ಮಂಗಳೂರು, ಜುಲೈ.19: ಮಂಗಳೂರು ನಗರದ ಖಾಸಗಿ ಆಸ್ಪತ್ರೆಯೊಂದರಲ್ಲಿ ದಾಖಲಾಗಿದ್ದ ತನ್ನ ತಾಯಿಯ ಆರೋಗ್ಯ ನೋಡಿಕೊಳ್ಳಲು ಬಂದಿದ್ದ ಬಾಲಕನಿಗೆ ಅದೇ ಆಸ್ಪತ್ರೆಯ ಸೆಕ್ಯೂರಿಟಿ ಸಿಬಂದಿ ಲೈಂಗಿಕ ಕಿರುಕುಳ ನೀಡಿದ ಘಟನೆ ನಡೆದಿದೆ.
ಸುರತ್ಕಲ್‌ ಕೃಷ್ಣಾಪುರ ಮೂಲದ ಮಹಿಳೆಯೋರ್ವರು ಅಪಘಾತಕ್ಕೊಳಗಾಗಿ ಕಳೆದ ಒಂದು ವಾರದಿಂದ ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರು. ಅವರ ಆರೋಗ್ಯ ನೋಡಿಕೊಳ್ಳಲು ಅವರ ಅಪ್ರಾಪ್ತ ವಯಸ್ಕ ಪುತ್ರ ಆಸ್ಪತ್ರೆಗೆ ಬಂದಿದ್ದ. ಆದರೆ ರಾತ್ರಿ ವೇಳೆ ಆತನಿಗೆ ಮಲಗಲು ಆಸ್ಪತ್ರೆಯಲ್ಲಿ ವ್ಯವಸ್ಥೆ ಇಲ್ಲದಿದ್ದ ಕಾರಣ ಆತನ ಸ್ಥಿತಿ ಗಮನಿಸಿದ ಆರೋಪಿ ಬಂಟ್ವಾಳ ಗೋಳ್ತಮಜಲಿನ ಸೀತಾರಾಮ ಶೆಟ್ಟಿ ಆತನಿಗೆ ಆಸ್ಪತ್ರೆಯ ಬೆಡ್‌ಶೀಟ್‌ಗಳನ್ನಿಡುವ ಕೋಣೆಯೊಂದರಲ್ಲಿ ಮಲಗಲು ವ್ಯವಸ್ಥೆ ಮಾಡುದಾಗಿ ಕರೆದುಕೊಂಡು ಹೋಗಿ ಬಾಲಕನಿಗೆ ಲೈಂಗಿಕ ಕಿರುಕುಳ ನೀಡಿದ್ದ ಎಂದು ಆರೋಪಿಸಲಾಗಿದೆ. ಪ್ರಕರಣ ಬೆಳಕಿಗೆ ಬಂದ ಬಳಿಕ ಬಾಲಕ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿ ಕದ್ರಿ ಪೊಲೀಸರಿಗೆ ದೂರು ನೀಡಿದ್ದ. ಪೊಲೀಸರು ಪೋಕ್ಸೋ ಕಾಯ್ದೆಯಡಿ ಸೆಕ್ಯೂರಿಟಿ ಗಾರ್ಡ್‌ ಸೀತಾರಾಮ ಶೆಟ್ಟಿ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿ, ನ್ಯಾಯಾಲಕ್ಕೆ ಹಾಜರು ಪಡಿಸಿದ್ದು ನ್ಯಾಯಾಲಯ ಆರೋಪಿಗೆ ನ್ಯಾಯಾಂಗ ಬಂಧನ ನೀಡಿದೆ.

Facebook Comments

comments