ಉಡುಪಿ, ಆಗಸ್ಟ್.12: ದ.ಕ. ಮತ್ತು ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಮಹಾಮಂಡಳಿಗೆ ಸೇರಿದ ಮಲ್ಪೆ ಡೀಸೆಲ್ ಬಂಕ್ ಸೇರಿದಂತೆ ನಾಲ್ಕು ಡೀಸೆಲ್ ಬಂಕ್‌ಗಳಲ್ಲಿ ನಡೆದಿರುವ ಅವ್ಯವಹಾರದ ತನಿಖೆಯನ್ನು ಸಿಐಡಿಗೆ ವಹಿಸಿ ರಾಜ್ಯ ಸರ್ಕಾರ ಆದೇಶಿಸಿದೆ.
ಸಹಕಾರಿ ಮೀನು ಮಾರಾಟ ಮಹಾಮಂಡಳಿ ಅಧೀನದ ಮಲ್ಪೆ, ಗಂಗೊಳ್ಳಿ, ಪಡುಬಿದ್ರೆ, ಮತ್ತು ಮಂಗಳೂರು ದಕ್ಷಿಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ಡೀಸೆಲ್ ಬಂಕ್‌ಗಳಲ್ಲಿ ಡೀಸೆಲ್ ವಿತರಣೆಯಲ್ಲಿ ಅವ್ಯವಹಾರ ನಡೆದಿರುವುದು ಪರಿಶೀಲನೆಯ ವೇಳೆ ಬೆಳಕಿಗೆ ಬಂದಿತ್ತು. ಈ ಬಗ್ಗೆ ಉಡುಪಿ ಜಿಲ್ಲೆಯ ಮಲ್ಪೆ ಪೊಲೀಸ್ ಠಾಣೆ, ಗಂಗೊಳ್ಳಿ, ಪಡುಬಿದ್ರೆ ಹಾಗೂ ದ.ಕ. ಜಿಲ್ಲೆಯ ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಹಿನ್ನೆಲೆಯಲ್ಲಿ ಇದೀಗ ಈ ಎಲ್ಲ ಪ್ರಕರಣಗಳ ತನಿಖೆಯನ್ನು ಸಿಐಡಿಗೆ ವಹಿಸಿ ಸರಕಾರ ಆದೇಶಿಸಿದೆ.
ತನಿಖೆಯನ್ನು ಶೀಘ್ರ ಪೂರ್ಣಗೊಳಿಸಿ ವರದಿಯನ್ನು ನ್ಯಾಯಾಲಯಕ್ಕೆ ತ್ವರಿತವಾಗಿ ಸಲ್ಲಿಸಬೇಕು ಹಾಗೂ ಈ ಬಗ್ಗೆ ಸರಕಾರಕ್ಕೆ ವರದಿ ನೀಡುವಂತೆ ಸಿಐಡಿಗೆ ಸೂಚಿಸಲಾಗಿದೆ.ಇದೇ ವೇಳೆ ತನಿಖೆಗೆ ಸಂಬಂಧಿಸಿ ಸಿಐಡಿ ತಂಡಕ್ಕೆ ಸಂಪೂರ್ಣ ಸಹಕಾರ ನೀಡುವಂತೆ ಪಶು ಸಂಗೋಪನೆ ಮತ್ತು ಮೀನುಗಾರಿಕೆ ಇಲಾಖೆಗೂ ಸರಕಾರ ಆದೇಶಿಸಿದೆ.

0 Shares

Facebook Comments

comments