Connect with us

UDUPI

ಎಸ್‍ಸಿಪಿ/ಟಿಎಸ್ ಪಿ ಕಾಮಗಾರಿ ಅವ್ಯವಹಾರ :ತನಿಖೆಗೆ ಡಿಸಿ ಆದೇಶ

ಎಸ್‍ಸಿಪಿ/ಟಿಎಸ್ ಪಿ ಕಾಮಗಾರಿ ಅವ್ಯವಹಾರ :ತನಿಖೆಗೆ ಡಿಸಿ ಆದೇಶ

ಉಡುಪಿ, ಸೆಪ್ಟೆಂಬರ್ 28 : ಜಿಲ್ಲೆಯಲ್ಲಿ ಎಸ್‍ಸಿಪಿ,ಟಿಎಸ್‍ಪಿ ಯೋಜನೆಯಡಿಯಲ್ಲಿ ನಡೆದಿರುವ ಕಾಮಗಾರಿಗಳಲ್ಲಿ ನಡೆದಿರುವ ಅವ್ಯವಹಾರಗಳ ಕುರಿತು ನಾಗರೀಕ ಹಕ್ಕು ಜಾರಿ ನಿರ್ದೇಶನಾಲಯದಿಂದ ತನಿಖೆ ಮಾಡಿಸಲಾಗುವುದು ಎಂದು ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ತಿಳಿಸಿದ್ದಾರೆ.
ಅವರು ರಜತಾದ್ರಿಯ ಅಟಲ್ ಬಿಹಾರಿ ವಾಜಪೇಯಿ ಸಭಾಂಗಣದಲ್ಲಿ ನಡೆದ , ಜಿಲ್ಲಾ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಜನಾಂಗದವರ ಹಿತರಕ್ಷಣಾ ಹಾಗೂ ಕುಂದು ಕೊರತೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಜಿಲ್ಲೆಯಲ್ಲಿ ಎಸ್.ಸಿ.ಪಿ,ಟಿಎಸ್‍ಪಿ ಯೋಜನೆಯಡಿಯಲ್ಲಿ ಕೈಗೊಂಡಿರುವ ಕಾಮಗಾರಿಗಳಲ್ಲಿ ಅವ್ಯವಹಾರ ನಡೆದಿದೆ, ಉಡುಪಿ ನಗರಸಭೆಯಲ್ಲೂ ಎಸ್ ಸಿಪಿ ಟಿಎಸ್ ಪಿ ಅನುದಾನ ಸದ್ಬಳಕೆಯಾಗಿಲ್ಲ ಎಂದು ಮುಖಂಡರಾದ ಉದಯ ತಲ್ಲೂರು, ಸುಂದರ ಮಾಸ್ತರ್ ಮುಂತಾದವರು ದೂರಿದರು, ಈ ಕುರಿತಂತೆ ಪ್ರತ್ಯೇಕ ಸಭೆ ನಡೆಸಿ, ಸಂಬಂದಪಟ್ಟವರ ವಿರುದ್ದ ದೂರು ದಾಖಲಿಸಿ , ನಾಗರೀಕ ಹಕ್ಕು ಜಾರಿ ನಿರ್ದೇಶನಾಲಯದಿಂದ ತನಿಖೆ ನಡೆಸಲು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಜಿಲ್ಲೆಯಲ್ಲಿ ಡಿಸಿ ಮನ್ನಾ ಭೂಮಿಯನ್ನು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಮಾತ್ರ ನೀಡುವಂತೆ ಹಾಗೂ ಡಿಸಿ ಮನ್ನಾ ಭೂಮಿ ಗುರುತಿಸಿ, ಅತಿಕ್ರಮಣವಾಗಿದ್ದಲ್ಲಿ ತೆರವುಗೊಳಿಸಿ, ಫಲಾನುಭವಿಗಳನ್ನು