ಕಡ್ಲೆಕಾಯಿ ಫಿಲ್ಮ್ಸ್ ನ  ಹೊಸ ತಿರುಳಿನ ಚಿತ್ರಕ್ಕೆ ಮೂಹೂರ್ತ ಫಿಕ್ಸ್

ಮಂಗಳೂರು, ಅಕ್ಟೋಬರ್ 19 : ಹೊಸತನದ ಆವಿಷ್ಕಾರದಲ್ಲಿ ಸಿನೆಮಾವೊಂದನ್ನು ನಿರ್ಮಾಣ ಮಾಡಲು ಕರಾವಳಿಯ ಯುವಕರ ತಂಡ ಅಣಿಯಾಗಿದೆ. ಬೆಳಕಿನ ಹಬ್ಬ ದೀಪಾವಳಿಯ ಪರ್ವಕಾಲದ ಈ ದಿನ ಕಟೀಲು ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನಲ್ಲಿ  ಹೊಸ ಚಿತ್ರಕ್ಕೆ ಮೂಹೂರ್ತ ನಡೆಸಲಾಯಿತು.

ಕಟೀಲ್ ದೇವಸ್ಥಾನದ ಹರಿ ಅಸ್ರಣ್ಣ ಅವರು ವೈದಿಕ ವಿಧಿವಿಧಾನಗಳನ್ನು ನೆರವೇರಿಸಿ ಚಿತ್ರ ತಂಡಕ್ಕೆ ಶುಭ ಹಾರೈಸಿದರು. ಹನುಮಂತ ಕಾಮತ್ ಅವರು ಉಪಸ್ಥಿತರಿದ್ದರು. ಪ್ರಸ್ತುತ ಸಮಾಜದಲ್ಲಿರುವ ಮೂಢನಂಬಿಕೆಗಳಿಂದ ಜನ ಹೇಗೆ ತಮ್ಮತನವನ್ನು ಕಳೆದುಕೊಂಡು ಬದಲಾಗುತ್ತಾರೆ ಎನ್ನುವುದು ಚಿತ್ರದ ತಿರುಳು.

ಯುವ ನಿರ್ದೇಶಕ ಸಿದ್ದೇಶ್ ಗೋವಿಂದ ಅವರ ನಿರ್ದೇಶನದಲ್ಲಿ ಮೂಡಿಬರಲಿರುವ ಹೊಸ ಚಿತ್ರದ ನಿರ್ಮಾಣದ ಹೊಣೆಯನ್ನು ಮಂಗಳೂರಿನ ಯುವ ಉದ್ಯಮಿ ನರೇಶ್ ಶೆಣೈ ಹಾಗೂ ಖ್ಯಾತ ಬಹು ಭಾಷಾ ಕಲಾವಿದ ಗೋಪಿನಾಥ್ ಭಟ್ ಅವರು ಹೊತ್ತಿದ್ದಾರೆ. 
ಚಿತ್ರ ಕನ್ನಡ ಭಾಷೆಯಲ್ಲಿ ಬರಲಿದ್ದು ಅದರೊಂದಿಗೆ ನಮ್ಮ ತುಳು ಮತ್ತು ಕೊಂಕಣಿ ಭಾಷೆಗಳನ್ನು ಸಂದರ್ಭಾನುಸಾರವಾಗಿ ಬಳಸಿ ಇಲ್ಲಿನ ಮಣ್ಣಿನ ಆಚಾರ, ವಿಚಾರಗಳು, ಸಂಸ್ಕೃತಿ ಮತ್ತು ಕರಾವಳಿಯ ವಿವಿಧ ಸಮಸ್ಯೆಗಳನ್ನು ಹೇಗೆ ಸುಲಲಿತವಾಗಿ ಪರಿಹರಿಸಬಹುದು ಎನ್ನುವುದನ್ನು ಹಾಸ್ಯದ ಮಿಶ್ರಣದೊಂದಿಗೆ ನವಿರಾದ ನಿರೂಪಣೆಯಲ್ಲಿ ಚಿತ್ರೀಕರಿಸಲು ನಿರ್ಧರಿಸಿದ್ದೇವೆ ಎನ್ನುತ್ತಾರೆ ಯುವ ನಿರ್ಮಾಕರು.
ಸ್ಥಳೀಯ ಕಲಾವಿದರು ಹಾಗೂ ನಾಡಿನ ಖ್ಯಾತ ನಟರೊಂದಿಗೆ ಚಿತ್ರೀಕರಣ ನಡೆಸಲು ಯೋಜಿಸಿದ್ದು ಚಿತ್ರ ಸಂಪೂರ್ಣವಾಗಿ ಮಂಗಳೂರಿನ ಆಸುಪಾಸಿನಲ್ಲಿ ನಡೆಯಲಿದೆ. ಕಡ್ಲೆಕಾಯಿ ಫಿಲ್ಮ್ಸ್ ಆಡಂಬರಕ್ಕಿಂತ ವಸ್ತುನಿಷ್ಟ ಕಥೆಯನ್ನು ಚಿತ್ರವಾಗಿಸಲು ತೀರ್ಮಾನಿಸಿದ್ದು ಹೊಸ ನಿರ್ದೇಶಕರ ಹೊಸ ಪ್ರಯತ್ನಗಳಿಗೆ ಬೆನ್ನೆಲುಬಾಗಿ ನಿಂತಿದೆ.