DAKSHINA KANNADA
ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣದಲ್ಲಿ ಮೀನುಗಳ್ಳರ ಹಾವಳಿ, ಡಾಮೇಜ್ ಹೆಸರಿನಲ್ಲಿ ನಡೆಯುತ್ತಿದೆ ಎಗರಿಸುವ ಚಾಳಿ
ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣದಲ್ಲಿ ಮೀನುಗಳ್ಳರ ಹಾವಳಿ, ಡಾಮೇಜ್ ಹೆಸರಿನಲ್ಲಿ ನಡೆಯುತ್ತಿದೆ ಎಗರಿಸುವ ಚಾಳಿ
ಮಂಗಳೂರು, ಎಪ್ರಿಲ್ 14: ಮಂಗಳೂರು ಸೆಂಟ್ರಲ್ ರೈಲ್ವೆ ನಿಲ್ದಾಣಕ್ಕೆ ರೈಲಿನ ಮೂಲಕ ಬರುವ ಸರಕು-ಸಾಮಾಗ್ರಿಗಳನ್ನು ಕದಿಯುವ ಜಾಲವೊಂದು ಇತ್ತೀಚಿನ ದಿನಗಳಲ್ಲಿ ಸಕ್ರಿಯವಾಗಿದೆ.
ಮುಖ್ಯವಾಗಿ ಈ ಕಳ್ಳರು ಚೆನೈನಿಂದ ಬರುವ ಮೀನುಗಳನ್ನೇ ಹೆಚ್ಚಾಗಿ ಕದಿಯುತ್ತಿದ್ದಾರೆ.
ಕಳೆದ ಹಲವು ವರ್ಷಗಳಿಂದ ಈ ರೈಲ್ವೇ ನಿಲ್ದಾಣದಲ್ಲಿ ಈ ರೀತಿಯ ಕಳ್ಳತನ ನಡೆಯುತ್ತಿದ್ದು,ಇದನ್ನು ಪ್ರಶ್ನಿಸಿದವರಿಗೆ ಉಡಾಫೆಯ ಉತ್ತರವನ್ನು ರೈಲ್ವೆ ನಿಲ್ದಾಣದ ಸರಕು ನಿರ್ವಹಣಾ ಸಿಬ್ಬಂದಿಗಳು ನೀಡುತ್ತಿದ್ದಾರೆ.
ವಾರದ ಹಿಂದೆ ಮಂಗಳೂರಿನ ಅಕ್ವೇರಿಯಂ ಫಿಶ್ ಮಾರಾಟಗಾರರು ಚೆನೈನಿಂದ ತಮಗೆ ಬೇಕಾದ ಮೀನುಗಳನ್ನು ಖರೀದಿಸಿದ್ದರು.
ಫೋನ್ ಮೂಲಕ ಮೀನುಗಳಿಗೆ ಆರ್ಡರ್ ಕೊಟ್ಟು, ಅವುಗಳಿಗೆ ತಗಲುವ ವೆಚ್ಚವನ್ನು ಚೆನೈ ಡೀಲರ್ ಗೆ ನೆಟ್ ಬ್ಯಾಂಕಿಂಗ್ ಮೂಲಕ ಪಾವತಿಸಿದ್ದರು.
ಹೀಗೆ ಖರೀದಿಸಿದ ಮೀನನ್ನು ಚೆನೈನ ಮಾರಾಟಗಾರ ರೈಲಿನ ಮೂಲಕ ಮಂಗಳೂರಿಗೆ ಕಳುಹಿಸಿದ್ದರು. ಮಂಗಳೂರು ತನಕ ರೈಲಿನಲ್ಲಿ ಸೇಫಾಗಿ ತಲುಪಿದ ಮೀನಿಗಳು ರೈಲಿನಿಂದ ಅನ್ ಲೋಡಿಂಗ್ ಆಗುವ ಸಂದರ್ಭದಲ್ಲಿ ಮಾಯವಾಗಿತ್ತು.
ಅತ್ಯಂತ ಬೆಲೆಬಾಳುವ ಮೀನುಗಳಾದ ಅರೋನಾ, ಪೈಟರ್ ಫಿಶ್ ಸೇರಿದಂತೆ ಹಲವು ಮೀನುಗಳನ್ನು ರೈಲ್ವೆ ನಿಲ್ದಾಣದ ಕೂಲಿಗಳು ಎಗರಿಸಿದ್ದಾರೆ.
ಕೇವಲ ಇದೇ ಮೀನುಗಳನ್ನಲ್ಲದೆ ಹೈಪರ್ ಮಾರುಕಟ್ಟೆಗಳಿಗೆ ಬರುವ ಅಡಿಗೆಗೆ ಬಳಸುವ ಮೀನುಗಳನ್ನೂ ಈ ಕೂಲಿಗಳು ಕದಿಯುತ್ತಿದ್ದಾರೆ.
ಒಂದೊಂದು ಬಾಕ್ಸ್ ಗಳಿಂದ ಐದಾರು ಮೀನುಗಳನ್ನು ಕದಿಯುವ ಈ ಕೂಲಿಯಾಳುಗಳು ಮೀನಿನ ಸಂಬಂಧಪಟ್ಟ ವ್ಯಕ್ತಿಗಳು ವಿಚಾರಿಸಿದಲ್ಲಿ ಹಾರಿಕೆಯ ಉತ್ತರವನ್ನು ನೀಡುತ್ತಾರೆ.
ಈ ಬಗ್ಗೆ ರೈಲು ನಿಲ್ದಾಣದ ಸರಕು ನಿರ್ವಹಣಾ ಸಿಬ್ಬಂದಿಗಳನ್ನು ಪ್ರಶ್ನಿಸಿದರೂ ಇಂಥಹುದೇ ಉತ್ತರ ದೊರೆಯುತ್ತಿದೆ.
ರೈಲ್ವೆ ನಿಲ್ದಾಣದ ಕೂಲಿಯಾಳುಗಳು ಹಾಗೂ ಸರಕು ನಿರ್ವಹಣೆಯ ಸಿಬ್ಬಂದಿಗಳು ಜಂಟಿಯಾಗಿ ಈ ರೀತಿಯ ಕಾರ್ಯಾಚರಣೆ ನಡೆಸುತ್ತಿದ್ದಾರೆ ಎನ್ನುವ ಆರೋಪ ಕೇಳಿ ಬರುತ್ತಿದೆ.
ಪಾರ್ಸೆಲ್ ಬಾಕ್ಸ್ ಗಳಿಂದ ಕದ್ದ ಮೀನುಗಳನ್ನು ಈ ಎರಡೂ ಸಿಬ್ಬಂದಿಗಳು ಸೇರಿ ಹಂಚಿಕೊಳ್ಳುತ್ತಿದ್ದಾರೆ ಎನ್ನಲಾಗಿದೆ.