ಆಯ್ಕೆ ಮಾಡಿ, ಹಂಚಿಕೆ ಮಾಡುವ ಕುರಿತಂತೆ ಕುಂದಾಪುರದಲ್ಲಿ ರಚಿಸಲಾಗಿರುವ ಸಮಿತಿಯ ಆಯ್ಕೆ ಸರಿಯಾಗಿಲ್ಲ, ಸಮಿತಿಯಲ್ಲಿ ಡಿಸಿ ಮನ್ನಾ ಭೂಮಿ ಬಗ್ಗೆ ಸಾಮಾನ್ಯ ಜ್ಞಾನ ಇಲ್ಲದವರೂ ಇದ್ದಾರೆ ಎಂದು ಮುಖಂಡರು ದೂರಿದರು, ಈ ಕುರಿತಂತೆ ಸಚಿವರ ಸಮ್ಮುಖದಲ್ಲಿ ಸಭೆ ನಡೆಸಿ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಜಿಲ್ಲೆಯ ಹಲವು ಗ್ರಾಮ ಪಂಚಾಯತ್‍ಗಳಲ್ಲಿ ಕ್ರಿಯಾ ಯೋಜನೆಯಲ್ಲಿ ಪ.ಜಾತಿ ಮತ್ತು ಪಂಗಡದ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಹಣ ಮೀಸಲಿಟ್ಟಿರುವ ಹಣದಲ್ಲಿ ಉನ್ನತ ಶಿಕ್ಷಣ ಪಡೆಯುವ ವಿದ್ಯಾರ್ಥಿಗಳಿಗೆ ಲ್ಯಾಪ್ ಟಾಪ್ ವಿತರಿಸಲು ಅವಕಾಶವಿದ್ದರೂ ಪಂಚಾಯತ್ ಗಳು ನೀಡುತ್ತಿಲ್ಲ, ಸರ್ಕಾರದ ಸ್ಪಷ್ಟ ಆದೇಶವಿದ್ದರೂ ಪಾಲನೆ ನಡೆಯುತ್ತಿಲ್ಲ ಹಾಗೂ ವಿವಾಹ ಮತ್ತು ಮರಣ ಸಂದರ್ಭದಲ್ಲಿ ತುರ್ತು ಸಹಾಯಧನ ನೀಡುವ ಸೌಲಭ್ಯ ಇದ್ದರೂ ನೀಡುತ್ತಿಲ್ಲ ಎಂದು ಮುಖಂಡ ರಮೇಶ್ ಕೋಟ್ಯಾನ್ ದೂರಿದರು, ಈ ಕುರಿತಂತೆ ಜಿಲ್ಲೆಯ ಎಲ್ಲಾ ಪಂಚಾಯತ್‍ಗಳ ಸಭೆ ನಡೆಸಿ, ಸೂಚನೆ ನೀಡಿ ಎಂದು ಜಿ.ಪಂ. ಸಿಇಓ ಅವರಿಗೆ ಡಿಸಿ ಸೂಚಿಸಿದರು.
ಹಂಗಾರಕಟ್ಟೆಯಲ್ಲಿನ ಮೀನು ಕಟ್ಟಿಂಗ್ ಫ್ಯಾಕ್ಟರಿಯ ಲೈಸೆನ್ಸ್ ರದ್ದಾಗಿದ್ದರೂ ಕಾರ್ಯ ನಿರ್ವಹಿಸುತ್ತಿರುವ ಬಗ್ಗೆ ಮಂಜುನಾಥ ಬಾಳ್ಕುದ್ರು ಆಕ್ಷೇಪಿಸಿದರು, ಈ ಕುರಿತು ಪರಿಶೀಲನೆ ನಡೆಸುವಂತೆ ಕುಂದಾಪುರ ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಅವರಿಗೆ ಸೂಚಿಸಿದ ಡಿಸಿ, ದೇವಲ್ಕುಂದ ದಲ್ಲಿನ ಮೀನು ಕಟ್ಟಿಂಗ್ ಪ್ಯಾಕ್ಟರಿಯಿಂದ ಹರಿಯುವ ನೀರು , ದಲಿತರ ಬಾವಿಗೆ ಹೋಗುತ್ತಿದು, ಇದರಿಂದ ಕುಡಿಯುವ ನೀರಿಗೆ ತೊಂದರೆಯಾಗಿದೆ, ಕೂಡಲೇ ಕ್ರಮ ಕೈಗೊಳ್ಳುವಂತೆ ಮುಖಂಡರುಗಳು ಕೋರಿದರು, ಕೂಡಲೇ ಕುಡಿಯುವ ನೀರಿಗೆ ಪರ್ಯಾಯ ವ್ಯವಸ್ಥೆ ಮಾಡಿ ವರದಿ ನೀಡಿ ಎಂದು ಕುಂದಾಪುರ ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿಗೆ ಡಿಸಿ ಸೂಚಿಸಿದರು.
ತಲ್ಲೂರಿನಲ್ಲಿ ನಿರ್ಮಾಣವಾಗುತ್ತಿರುವ ಅಂಬೇಡ್ಕರ್ ಭವನ ಕಾಮಗಾರಿಯನ್ನು ಒಳಗುತ್ತಿಗೆ ನೀಡಿದ್ದಾರೆ ಹಾಗೂ ಯಡ್ತರೆಯಲ್ಲಿ ನಿರ್ಮಾಣವಾಗಿರುವ ಭವನ ಕಳಪೆಯಿಂದ ಕೂಡಿದೆ ಈ ಕುರಿತು ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳುವಂತೆ ಹಾಗೂ ಅಂಬೇಡ್ಕರ್ ಭವನ ನಿರ್ಮಾಣ ಸಂದರ್ಭದಲ್ಲಿ ಆ ಪ್ರದೇಶದಲ್ಲಿ ವಾಸವಾಗಿರುವ ಜನಸಂಖ್ಯೆಯ ಆಧಾರದಲ್ಲಿ ಜಾಗವನ್ನು ಗುರುತಿಸುವಂತೆ ಉದಯ ತಲ್ಲೂರು ತಿಳಿಸಿದರು.
ಜಿಲ್ಲೆಯಲ್ಲಿ ನಿರ್ಮಾಣಗೊಂಡಿರುವ ಅಂಬೇಡ್ಕರ್ ಭವನಗಳ ನಿರ್ವಹಣೆಯ ಜವಾಬ್ದಾರಿಯನ್ನು ಸ್ಥಳೀಯ ಸಂಸ್ಥೆಗಳಿಗೆ ವಹಿಸುವಂತೆ ಜಿಲ್ಲಾಧಿಕಾರಿ ಸೂಚಿಸಿದರು.
ಕಂದಾವರದಲ್ಲಿ ಕಟ್ಟಡ ನಿರ್ಮಾಣಕ್ಕೆ ತಡೆ ಇದ್ದರೂ ಅಲ್ಲಿ ಬಾರ್ ಕಾರ್ಯ ನಿರ್ವಹಿಸುತ್ತಿದೆ ಇದರಿಂದ sಸ್ಥಳೀಯ ಸಮೀಪದಲ್ಲಿರುವ ದಲಿತ ಕುಟುಂಬಗಳಿಗೆ ತೊಂದರೆಯಾಗಿದೆ, ತಡೆ ಇದ್ದರೂ ಬಾರ್ ನಡೆಯುತ್ತಿರುವ ಕುರಿತು ಕ್ರಮಕೈಗೊಳ್ಳುವಂತೆ ಕೃಷ್ಣ ಎಂಬುವವರು ದೂರಿದರು, ಈ ಕುರಿತಂತೆ ತಾ.ಪಂ ನಿಂದ, ಸ್ಥಳೀಯ ಗ್ರಾ.ಪಂ. ನಿಂದ ಹಾಗೂ ಅಬಕಾರಿ ಇಲಾಖೆಯಿಂದ ತನಿಖೆ ನಡೆಸಿ ಕ್ರಮ ಕೈಗೊಳ್ಳಲಾಗುವುದು ಎಂದು ಡಿಸಿ ತಿಳಿಸಿದರು.
