ಬರೆಯುವ ಸ್ಲೇಟ್ ಕಲಿಸಿಕೊಟ್ಟ ತಾರತಮ್ಯ..!!!
ಬರೆಯುವ ಸ್ಲೇಟ್ ಕಲಿಸಿಕೊಟ್ಟ ತಾರತಮ್ಯ..!!!
ಅಕ್ಷರವನ್ನು ಕಲಿಸಬೇಕಾಗಿದ್ದ ಸ್ಲೇಟು, ತಾರತಮ್ಯವನ್ನು ಕಲಿಸಿಕೊಟ್ಟಿತು.
ನಾನಾಗ ಎರಡನೇ ಕ್ಲಾಸಿನ ಹುಡುಗ.
ಗವೆರ್ಮೆಂಟಿನ ಪ್ಲಾನ್ ಪ್ರಕಾರ ಹಿಂದುಳಿದ ಮತ್ತು ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಮಾತ್ರ ಉಚಿತ ಸ್ಲೇಟ್ ವಿತರಣೆಗೆ ಮುಂದಾಗಿತ್ತು.
ನಮ್ಮ ಟೀಚರ್ ಹಾಜರಿ ಪುಸ್ತಕ ಮೂಲಕ ಹಿಂದುಳಿದ-ಅಲ್ಪಸಂಖ್ಯಾತ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿ ಸರಕಾರದಿಂದ ಬಂದಿದ್ದ ಇಬ್ಬರು ಪ್ರತಿನಿಧಿಗಳ ಮುಖಾಂತರ ಸ್ಲೇಟ್ ವಿತರಣೆ ಮಾಡಲಾರಂಭಿಸಿತು.
ನನ್ನಂಥಾ ಅನೇಕ ಹುಡುಗರಲ್ಲಿ ಮಣ್ಣಿನಿಂದ ಮಾಡಿದ್ದ ಕಪ್ಪು ಬಣ್ಣದ, ಬರೆದರೂ ಅಕ್ಷರ ಕಾಣಿಸಿದ ಸ್ಲೇಟುಗಳಿದ್ದವು.
ನಮಗೂ ಪಟ್ಟಿ ಇರುವ ಬಣ್ಣದ ದೊಡ್ಡ ಸ್ಲೇಟ್ ಹಿಡಿಯಬೇಕೆಂಬ ಆಸೆ ಇತ್ತು.
ಆದರೆ ಊಟಕ್ಕೂ ಪರದಾಡುವ ನಮಗೆ ದುಬಾರಿ ಸ್ಲೇಟ್ ಕೊಡಿಸುವುದು ಅಷ್ಟರಲ್ಲಿಯೇ ಇತ್ತು.
ನಮ್ಮ ಪುಟಾಣಿ ಮನಸ್ಸಿಗೆ ಕೆಲವರಿಗೆ ಮಾತ್ರ ಸ್ಲೇಟ್ ಕೊಡುವುದು ಒಂಥರಾ ವಿಚಿತ್ರ,
ಇನ್ನುಳಿದ ಹುಡುಗರ ಮೇಲೆ ಹೊಟ್ಟೆಕಿಚ್ಚಾಗುವಂತೆ ಮಾಡಿತ್ತು.
ನನ್ನ ಕ್ಲಾಸ್ಮೇಟ್ ಆಶ್ಪಖ್ ಎನ್ನುವ ಹುಡುಗ ಆ ಸ್ಲೇಟನ್ನು ನಮ್ಮಲ್ಲಿ ಎತ್ತಿತೋರಿಸಿ ಕಿಚಾಯಿಸುತ್ತಿದ್ದ.
ಇದನ್ನು ನೋಡಿ ನಾನು ಹಾಗೂ ನೀತೇಶ ಜಗಳಕ್ಕೆ ನಿಂತು ಮುಂದೊಂದು ದಿನ ನಮ್ಮದೆರಡು ಗ್ಯಾಂಗ್ ಸೃಷ್ಟಿಯಾಗಿತ್ತು.
ಹೀಗೆ ಸ್ಲೇಟ್ ವಿಷ್ಯದಲ್ಲಿ ಉಂಟಾದ ಗಲಾಟೆ ಬೇರೆ ವಿಷಯಕ್ಕೆ ತಿರುಗಿ ಆಟದ ಪಿರೇಡ್ನಲ್ಲಿ ಜಗಳವೇ ಆಡಿಕೊಂಡು ಅಂಗಿಚಡ್ಡಿಯನ್ನು ಮಣ್ಣಿನಲ್ಲಿ ಮುಳುಗಿಸಿಯೇ ಮನೆಗೆ ಬರುತ್ತಿದ್ದೆವು.
