UDUPI
ಮುಖ್ಯಮಂತ್ರಿ ಅನಿಲಭಾಗ್ಯ ಯೋಜನೆಗೆ ಜಿಲ್ಲೆಯಲ್ಲಿ 11059 ಫಲಾನುಭವಿಗಳು – ಜಿಲ್ಲಾಧಿಕಾರಿ
ಮುಖ್ಯಮಂತ್ರಿ ಅನಿಲಭಾಗ್ಯ ಯೋಜನೆಗೆ ಜಿಲ್ಲೆಯಲ್ಲಿ 11059 ಫಲಾನುಭವಿಗಳು – ಜಿಲ್ಲಾಧಿಕಾರಿ
ಉಡುಪಿ ನವೆಂಬರ್ 22 : ಸರ್ಕಾರವು ಅಡುಗೆ ಅನಿಲ ಹೊಂದಿಲ್ಲದ ಬಿಪಿಎಲ್ ಕಾರ್ಡ್‍ದಾರರು, ಅರಣ್ಯ ನಿವಾಸಿಗಳು, ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರು ಹಾಗೂ ಪ.ಜಾತಿ ಮತ್ತು ಪಂಗಡದ ಫಲಾನುಭವಿಗಳಿಗೆ ಉಚಿತವಾಗಿ ಅಡುಗೆ ಅನಿಲ ನೀಡುವ ಮುಖ್ಯಮಂತ್ರಿ ಅನಿಲಭಾಗ್ಯ ಯೋಜನಗೆ ಜಿಲ್ಲೆಯಲ್ಲಿ 11059 ಫಲಾನುಭವಿಗಳನ್ನು ಆಯ್ಕೆ ಮಾಡುವ ಕಾರ್ಯ ಪ್ರಗತಿಯಲ್ಲಿದೆ ಎಂದು ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ತಿಳಿಸಿದ್ದಾರೆ.
ಅವರು ಬುಧವಾರ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ, ಮುಖ್ಯಮಂತ್ರಿ ಅನಿಲಭಾಗ್ಯ ಯೋಜನೆ ಅನುಷ್ಠಾನ ಕುರಿತ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜಿಲ್ಲೆಯಲ್ಲಿನ ಅರ್ಹ ಅನಿಲ ರಹಿತರ ಪಟ್ಟಿಯನ್ನು ವಿಧಾನಸಭಾ ಕ್ಷೇತ್ರವಾರು ಹಂಚಿಕೆ ಮಾಡಿ, ಸಂಬಂಧಪಟ್ಟ ಶಾಸಕರ ಅನುಮೋದನೆಗೆ ಸಲ್ಲಿಸಿದ್ದು, ಶಾಸಕರ ಕಚೇರಿಯಲ್ಲಿ ಅನುಮೋದನೆಗೊಂಡಿರುವ ಫಲಾನುಭವಿಗಳ ಪಟ್ಟಿಯನ್ನು ಪಡೆದು 2 ದಿನದ ಒಳಗೆ ಆಹಾರ ಇಲಾಖೆಗೆ ಸಲ್ಲಿಸುವಂತೆ , ಆಹಾರ ನಿರೀಕ್ಷಕರಿಗೆ ಸೂಚಿಸಿದ ಜಿಲ್ಲಾಧಿಕಾರಿ,ಅರ್ಜಿ ಸ್ವೀಕಾರದ ನಂತರ ಫಲಾನುಭವಿ ಕುಟುಂಬದ ಸದಸ್ಯರು ಈಗಾಗಲೇ ಅನಿಲ ಸಂಪರ್ಕ ಪಡದಿರುವುದಿಲ್ಲ ಎಂಬುದರ ಕುರಿತು ಪರಿಶೀಲನೆ ನೆಡೆಸುವಂತೆ ಸೂಚಿಸಿದರು.
ಪ್ರತಿ ಫಲಾನುಭವಿಗೆ , ಸಿಲೆಂಡರ್ ಭದ್ರತಾ ಠೇವಣಿ, ರೆಗ್ಯುಲೇಟರ್ ಭದ್ರತಾ ಠೇವಣಿ,ಸುರಕ್ಷಾ ಹೋಸ್, 2 ಬರ್ನರ್ ಗ್ಯಾಸ್ ಸ್ಟೌವ್, 2 ಸಿಲೆಂಡರ್ , ತಪಾಸಣೆ, ಜೋಡಣಾ ವೆಚ್ಚ ಸೇರಿ 4040 ರೂ ಸರ್ಕಾರ ನಿಗಧಿಪಡಿಸಿದೆ, ಸಂಪರ್ಕ ನೀಡುವ ಸಮಯದಲ್ಲಿ ಬದಲಾಗುವ ಸಿಲೆಂಡರ್ ದರ ಮತ್ತು ಜಿಎಸ್‍ಟಿ ಸಂಬಂದಿಸಿದಂತೆ ಆಹಾರ ಇಲಾಖೆಯಿಂದ ಮಾಹಿತಿ ಪಡೆಯಲಾಗುವುದು ಎಂದು ಪ್ರಿಯಾಂಕ ಮೇರಿ ಫ್ರಾನಿಸ್ ತಿಳಿಸಿದರು.