BANTWAL
ಪರಂಗಿಪೇಟೆಯಲ್ಲಿ ಹೊತ್ತಿ ಉರಿದ ಮೊಬೈಲ್
ಪರಂಗಿಪೇಟೆಯಲ್ಲಿ ಹೊತ್ತಿ ಉರಿದ ಮೊಬೈಲ್
ಮಂಗಳೂರು, ಎಪ್ರಿಲ್ 7 : ಇತ್ತೀಚೆಗೆ ಖರೀದಿಸಿದ ಮೊಬೈಲ್ ಫೋನೊಂದು ಹೊತ್ತಿ ಉರಿದ ಘಟನೆ ಮಂಗಳೂರು ಹೊರವಲಯದ ಪರಂಗಿಪೇಟೆಯ ಬಳಿ ನಡೆದಿದೆ.
ಶರೀಖ್ ಮಹಮ್ಮದ್ ಇಬ್ರಾಹಿಂ ಎಂಬವರು ಇಂದು ಬೆಳಿಗ್ಗೆ ಈ ಮೊಬೈಲನ್ನು ಕೈಯಲ್ಲಿ ಹಿಡಿದಿದ್ದ ಸಂದರ್ಭದಲ್ಲಿ ಏಕಾಏಕಿ ಮೊಬೈಲ್ ಒಳಗಿನಿಂದ ಶಬ್ದವೊಂದು ಬಂದಿತ್ತು.
ಇದರಿಂದ ಭಯಭೀತರಾಗಿದ್ದ ಶರೀಖ್ ಮೊಬೈಲನ್ನು ಮೇಜಿನ ಮೇಲೆ ಇಟ್ಟಿದ್ದಾರೆ. ತಕ್ಷಣವೇ ಮೊಬೈಲ್ ನಲ್ಲಿ ಬೆಂಕಿ ಕಾಣಿಸಿಕೊಂಡಿದೆ.
ಮೊಬೈಲ್ ಬ್ಯಾಕ್ಟರಿ ಸಂಪೂರ್ಣ ಹೊತ್ತಿ ಉರಿದಿದ್ದು, ಉಳಿದ ಬಿಡಿ ಭಾಗಗಳೂ ಸುಟ್ಟು ಕರಕಲಾಗಿದೆ. ಐವೂಮಿ ಎನ್ನುವ ಕಂಪನಿಗೆ ಸೇರಿದ ಮೊಬೈಲ್ ಇದಾಗಿದ್ದು, ಇದೇ ಜನವರಿ 19 ಈ ಮೊಬೈಲ್ ಅನ್-ಲೈನ್ ಮಾರುಕಟ್ಟೆ ಮೂಲಕ ಶಕೀಖ್ ಈ ಮೊಬೈಲನ್ನು ಖರೀದಿಸಿದ್ದರು.
ಮೊಬೈಲ್ ನಲ್ಲಿ ಬೆಂಕಿ ಹಚ್ಚಿಕೊಳ್ಳಲು ಕಾರಣವೇನು ಎನ್ನುವುದು ತಿಳಿದು ಬಂದಿಲ್ಲ. ಕರಾವಳಿ ಜಿಲ್ಲೆಗಳಾದ್ಯಂತ ಇತ್ತೀಚಿನ ದಿನಗಳಲ್ಲಿ ವಾತಾವರಣದ ಉಷ್ಣತೆ ಹೆಚ್ಚಾಗುತ್ತಿದ್ದು, ಈ ಕಾರಣಕ್ಕಾಗಿಯೇ ಮೊಬೈಲ್ ಹೊತ್ತಿಕೊಂಡಿರಬಹುದೇ ಎನ್ನುವ ಸಂಶಯವೂ ಕಾಡತೊಡಗಿದೆ.