ಸ್ವಲ್ಪ ಸಮಯದ ನಂತರ ಸರಕಾರ ಹೆಣ್ಮಕ್ಕಳಿಗೆ ಶಿಕ್ಷಣ ಕೊಡಿಸಬೇಕೆಂದು ಹುಡುಗಿಯರಿಗೆ ಮಾತ್ರ ಉಚಿತ ಪಾಠ ಪುಸ್ತಕಗಳನ್ನು ವಿತರಿಸಲು ಆರಂಭಿಸಿತು.
ಇಲ್ಲವಾದರೆ ನಮಗಿಂತ ದೊಡ್ಡ ಪುಸ್ತಕವನ್ನು ಸೆಕೆಂಡ್ ಹ್ಯಾಂಡ್ನಲ್ಲಿ ಖರೀದಿಸುತ್ತಿದ್ದೆವು.
ಅದರಂತೆ ನನಗೆ ಸುರೇಶ ಪುಸ್ತಕವನ್ನು ನೀಟಾಗಿ ಇಟ್ಟುಕೊಂಡು ಕೊಡುತ್ತಿದ್ದ.
ನಾನದನ್ನು ನೀಟಾಗಿ ಇಟ್ಟುಕೊಂಡು ಪದ್ಮನಿಗೆ ಕೊಡುತ್ತಿದ್ದೆ. ಹೀಗೆ ಪುಸ್ತಕ ವರ್ಷದಿಂದ ವರ್ಷಕ್ಕೆ ಕೈಬದಲಾಗುತ್ತಾ ಹೋಗುತ್ತಿತ್ತು.
ಇಷ್ಟಕ್ಕೂ ಮುಗಿಯಲಿಲ್ಲ. ಅದೆಂಥದೋ ಸ್ಕೀಮಿನಲ್ಲಿ ಸರಕಾರ ಹಿಂದುಳಿದ ಹಾಗೂ ಅಲ್ಪಸಂಖ್ಯಾತ ಮಕ್ಕಳು ಶಾಲೆಗೆ ಬರುವಂತೆ ಮಾಡಲು ಅದೆಂಥದೋ ನಮೂನೆಯ ಸಜ್ಜೆ, ಅವಲಕ್ಕಿ, ಉಂಡೆದ ಪೊಡಿ ಒಂದು ಪ್ಯಾಕಿನಲ್ಲಿ ಕೊಡುತ್ತಿತ್ತು.
ಪಾಪ ನಮ್ಮ ಟೀಚರ್ಗಳಿಗೆ ಎಲ್ಲಾ ಮಕ್ಕಳ ಎದುರು ಕೊಡಲು ಬೇಸರವಾಗುತ್ತದೋ ಏನೋ.
ಅದಕ್ಕಾಗಿ ಮುಸ್ಲಿಂ ಹಾಗೂ ಹಿಂದುಳಿದ ವಿದ್ಯಾರ್ಥಿಗಳನ್ನು ನಿಲ್ಲಿಸಿ ನಮ್ಮನ್ನು ಕಳಿಸಿ ಗುಟ್ಟಾಗಿ ಕೊಟ್ಟು ಕಳಿಸುತ್ತಿದ್ದರು.
ಈ ವಿಷ್ಯ ನನಗೆ ಮೊದಲು ಗೊತ್ತಿರಲಿಲ್ಲ. ನನ್ನ ಟೀಚರ್ ಒಮ್ಮೆ ನನ್ನನ್ನು ಸಂಜೆ ನಿಲ್ಲುವಂತೆ ಹೇಳಿ ಈ ಸರಕಾರದಿಂದ ಅವರಿಗೆ ಕೊಡುವ ಹೆಚ್ಚುಳಿದಿದ್ದ ಈ ತಿನಿಸುಗಳನ್ನು ನನ್ನ ಬ್ಯಾಗಿಗೂ ತುರುಕಿಸಿ, ಯಾರಲ್ಲೂ ಹೇಳಬೇಡ ಎಂದು ಕಳಿಸಿದ್ದರು.
ಕಥೆ ಮುಂದುವರಿಯುತ್ತಾ ಹೋಗುತ್ತಿದೆ. ಒಮ್ಮೆ ಹುಡುಗಿಯರಿಗೆ ಮಾತ್ರ ಸಮವಸ್ತ್ರಗಳನ್ನು ಕೊಡಲಾರಂಭಿಸಿತ್ತು.
ಆಮೇಲೆ ಸರಕಾರಕ್ಕೂ ಬೇಸರವಾಯಿತೋ ಏನೋ.. ಆಮೇಲೆ ಎಲ್ಲರಿಗೂ ಉಚಿತ ಸಮವಸ್ತ್ರಗಳನ್ನು ವಿತರಿಸಲಾರಂಭಿಸಿತ್ತು.
ನಾನು ಎಂಟನೇ ಕ್ಲಾಸಲ್ಲಿದ್ದಾಗ ಬಿಸಿಯೂಟ ಆರಂಭವಾಯಿತು.
