ಹಾಸನ ,ಆಗಸ್ಟ್ 23 : ಆಗಸ್ಟ್ 19 ರಂದು ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆಯ ಬಣಕಲ್ ಚೆಕ್ ಪೋಸ್ಟ್ ಬಳಿ ಕಂಡು ಬಂದಿರುವ 35 ಕ್ಕೂ ಅಧಿಕ ವಾರಿಸುದಾರಿಲ್ಲದ ಕುದುರೆಗಳ ಸುತ್ತ ಇದೀಗ ಅನೇಕ ಪ್ರಶ್ನೆಗಳು ಹುಟ್ಟಿವೆ. ಘಟ್ಟ ಪ್ರದೇಶದಿಂದ ಕರಾವಳಿ ಕಡೆಗೆ ಈ ಕುದುರೆಗಳನ್ನು ಕೊಂಡುಹೋಗಲಾಗುತ್ತಿತ್ತು ಎಂಬ ವಿಷಯ ಪೋಲಿಸರ ಪ್ರಾರ್ಥಮಿಕ ತನಿಖೆಯಿಂದ ತಿಳಿದು ಬಂದಿತ್ತು. ಹಾಸನದಿಂದ ವಾಹನದಲ್ಲಿ ಅಕ್ರಮವಾಗಿ ತುಂಬಿಸಿ ತಂದ ಈ ಕುದುರೆಗಳನ್ನು ತಪಾಸಣಾ ಕೇಂದ್ರಗಳ ಕಣ್ಣು ತಪ್ಪಿಸಿ ಕಳ್ಳದಾರಿಯಲ್ಲಿ ಚಾರ್ಮಾಡಿ ಮೂಲಕ ಕರಾವಳಿ ಭಾಗಕ್ಕೆ ಕೊಂಡು ಹೋಗುವ ಯೋಜನೆ ರೂಪಿಸಲಾಗಿತ್ತು. ಬಣಕಲ್ ಚೆಕ್ ಪೋಸ್ಟ್ ಬಳಿ ಕಟ್ಟು ನಿಟ್ಟಿನ ತಪಾಸಣೆ ಕಂಡ ಈ ಅಕ್ರಮ ಸಾಗಾಟಗಾರರು ಕುದುರೆಗಳನ್ನು ಅಲ್ಲಿಯೇ ಇಳಿಸಿ ಪರಾರಿಯಾಗಿದ್ದರು. ಆದರೂ ಇಷ್ಟೊಂದು ಪ್ರಮಾಣದಲ್ಲಿ ಕುದುರೆಗಳನ್ನು ಕರಾವಳಿ ಕಡೆಗೆ ಯಾಕೆ ತಗೊಂಡು ಹೋಗುತ್ತಿದ್ದಾರೆ ಎಂಬ ಅಂಶವನ್ನು ತೀವ್ರವಾಗಿ ಪರೀಶಿಲಿಸಿದಾಗ ಅಘಾತಕಾರಿ ಅಂಶವೊಂದು ಬೆಳಕಿಗೆ ಬಂದಿದೆ. ಈ ಕುದುರೆಗಳು ಕರಾವಳಿಯ ಅಕ್ರಮ ಕಸಾಯಿಖಾನೆಗಳಿಗೆ ರವಾನೆಯಾಗುತ್ತಿದ್ದುವು ಎಂಬ ಸಂಶಯ ದಟ್ಟವಾಗುತ್ತಿದೆ. ಇದಕ್ಕೆ ಅನೇಕ ಕಾರಣಗಳು ಇವೆ. ಕರಾವಳಿಯಲ್ಲಿ ಗೋ ಮಾಂಸಕ್ಕೆ ಬಾರಿ ಬೇಡಿಕೆ ಇದೆ. ಪ್ರತಿ ಕೆ.ಜಿ. ಗೋ ಮಾಂಸಕ್ಕೆ 180 ರಿಂದ 200 ರೂಪಾಯಿಗಳ ದರವಿದೆ. ಅಕ್ರಮ ಗೋವುಗಳ ತಡೆಗೆ ಹಿಂದೂ ಪರ ಸಂಘಟನೆಗಳು, ಪೋಲಿಸ್ ಇಲಾಖೆ ಹಾಗೂ ಗೋ ರಕ್ಷಕರು ಕಟ್ಟುನಿಟ್ಟಿನ ತಡೆ – ತಪಾಸಣಾ ಕ್ರಮಗಳನ್ನು ಕೈಗೊಂಡಿದ್ದರಿಂದ ,ಸಾಕಷ್ಟು ಪ್ರಮಾಣದಲ್ಲಿ ಗೋವುಗಳು ಲಭ್ಯವಿಲ್ಲದೆ ತೀವ್ರ ಕೊರತೆ ಎದುರಾಗಿದೆ. ಈ ಹಿನ್ನೆಯಲ್ಲಿ ಈ ಅಕ್ರಮ ವೃತ್ತಿಯಲ್ಲಿದ್ದವರಿಗೆ ಪರ್ಯಾಯವಾಗಿ ಹೊಳೆದದ್ದು ಕುದುರೆ ಮಾಂಸ ದಂಧೆ..! ಆಡು-ಕುರಿ ಮಾಂಸದ ಜೊತೆಗೆ ಸಣ್ಣ ಕರುಗಳನ್ನು ವಧೆಮಾಡಿ ಅದರ ಮಾಂಸ ಕಲಬೆರಕೆ ಮಾಡಿ ಮಾರಾಟ ಮಾಡುವುದು ಇದೀಗ ಕರಾವಳಿ ಭಾಗದಲ್ಲಿ ಮಾಮುಲಾಗಿದೆ. ಈಗ ಬೀಫ್ ಗೆ ಬದಲಿ ಏನು ಅದಕ್ಕೆ ಸಿಕ್ಕಿದ್ದೇ ಈ ಕುದುರೆ ಮಾಂಸ..! ಒಂದು ಕುದುರೆ ಸರಾಸರಿ ಏನಿಲ್ಲದಿದ್ದರೂ 300 ಕಿಲೋ ಗ್ರಾಂ ನಿಂದ 400 ಕೆ.ಜಿ. ವರೆಗೂ ತೂಕವಿರುತ್ತದೆ. ಕೆ.ಜಿ ಗೆ 200 ರೂಪಾಯಿಗಳ ಲೆಕ್ಕ ಹಾಕಿದರೂ 300 ಕೆಜಿಗೆ 60,000 ರೂಪಾಯಿಗಳು ಬರುತ್ತದೆ.  ಹಾಸನ, ಕುಣಿಗಲ್, ಸುತ್ತಮುತ್ತ ಪ್ರದೇಶಗಳಲ್ಲಿ ಕುದುರೆಗಳ ಸಂಖ್ಯೆ ಭಾರಿ ವೃದ್ದಿಸಿದೆ. ಬೀಡಾಡಿ ಕುದುರೆಗಳಿಂದ ಸಾರ್ವಜನಿಕ ನೆಮ್ಮದಿಯೂ ಹಾಳಾಗಿತ್ತು, ವಯಸ್ಸಾದ ಹಾಗೂ ಇತರ ಹೆಚ್ಚುವರಿ ಕುದುರೆಗಳನ್ನು ಏನು ಮಾಡಬೇಕೆಂದು ತೋಚದೆ ಒದ್ದಾಡುತ್ತಿರುವ ಈ ಭಾಗದ ಜನರಿಗೆ , ಹತ್ತಿರವಾದವರು ಕರಾವಳಿಯ ಅಕ್ರಮ ಗೋ ಕಳ್ಳರು ಮತ್ತು ಅಕ್ರಮ ಕಸಾಯಿಖಾನೆಯವರು. ಅವರು ಈ ಕುದುರೆಗಳನ್ನು ಜುಜೂಬಿ ಹಣ ನೀಡಿ ಖರೀದಿ ಮಾಡಿ ಕರಾವಳಿ ಭಾಗಕ್ಕೆ ಕೊಂಡು ಹೋಗಿ ಅಕ್ರಮ ಕಸಾಯಿಖಾನೆಗಳಲ್ಲಿ ಇವುಗಳನ್ನು ವಧೆ ಮಾಡಿ ಬೀಫ್ ನೊಂದಿಗೆ ಮಾರಾಟ ಮಾಡಲಾಗುತ್ತಿದೆ ಎಂಬ ಗುಮಾನಿ ದಟ್ಟವಾಗಿದೆ. ಯೂರೋಪ್ ರಾಷ್ಟ್ರಗಳಾದ ಸ್ಪೇಯ್ನ್,ಇಂಗ್ಲೆಡ್ ಗಳಲ್ಲಿ ಬೀಫ್ ನೊಂದಿಗೆ ಕುದುರೆ ಮಾಂಸ ಕಲಬೆರಕೆ ಮಾಡಿ ಮಾರಾಟ ಮಾಡುವ ಪ್ರಕರಣಗಳು 2012 ರಲ್ಲಿ ಮೊದಲು ಬೆಳಕಿಗೆ ಬಂದಿವೆ. ಈ ಬಗ್ಗೆ ಪೋಲಿಸ್ ಇಲಾಖೆ, ಪಶುಸಂಗೋಪನ ಇಲಾಖೆ ಹಾಗೂ ಅರಣ್ಯ ಇಲಾಖೆ ಉನ್ನತ ಮಟ್ಟದ ತನಿಖೆ ನಡೆಸಬೇಕಾದ ಅಗತ್ಯವಿದೆ.