ಮಂಗಳೂರು,ಜುಲೈ29:ಆಳ್ವಾಸ್ ಶಿಕ್ಷಣ ಸಂಸ್ಥೆಯಲ್ಲಿ ಕಲಿಯುತ್ತಿದ್ದ ವಿದ್ಯಾರ್ಥಿನಿ ಕಾವ್ಯಾ ನಿಗೂಢ ಸಾವಿನ ಕುರಿತು ಸಮಗ್ರ ತನಿಖೆ ನಡೆಸಬೇಕೆಂದು ಒತ್ತಾಯಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ದಕ್ಷಿಣಕನ್ನಡ ಜಿಲ್ಲಾಧಿಕಾರಿ ಕಛೇರಿ ಮುಂಭಾಗ ಪ್ರತಿಭಟನೆ ನಡೆಸಿತು.

ಕಾವ್ಯಾ ಸಾವಿನ ಕುರಿತಂತೆ ಆಕೆಯ ಪೋಷಕರು ಹಾಗೂ ಸಾರ್ವಜನಿಕರಲ್ಲಿ ಹಲವಾರು ಸಂಶಯಗಳು ಹುಟ್ಟಿಕೊಂಡಿದ್ದು, ಕಾವ್ಯಾ ಪೋಷಕರಿಗೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಸಾವಿನ ಕುರಿತು ಸಮಗ್ರ ತನಿಖೆ ನಡೆಯಬೇಕೆಂದು ಪ್ರತಿಭಟನಾನಿರತರು ಒತ್ತಾಯಿಸಿದರು.

ಜುಲೈ 20 ರಂದು ಆಳ್ವಾಸ್ ಶಿಕ್ಷಣ ಸಂಸ್ಥೆಯ ಆಡಳಿತಕ್ಕೊಳಪಟ್ಟ ಫ್ರೌಢಶಾಲೆಯಲ್ಲಿ ಕಲಿಯುತ್ತಿದ್ದ, ರಾಷ್ಟ್ರೀಯ ಮಟ್ಟದ ಕ್ರೀಡಾಪಟು ಕಾವ್ಯಾ ತನ್ನ ಹಾಸ್ಟೆಲ್ ನಲ್ಲಿ ನೇಣು ಬಿಗಿದು ಆತ್ಮಹತ್ಯೆ ನಡೆಸಿದ್ದರು. ಆತ್ಮಹತ್ಯೆಗೆ ಶಾಲೆಯ ಕಿರುಕುಳವೇ ಕಾರಣ ಎನ್ನುವ ಪೋಷಕರ ಆರೋಪದ ಹಿನ್ನಲೆಯಲ್ಲಿ ಮಂಗಳೂರು ನಗರ ಪೋಲೀಸ್ ಆಯುಕ್ತರು ಈಗಾಗಲೇ ಎಸಿಪಿ ನೇತೃತ್ವದ ತಂಡದ ಮೂಲಕ ತನಿಖೆಯನ್ನು ಆರಂಭಿಸಿದ್ದಾರೆ.