ನಮ್ಮದು ಹತ್ತನೇ ತರಗತಿಯವರೆಗಿನ ಶಾಲೆ. ಒಂದರಿಂದ ಏಳನೇ ತರಗತಿಯ ಮಕ್ಕಳಿಗೆ ಸರಕಾರದ ಲೆಕ್ಕದಲ್ಲಿ ಬಿಸಿಯೂಟ.
ಇದು ಆ ಕಾಲದಲ್ಲಿ ಭಾರೀ ಸದ್ದು ಮಾಡಿದ್ದ ವಿಷ್ಯ.
ಮಧ್ಯಾಹ್ನ 12.30 ಆದಾಗ ಬಿಸಿಯೂಟ ಬೇಯಿಸಿದ ಪರಿಮಳ ನಮ್ಮ ಮೂಗಿಗೆ ಬಡಿಯುತ್ತಿತ್ತು.
ಮಕ್ಕಳು ಬಟ್ಟಲು ಹಿಡಿದುಕೊಂಡು ಬಿಸಿ ಊಟ ಮಾಡಿ, ನಳ್ಳಿಯ ಹತ್ತಿರ ಗಲಾಟೆ ಮಾಡುವ ದೃಶ್ಯ ನಿತ್ಯವೂ ಕಾಣುತ್ತಿತ್ತು.
ನಾವೆಲ್ಲಾ ಬಿಸಿಯೂಟದ ಪರಿಮಳವನ್ನು ಆಘ್ರಾಣಿಸಿ ಮನೆಯಿಂದ ಕೊಂಡು ತಂದಿದ್ದ ಬುತ್ತಿಯ ಸಪ್ಪೆ ಊಟ ಮಾಡುತ್ತಿದ್ದೆವು.
ಊಟದ ಆಸೆಗಾಗಿ `ಒಂದು ಕ್ಲಾಸ್ ಫೈಲ್ ಆಗಿದ್ದರೆ ನಾವೂ ಬಿಸಿಯೂಟ ಮಾಡಬಹುದಿತ್ತು’ ಎಂದು ಹೇಳಿದ್ದು ಈಗಲೂ ನೆನಪಿದೆ.
ಅಂತೂ ನಾನು ಪ್ರೌಢ ಶಾಲೆ ಮುಗಿಸಿದ್ದೆ. ಸರಕಾರದ ತಾರತಮ್ಯ ಅಷ್ಟಕ್ಕೂ ನಿಲ್ಲಲಿಲ್ಲ.
`(ಒಬ್ಬ) ಅರೆರೆ ಯಾರಿದು ನಿಲ್ಲು ನಿಲ್ಲು… ಸೈಕಲ್ನಿಂದ ಎಲ್ಲಿಗೆ ಹೊರಟೆ.. (ಆಗ ಹುಡುಗಿ) ಇದು ಬಡವರ ಮನೆಯ ಹೆಣ್ಮಕ್ಕಳಿಗೆ ಸರಕಾರ ಕೊಡುಗೆ ಕೊಡುಗೆ…’ ಎಂದು ಸುಶ್ರಾವ್ಯವಾಗಿ ಹಾಡುವ ಜಾಹೀರಾತು ತುಂಬಾ ಫೇಮಸ್ ಆಗಿತ್ತು.
ಹೀಗೆ 8ನೇ ತರಗತಿಯ ಆಯ್ದ ಹಿಂದುಳಿದ ಮತ್ತು ಅಲ್ಪಸಂಖ್ಯಾತ ಮಕ್ಕಳಿಗೆ ಉಚಿತ ಸೈಕಲ್ ವಿತರಿಸಲಾರಂಭಿಸಿತ್ತು.
ಸ್ವಲ್ಪ ದಿನ ಕಳೆದ ಮೇಲೆ ಇಂಥದ್ದೇ ಹುಡುಗರಿಗೂ ಸೈಕಲ್ ಸಿಕ್ಕಿತು.
ಆ ಬಳಿಕ ಬಿಪಿಎಲ್ ಕಾರ್ಡ್ನ ಮಕ್ಕಳಿಗೂ ಸಿಕ್ಕಿತು. ಒಂದೆರಡು ವರ್ಷ ಸೈಕಲ್ ವಿತಣೆ ನಿಂತು, ಮತ್ತೆ ಆರಂಭಗೊಂಡು ಇದೀಗ 8ನೇ ತರಗತಿಯ ಎಲ್ಲಾ ಮಕ್ಕಳಿಗೆ ಸೈಕಲ್ ಸಿಗುತ್ತಿದೆ.
ಇದೀಗ ಲ್ಯಾಪ್ಟಾಪ್ ವಿಷಯದಲ್ಲಿ ಮಕ್ಕಳ ಜಾತಿ ಹುಡುಕುವ ಕೆಲಸ ನಡೆಯುತ್ತಿದೆ.
