹಿತಿ ಖಚಿತ ಮೂಲಗಳಿಂದ ತಿಳಿದುಬಂದಿದೆ. ಹಾಸ್ಟೆಲ್ ನಲ್ಲಿ ನೇಣು ಬಿಗಿದು ಸಾವಿಗೀಡಾದ ಕಾವ್ಯಾ ಳ ಮೃತದೇಹವನ್ನು ಇಳಿಸುವ ಸಂದರ್ಭದಲ್ಲಿ ಯಾವುದೇ ವಿಡಿಯೋಗ್ರಫಿ ಮಾಡಿಲ್ಲ ಹಾಗೂ ಮೃತದೇಹದ ಪೋಸ್ಟ್ ಮಾರ್ಟಂ ಮಾಡುವಾಗಲೂ ಯಾವುದೇ ಫೋಟೋಗ್ರಫಿ ಯಾಗಲೀ, ವಿಡಿಯೋಗ್ರಫಿಯನ್ನಾಗಲೀ ಮಾಡಿಲ್ಲ ಎನ್ನುವ ಮಾಹಿತಿಯೂ ಲಭ್ಯವಾಗಿದೆ. ಸುಪ್ರೀಂಕೋರ್ಟ್ ನ ಆದೇಶದ ಪ್ರಕಾರ ಮೃತದೇಹದ ಪರೀಕ್ಷೆ ನಡೆಸುವ ಸಂದರ್ಭದಲ್ಲಿ ಫೋಟೋಗ್ರಫಿ ಮತ್ತು ವಿಡಿಯೋಗ್ರಫಿ ಮಾಡುವುದು ಕಡ್ಡಾಯವಾಗಿದ್ದರೂ, ಕಾವ್ಯಾ ಮೃತದೇಹದ ವಿಷಯದಲ್ಲಿ ಈ ಲೋಪ ಯಾಕಾಗಿ ಸಂಭವಿಸಿತು ಎನ್ನುವುದು ಹಲವು ಸಂಶಯಗಳಿಗೂ ಎಡೆಮಾಡಿಕೊಟ್ಟಿದೆ. ಪೋಲೀಸ್ ವರದಿ ಹಾಗೂ ಪೋಸ್ಟ್ ಮಾರ್ಟಂ ವರದಿ ಪ್ರಕಾರ ಕಾವ್ಯಾ ಸಾವು ಆತ್ಮಹತ್ಯೆಯಿಂದಲೇ ನಡೆದಿರುವುದು ದೃಢಪಟ್ಟಿದ್ದರೂ, ಸಾವಿನ ಹಿಂದಿರುವ ಕಾರಣ ಮಾತ್ರ ಇನ್ನೂ ನಿಗೂಢವೇ ಆಗಿ ಉಳಿದಿದೆ. ಈ ನಡುವೆ ಕಾವ್ಯಾ ಸಾವಿನ ನಿಗೂಢತೆಯನ್ನು ಬಯಲಿಗೆಳೆಯಬೇಕು ಹಾಗೂ ಕಾವ್ಯಾ ಸಾವಿಗೆ ನ್ಯಾಯ ಸಿಗಬೇಕೆಂದು ಆಗ್ರಹಿಸಿ ಸರ್ವ ಕಾಲೇಜು ವಿದ್ಯಾರ್ಥಿ ಸಂಘ ಇದೇ ಶನಿವಾರದಂದು ಮಂಗಳೂರಿನಲ್ಲಿ ಒಂದು ದಿನದ ಉಪವಾಸ ಸತ್ಯಾಗ್ರಹವನ್ನೂ ನಡೆಸಲಿದೆ.

Facebook Comments

comments