ಸಿನೆಮಾ ನಾಯಕ ಹೆಚ್ಚು ವೆಚ್ಚದ ಬೈಕ್ ನಲ್ಲಿ ವೇಗವಾಗಿ ಬಂದು ಬ್ರೇಕ್ ಹಾಕುತ್ತಾನೆ. ಅವನು ಬರುವ ವೇಗಕ್ಕೆ ಹತ್ತಿರದ ಹೂ ಮಾರುವವನ ಗಾಡಿಯಿಂದ ಹೂವು ಹಾರಿ ನಾಯಕನ ಮೇಲೆ ಪುಷ್ಪವೃಷ್ಟಿ. ನಂತರ ಅಲ್ಲೇ ಪಕ್ಕದ್ದಲ್ಲಿದ್ದ ಕಿಡಿಗೇಡಿಗಳು ನಾಯಕನನ್ನು ಚುಡಾಯಿಸುತ್ತಾರೆ. ಕೋಪಗೊಂಡ ನಾಯಕ ತನ್ನ ಐದು ಕೈ ಬೆರಳುಗಳನ್ನು ಮಡಚಿ (ಕೈ ಮಡಚುವಾಗ ಮರದ ಗೆಲ್ಲು ಮುರಿದಂತ ಶಬ್ಧ) ಕಿಡಿಗೇಡಿಗಳನ್ನು ಮನಸೋ ಇಚ್ಛೆ ಥಳಿಸುತ್ತಾನೆ. ಅವನ ಹೊಡೆತಕ್ಕೆ ಒಬ್ಬ ನೇರವಾಗಿ ಗಾಳಿಯಲ್ಲಿ ತೇಲಿ ಹೋಗಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಬೆಂಕಿ ಏಳುತ್ತದೆ. ಇದು ಹೆಚ್ಚಿನ ಸಿನೆಮಾಗಳ ಕಥೆ-ವ್ಯಥೆ.

ಆದರೆ “ಒಂದು ಮೊಟ್ಟೆಯ ಕಥೆ” ಇದೆಲ್ಲಕ್ಕಿಂತ ತುಂಬಾ ವಿಭಿನ್ನ ಹಾಗೂ ವಿಶಿಷ್ಟವಾಗಿದೆ. ನಾಯಕ ಹಾಗೂ ನಿರ್ದೇಶಕರಾಗಿ ಮೊದಲ ಪ್ರಯತ್ನದಲ್ಲಿಯೇ ಗೆಲುವಿನ ನಗೆ ಬೀರಿದ್ದಾರೆ ರಾಜ್ ಬಿ ಶೆಟ್ಟಿ. ಬಹಳ ಸರಳ ನಡೆ ನುಡಿಯ ನಾಯಕ ಹಾಗೂ ಸಿನೆಮಾ ಪೂರ್ತಿ ತೆಳು ಹಾಸ್ಯ ಮಿಶ್ರಿತ ಪಾತ್ರ ವೀಕ್ಷಕರನ್ನು ಮನರಂಜಿಸುತ್ತದೆ. ತಮ್ಮೊಳಗಿನ ಋಣಾತ್ಮಕ ಕೀಳರಿಮೆಯನ್ನು ಹೇಗೆ ಧನಾತ್ಮಕವಾಗಿ ಪರಿವರ್ತಿಸಬಹುದು ಎಂಬುದಕ್ಕೆ ಹಾಸ್ಯ ನಟ ನರಸಿಂಹ ರಾಜು ಹಾಗೂ ದ್ವಾರಕೀಶ್ ಅವರಂತೆ ರಾಜ್ ಬಿ ಶೆಟ್ಟಿ ಕೂಡ ಇಂದು ಮಾದರಿಯಾಗಿದ್ದಾರೆ.ಚಲನಚಿತ್ರ ಮುಗಿದ ನಂತರವೂ ಪಿಯನ್ ಆಗಿ “ಶ್ರೀನಿವಾಸ್” ಅವರ ಪಾತ್ರ ಮನಸ್ಸಿನಲ್ಲಿ ಭದ್ರವಾಗಿ ನೆಲೆಯೂರುತ್ತದೆ.ಮತ್ತೆ ನಾಯಕಿಯರು ತಮ್ಮ ತಮ್ಮ ಪಾತ್ರಕ್ಕೆ ಗೌರವ ಸಲ್ಲಿಸಿದ್ದಾರೆ. ಅಂತೂ ಬಹಳ ಸಮಯದ ನಂತರ ಕನ್ನಡದಲ್ಲಿ ಒಂದು ಒಳ್ಳೆಯ ಸಿನೆಮಾ ಬಂದಿದೆ. ಕುಟುಂಬದ ಜೊತೆಗೆ ಹೋಗಿ ನೋಡಲೇ ಬೇಕಾದ ಸಿನೆಮಾ. ಚಿತ್ರ ಮಂದಿರಕ್ಕೆ ಹೋಗಿ ನೋಡಿಲ್ಲಾ ಅಂದರೆ ನೀವೊಂದು ಒಳ್ಳೆಯ ಸಿನೆಮಾವನ್ನು ಮಿಸ್ ಮಾಡಿಕೊಳ್ಳುತ್ತೀರಿ.

ಹೀಗೆ ಒಂದು ಮೊಟ್ಟೆಯೊಡೆದು ಅದರಿಂದ ನೂರು ಮರಿಗಳು(ಕಥೆ) ಹೊರಬಂದು ಇನ್ನೂರು ಇಂತಹ ಸಿನೆಮಾಗಳನ್ನು ಕನ್ನಡ ಚಿತ್ರರಂಗಕ್ಕೆ ನೀಡುತ್ತೀರಿ ಎಂಬುದು ನಮ್ಮ ಆಶಯ.

ಈ ಚಲನಚಿತ್ರದ ಕಥೆ ಹಾಗೂ ನಿರ್ದೇಶನ ಮಾಡಿದ Raj B Shetty ಹಾಗೂ ನಿರ್ಮಾಪಕರಾದSuhan PrasadPawan Kumar ಮತ್ತು ತಂಡಕ್ಕೆಅಭಿನಂದನೆಗಳು.