ಕಥೆಯ ರೋಚಕ ಘಟ್ಟ: ಮೊನ್ನೆ ನಮ್ಮ ಮನೆಯ ಹತ್ತಿರದ ತುಂಟ ಹುಡುಗರಲ್ಲಿ ಹೀಗೆಯೇ ಮಾತಿಗೆಂದು,
`ಏನ್ರೋ ಶಾಲೆಯಲ್ಲಿ ನಿಮ್ಮ ಪೆಟ್ಟು ಜೋರುಂಟೋ?’ ಎಂದು ಕೇಳಿದೆ.
ಆಗ ಒಬ್ಬ ಹುಡುಗ, `ಹೌದು ನಾನು ಎಲ್ಲರಿಗೂ ಹೊಡೆದು ಓಡಿಸ್ತೇನೆ…’ ಎಂದ.
`ಟೀಚರ್ ಹೊಡೆಯೋಲ್ವಾ?’ ಅಂದೆ.
`ಟೀಚರ್ ಮಕ್ಕಳಿಗೆ ಹೊಡೆಯಬಾರದು ಎಂದು ರೂಲ್ಸ್ ಇದೆ ಆದ್ದರಿಂದ ಯಾರೂ ಹೊಡೆಯೋಲ್ಲ ಎಂದು ಹೇಳಿದ್ದ.
ಈ ರೂಲ್ಸ್ ಮಕ್ಕಳಿಗೂ ಗೊತ್ತಾಗಿ ಬಿಟ್ಟಿತ್ತು.
ನೀವು ಪೆಟ್ಟು ಮಾಡುವುದು ಯಾಕೆ ಎಂದು ಕೇಳಿದೆ.
ಅದಕ್ಕೆ ಆ ಹುಡುಗ ಹೇಳಿದ್ದು ಕೇಳಿ ನನಗೆ ಶಾಖ್ ಆಯ್ತು.
ಹಿಂದುಳಿದ ಮತ್ತು ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಫ್ರೀ ಟೂರ್ ಇತ್ತು.
ನಮಗೆ ಸ್ವಲ್ಪ ಹಣ ಕೊಡಲಿತ್ತು. ಆದ್ರೆ ಮನೆಯಲ್ಲಿ ಹಣ ಕೊಡ್ಲಿಲ್ಲ.
ಅವರನ್ನು ಫ್ರೀ ಟೂರ್ ಇಟ್ಟು ನಮ್ಮಲ್ಲಿ ಹಣ ಕೇಳಿದ್ದಕ್ಕೆ ಟೂರ್ ಹೋದವರ ಜೊತೆ ನಮಗೆ ಗಲಾಟೆ ಆರಂಭವಾಗಿದೆ ಎಂದು ಹೇಳಿ ಹುಡುಗ ಓಡಿಹೋಗಿದ್ದ.
ಲ್ಯಾಪ್ಟಾಪ್, ಪುಸ್ತಕ, ಊಟ, ಸೈಕಲ್ ಎಲ್ಲಾ ವಿಷ್ಯದಲ್ಲೂ ಜಾತಿ-ಮತಗಳ ಮಧ್ಯೆ ಸರಕಾರವೇ ವಿಷಬೀಜ ಬಿತ್ತಿದರೆ ಮಕ್ಕಳ ಮನಸ್ಸಿಗೆ ಯಾವ ಪರಿಣಾಮ ಬೀಳಬಹುದೆಂದು ಯಾರೂ ಗಂಭೀರವಾಗಿ ಆಲೋಚಿಸಿಯೇ ಇಲ್ಲ.
ಸುಳ್ಳು ಇತಿಹಾಸವನ್ನು ಕಲಿಸುವ, ಮಕ್ಕಳಿಗೆ ನಾಸ್ತಿಕತೆಯನ್ನು ಬೋಧಿಸುವ ಪಠ್ಯ ಕ್ರಮ ಇರುವಾಗ ವಿತರಣೆ ವಿಷಯದಲ್ಲಿ ಮಕ್ಕಳ ಸೈಕಾಲಜಿಯನ್ನು ಅರ್ಥ ಮಾಡಿಕೊಳ್ಳುವ ಸೈಕಾಲಜಿಸ್ಟ್ ಯಾರೂ ಇಲ್ಲದೇ ಇರುವುದು ನಾವೆಲ್ಲಾ ದುಃಖ ಪಡಬೇಕಾದ ವಿಷ್ಯ.
ಹೀಗೆ ಅಕ್ಷರ ಕಲಿಸಬೇಕಾಗಿದ್ದ ಸ್ಲೇಟ್ ತಾರತಮ್ಯವನ್ನು ಕಲಿಸುತ್ತಿದೆ.
by :Girish malali