ಕಾರ್ಕಳದ ನೂರಾಲ್ ಬೆಟ್ಟುನಲ್ಲಿ ಮಲೆ ಕುಡಿಯ ಜನಾಂಗದವರ ರಸ್ತೆ ಅತಿಕ್ರಮಣ ನಡೆಯುತ್ತಿದೆ, ಅರಣ್ಯ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಜನಾಂಗದ ದಿನೇಶ್ ಎಂಬುವವರನ್ನು 4 ತಿಂಗಳ ವೇತನ ನೀಡದೇ ವಿನ ಕಾರಣ ಕೆಲಸದಿಂದ ತೆಗೆಯಲಾಗಿದೆ, ಅರಣ್ಯ ಹಕ್ಕು ಕಾಯ್ದೆಯಡಿ ಸೌಲಭ್ಯಗಳು ದೊರೆಯುತ್ತಿಲ್ಲ ಎಂದು ಮುಖಂಡರಾದ ಶ್ರೀಧರ್ ತಿಳಿಸಿದರು.
ಬೋವಿ ಜನಾಂಗದ ಪ್ರಮಾಣ ಪತ್ರದ ದುರುಪಯೋಗ, ಪಂಚಾಯತ್‍ಗಳಲ್ಲಿ ಅಂಗಡಿಕೋಣೆಯ ಹಂಚಿಕೆಯಲ್ಲಿ ಮೀಸಲು ನೀಡದಿರುವುದು, ಕಾರ್ಕಳದ ಮಹಿಳಾ ಸಾಂತ್ವನ ಕೇಂದ್ರದಲ್ಲಿ ಸಮರ್ಪಕ ಸೇವೆ ನೀಡದಿರುವುದು, ಉಚ್ಚಿಲ ರುದ್ರಭೂಮಿ ಕಾಮಗಾರಿ ನಿಲುಗಡೆ ಬಗ್ಗೆ, ಮರಳುಗಾರಿಕೆಯಲ್ಲಿ ಪ.ಜಾತಿ ಪಂಗಡದವರಿಗೆ ಮೀಸಲಾತಿ ನೀಡುವ ಕುರಿತಂತೆ ಸಭೆಯಲ್ಲಿ ಚರ್ಚೆ ನಡೆಯಿತು.
ಜಿಲ್ಲೆಯಲ್ಲಿ ಎಸ್‍ಸಿಪಿ, ಟಿಎಸ್‍ಪಿ ಕಾಮಗಾರಿಯಲ್ಲಿ ನಡೆದಿರುವ ಅವ್ಯವಹಾರಗಳ ಬಗ್ಗೆ ಹಾಗೂ ದಲಿತರ ಜನಾಂಗದ ಸಮಸ್ಯೆಗಳ ಬಗ್ಗೆ ಚರ್ಚಿಸಲು ಅಕ್ಟೋಬರ್ 4 ರಂದು ನಾಗರೀಕ ಹಕ್ಕು ಜಾರಿ ನಿರ್ದೇಶನಾಲಯದಿಂದ ಪ್ರತ್ಯೇಕ ಸಭೆ ನಡೆಯಲಿದ್ದು, ಲಿಖಿತ ರೂಪದಲ್ಲಿ ದೂರುಗಳನ್ನು ಸಲ್ಲಿಸುವಂತೆ ನಾಗರೀಕ ಹಕ್ಕು ಜಾರಿ ನಿರ್ದೇಶನಾಲಯದ ಎಸ್.ಪಿ. ಡಾ.ಸಿ.ಬಿ.ವೇದಮೂರ್ತಿ ತಿಳಿಸಿದರು.
ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸಂಜೀವ ಎಂ ಪಾಟೀಲ್, ಸಹಾಯಕ ಆಯುಕ್ತೆ ಶಿಲ್ಪಾ ನಾಗ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಶಿವಾನಂದ ಕಾಪಶಿ, ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ರಮೇಶ್ ಹಾಗೂ ಎಲ್ಲಾ ಜಿಲ್ಲಾಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

Share Information
Advertisement
Click to comment

You must be logged in to post a comment Login

Leave a Reply