ಆಳ್ವಾಸ್ ವಿದ್ಯಾರ್ಥಿನಿ ಕಾವ್ಯ ನಿಗೂಢ ಸಾವು ಪ್ರಕರಣದ ತನಿಖೆ ಚುರುಕು – ಮೈಲೇಜ್ ಪಡೆಯಲು ರಾಜಕೀಯ ಮುಖಂಡರ ದಂಡು

ಮಂಗಳೂರು ಜುಲೈ 30 :- ಆಳ್ವಾಸ್ ವಿದ್ಯಾರ್ಥಿನಿ ಕಾವ್ಯ ನಿಗೂಢ ಸಾವು ಪ್ರಕರಣದ ತನಿಖೆ ಚುರುಕುಗೊಂಡಿದೆ .ಮಾಧ್ಯಮಗಳಲ್ಲಿ ಪ್ರಕರಣದ ಕುರಿತು ಗಂಭೀರ ಚರ್ಚೆ ಆರಂಭಗೊಳ್ಳುತ್ತಿದ್ದಂತೆ ಪೊಲೀಸ್ ಇಲಾಖೆ ಎಚ್ಚೆತ್ತುಕೊಂಡಿದೆ. ಪ್ರಕರಣದ ಕುರಿತು ಎಸಿಪಿ ರಾಜೇಂದ್ರ ಅವರ ನೇತೃತ್ವದ ತಂಡ ಮೂಡುಬಿದಿರೆಯ ಆಳ್ವಾಸ್ ಸಂಸ್ಥೆಗೆ ಭೇಟಿ ನೀಡಿ ತನಿಖೆ ಆರಂಭಿಸಿದೆ .ಕಾವ್ಯ ಆತ್ಮಹತ್ಯೆ ಮಾಡಿಕೊಂಡ ಆಳ್ವಾಸ್ ಸಂಸ್ಥೆಯ ಹಾಸ್ಟೆಲ್ ಗೆ ಭೇಟಿ ನೀಡಿದ ಪೊಲೀಸರ ತಂಡ ವಾರ್ಡನ್ ಹಾಗೂ ಅಲ್ಲಿಯ ಸಿಬ್ಬಂದಿ ಸೇರಿದಂತೆ ಆರು ವಿದ್ಯಾರ್ಥಿನಿಯರನ್ನು ವಿಚಾರಣೆ ನಡೆಸಿದೆ .ಕಟೀಲಿನ ದೇವರ ಗುಡ್ಡದಲ್ಲಿರುವ ಕಾವ್ಯ ಮನೆಗೂ ಭೇಟಿ ನೀಡಿದ ಪೊಲೀಸರ ತಂಡ ಕಾವ್ಯ ಅವರ ಪೋಷಕರು ಸೇರಿದಂತೆ ಇತರರನ್ನು ವಿಚಾರಣೆ ನಡೆಸಿದ್ದು ಮಾಹಿತಿ ಕಲೆ ಹಾಕಿದೆ .

ಮೈಲೇಜ್ ಪಡೆಯಲು ರಾಜಕೀಯ ಮುಖಂಡರ ದಂಡು
ಈ ನಡುವೆ ಕಾವ್ಯಾ ಪ್ರಕರಣ ರಾಜಕೀಯ ತಿರುವು ಪಡೆದುಕೊಳ್ಳುತ್ತಿದೆ. ಪ್ರಕರಣದ ಕುರಿತು ರಾಜಕೀಯ ಮುಖಂಡರು ಮೈಲೇಜ್ ಪಡೆಯಲು ಮುಂದಾಗುತ್ತಿದ್ದಾರೆ . ಇಂದು ಮೃತ ಕಾವ್ಯಾಳ ಮನೆಗೆ ಜನಪ್ರತಿನಿಧಿಗಳು ಬೇಟಿ ನೀಡಿದರು, ಅಭಯಚಂದ್ರ ಜೈನ್, ಐವನ್ ಡಿಸೋಜಾ, ಹರಿಕೃಷ್ಣ ಬಂಟ್ವಾಳ್, ಮಿಥುನ್ ರೈ ಸೇರಿದಂತೆ ಇತರ ರಾಜಕೀಯ ಮುಖಂಡರು ಭೇಟಿ ನೀಡಿ ಸಾಂತ್ವಾನ ನೀಡಿ ಉನ್ನತ ತನಿಖೆಗೆ ಅಗ್ರಹದ ಭರವಸೆ ಯನ್ನು ನೀಡಿದರು.